ADVERTISEMENT

ಕೊರತೆ ನಡುವೆಯೂ ಗುಣಮಟ್ಟದ ಶಿಕ್ಷಣ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2017, 5:19 IST
Last Updated 15 ಮಾರ್ಚ್ 2017, 5:19 IST

ಭಾಲ್ಕಿ: ಗ್ರಾಮೀಣ ಭಾಗದ ವಿದ್ಯಾರ್ಥಿಗ ಳಿಗೆ ಉತ್ತಮ ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ನೇಳಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು ಶ್ರಮಿಸುತ್ತಿದ್ದಾರೆ.

ಶಾಲೆ ತಾಲ್ಲೂಕು ಕೇಂದ್ರದಿಂದ 18 ಕಿ.ಮೀ ಅಂತರದಲ್ಲಿದೆ.  ಶಾಲೆಯಲ್ಲಿ ಹಲವು ಸಮಸ್ಯೆಗಳಿವೆ. ಅದರ ನಡು ವೆಯೇ ಮಕ್ಕಳ ಪ್ರಗತಿಗೆ ಪೂರ ಕವಾಗಿರುವ ನಲಿ–ಕಲಿ ಯೋಜನೆಯ ಪರಿಣಾಮಕಾರಿ ಅನುಷ್ಠಾನ ಮಾಡ ಲಾಗಿದೆ. ಇದರಿಂದ ಮಕ್ಕಳು ಆಸಕ್ತಿ ಯಿಂದ ಶಾಲೆಯತ್ತ ಹೆಜ್ಜೆ ಹಾಕು ತ್ತಿದ್ದಾರೆ.

ಸಂತಸ, ಸ್ವ–ವೇಗ, ಬಹುವರ್ಗ, ಬಹುಹಂತದ ಕಲಿಕೆ, ಸ್ವಕಲಿಕೆ ಎಂಬ ಐದು ತತ್ವಗಳನ್ನು ಆಧಾರ ವಾಗಿಟ್ಟುಕೊಂಡು ಗುಣಾತ್ಮಕ ಶಿಕ್ಷಣ ಎಂಬ ಮೂಲ ತಳಹದಿಯ ಮೇಲೆ ನಲಿ–ಕಲಿ ಯೋಜನೆ ರೂಪಿಸಲಾಗಿದೆ. ಚಟುವಟಿಕೆ ಆಧಾರಿತವಾಗಿ, ಮಕ್ಕಳ ಕಲಿಕಾ ವೇಗಕ್ಕನುಗುಣವಾಗಿ ಕಲಿಸಲು ಇದು ಸಹಕಾರಿಯಾಗಿದೆ ಎಂದು ಶಿಕ್ಷಕ ವಿಜಯಕುಮಾರ, ಅಂಬಣ್ಣಾ ಜಮಾದಾರ ಹೇಳುತ್ತಾರೆ.

ADVERTISEMENT

ಶಾಲೆಯಲ್ಲಿ ಒಂದರಿಂದ 8ನೇ ವರ್ಗದವರೆಗೆ ಒಟ್ಟು 123 ಮಕ್ಕಳಿದ್ದಾರೆ. ನಲಿ–ಕಲಿಯಲ್ಲಿ 43 ಮಕ್ಕಳು ಇದ್ದಾರೆ. ಶಾಲೆಯಲ್ಲಿ ಮಕ್ಕಳ ಜ್ಞಾನಾರ್ಜನೆಗೆ ಅಗತ್ಯವಾಗಿರುವ ಗ್ರಂಥಾಲಯವಿದೆ. ಮಕ್ಕಳಿಗೆ ವಿಜ್ಞಾನ ಪಾಠಗಳನ್ನು ಪ್ರಯೋಗದ ಮೂಲ ತಿಳಿಸಿದರೆ ಮಾತ್ರ ಅರ್ಥವಾಗುತ್ತದೆ. ಹೀಗಾಗಿ ಪ್ರಯೋಗಾಲಯದ ವ್ಯವಸ್ಥೆ ಮಾಡಲಾಗಿದೆ.

ಅಂಗವಿಕಲ ಮತ್ತು ಸಾಮಾನ್ಯ ವಿದ್ಯಾರ್ಥಿಗಳ ಬಳಕೆಗಾಗಿ ಸುಸಜ್ಜಿತ ಶೌಚಾಲಯ ನಿರ್ಮಿಸಲಾಗಿದೆ. ಸಮರ್ಪಕ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಬೆಳೆಸಲು ಕಲೆ ಮತ್ತು ಸಾಂಸ್ಕೃತಿಕ ಸಂಘ, ಶಾಲಾ ಮಂತ್ರಿ ಮಂಡಲ, ಮಕ್ಕಳ ಹಕ್ಕುಗಳ ಸಂಘ, ಮಕ್ಕಳ ಸುರಕ್ಷಾ ಸಮಿತಿ ಸೇರಿದಂತೆ ಇತರ ಸಂಘಗಳನ್ನು ರಚಿಸಲಾಗಿದೆ ಎಂದು ವಿವರಿಸುತ್ತಾರೆ ಮುಖ್ಯಶಿಕ್ಷಕ ರಾಜಕುಮಾರ ಡಾವರಗಾಂವೆ.

ಎಲ್ಲ ಶಿಕ್ಷಕರ ಪ್ರಯತ್ನದಿಂದ ವಿದ್ಯಾರ್ಥಿಗಳು ಕ್ರೀಡೆ, ಪ್ರತಿಭಾ ಕಾರಂಜಿಯ ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಶಾಲೆಯಲ್ಲಿ ಈ ಮೊದಲು ನಿರ್ಮಿಸಲಾಗಿರುವ ಎರಡು ಕೋಣೆಗಳ ಮೇಲ್ಛಾವಣಿ ಶಿಥಿಲಗೊಂಡಿದೆ. ಅದನ್ನು ದುರಸ್ತಿ ಮಾಡಿವಂತೆ ಶಿಕ್ಷಣ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಆದರೆ, ಈವರೆಗೆ ಅದನ್ನು ದುರಸ್ತಿ ಮಾಡಿಲ್ಲ. ಶಾಲೆಗೆ ಗೇಟ್‌ ಇಲ್ಲದೆ ಇರುವುದರಿಂದ ಶಾಲಾ ಆವರಣದಲ್ಲಿ ಗಿಡಗಳನ್ನು ಬೆಳೆಸಲು ಸಾಧ್ಯ ಆಗುತ್ತಿಲ್ಲ. ಆಟದ ಮೈದಾನ ಇಲ್ಲದಿರುವುದರಿಂದ ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗೆ ಅಡ್ಡಿಯಾಗಿದೆ ಎಂದು ಶಿಕ್ಷಕರು ಬೇಸರ ವ್ಯಕ್ತಪಡಿಸಿದರು.

ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು. ಆಗ ಇನ್ನೂ ಉತ್ಸಾಹದಿಂದ ಕಾರ್ಯ ನಿರ್ವಹಿಸಬಹುದು ಎನ್ನುತ್ತಾರೆ ಶಿಕ್ಷಕರು.

***

ಮಕ್ಕಳ ಸರ್ವತೋಮುಖ ಏಳಿಗೆಗೆ ಎಲ್ಲ ಶಿಕ್ಷಕರು ಶ್ರಮಿಸುತ್ತಿದ್ದಾರೆ. ಸಂಬಂಧ ಪಟ್ಟವರು ಶಾಲೆಯ ಗೇಟ್‌, ಆಟದ ಮೈದಾನದ ಕೊರತೆ ನಿವಾರಿಸಬೇಕು
-ರಾಜಕುಮಾರ ಡಾವರಗಾಂವೆ, ಮುಖ್ಯ ಶಿಕ್ಷಕ

**

–ಬಸವರಾಜ ಎಸ್.ಪ್ರಭಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.