ADVERTISEMENT

‘ಗ್ರಾಮ ಜ್ಯೋತಿ ಯೋಜನೆಗೆ ₹15 ಕೋಟಿ’

ಶೀಘ್ರ ಕಾಮಗಾರಿ ಆರಂಭಿಸಲು ಶಾಸಕ ಸೂಚನೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2017, 6:02 IST
Last Updated 28 ಡಿಸೆಂಬರ್ 2017, 6:02 IST

ಔರಾದ್: ‘ದೀನ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಡಿ ತಾಲ್ಲೂಕಿಗೆ ₹15 ಕೋಟಿ ಮಂಜೂರಾಗಿದೆ’ ಎಂದು ಶಾಸಕ ಪ್ರಭು ಚವಾಣ್ ಹೇಳಿದರು.

ತಾಲ್ಲೂಕಿನ ಹಂಗರಗಾ ಗ್ರಾಮದಲ್ಲಿ ಬುಧವಾರ ನಡೆದ ಗ್ರಾಮ ಸಂಚಾರದ ವೇಳೆ ಮಾತನಾಡಿದ ಅವರು ‘ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಭಾಗವಾಗಿ ದೇಶದ ಎಲ್ಲ ಹಳ್ಳಿಗಳಿಗೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸಲು ಮುಂದಾಗಿದೆ. ಈ ಯೋಜನೆಯಡಿ ಇನ್ನು ಮುಂದೆ ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿ ಹೊಸ ವಿದ್ಯುತ್ ಕಂಬ ಮತ್ತು ತಂತಿ ಅಳವಡಿಸಲಾಗುವುದು’ ಎಂದು ತಿಳಿಸಿದರು.

‘ಔರಾದ್, ಕಮಲನಗರ ಮತ್ತು ಸಂತಪುರ ಪಟ್ಟಣಗಳ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಲಾಗಿದೆ. ಇಲ್ಲಿ ಕೇಬಲ್ ರಹಿತ ವಿದ್ಯುತ್ ವ್ಯವಸ್ಥೆ ಜಾರಿಗೆ ಬರಲಿದೆ’ ಎಂದು ಹೇಳಿದರು.

ADVERTISEMENT

‘ಮೊದಲು ಕಮಲನಗರ ತಾಲ್ಲೂಕು ಘೋಷಣೆ ಮಾಡಿದಾಗ ಬೊಂತಿ ಪಂಚಾಯಿತಿಯಲ್ಲಿ ಬರುವ ಹಂಗರಗಾ ಸೇರಿದಂತೆ ಹಲವು ಊರುಗಳು ಔರಾದ್ ತಾಲ್ಲೂಕಿನಲ್ಲಿ ಇದ್ದವು. ಆದರೆ ನಂತರ ಈ ಊರುಗಳು ಕಮಲನಗರ ತಾಲ್ಲೂಕಿಗೆ ಸೇರಿಸಲಾಗಿದೆ’ ಎಂದು ಹಂಗರಗಾ ಗ್ರಾಮಸ್ಥರು ಶಾಸಕರ ಗಮನ ಸೆಳೆದರು.

‘ಔರಾದ್ ತಾಲ್ಲೂಕು ಕೇಂದ್ರಕ್ಕೆ ಸಮೀಪ ಇರುವ ಕೆಲ ಊರುಗಳು ಕಮಲನಗರ ತಾಲ್ಲೂಕಿಗೆ ಸೇರಿಸಿರುವುದು ತಪ್ಪಾಗಿದೆ. ಈ ಕುರಿತು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿ, ಈ ಊರುಗಳು ಔರಾದ್ ತಾಲ್ಲೂಕಿನಲ್ಲಿ ಉಳಿಸಿಕೊಳ್ಳುವಂತೆ ಮನವರಿಕೆ ಮಾಡಿ
ಕೊಡಲಾಗಿದೆ’ ಎಂದು ತಿಳಿಸಿದರು.

ಇದಕ್ಕೂ ಮುನ್ನ ಶಾಸಕರು ದಾಬಕಾ (ಸಿ) ಗ್ರಾಮಕ್ಕೆ ಭೇಟಿ ನೀಡಿ, ಎಸ್ಸಿ ಭವನ ಮತ್ತು ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.

ಕಾಮಗಾರಿ ಗುಣಮಟ್ಟದಿಂದ ಮತ್ತು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದರು.

‘ತಹಶೀಲ್ದಾರ್ ಕಚೇರಿಯಲ್ಲಿ ಸರ್ಕಾರಿ ಕೆಲಸ ವಿಳಂಬವಾಗುತ್ತಿದೆ. ಕೆಲ ಕಡೆ ಹಣ ಕೊಟ್ಟರೆ ಮಾತ್ರ ಕೆಲಸ ಆಗುತ್ತಿದೆ’ ಎಂದು ಲಿಂಗಿ, ಸಾವರಗಾಂವ್ ಸೇರಿದಂತೆ ಕೆಲ ಗ್ರಾಮಸ್ಥರು ಆರೋಪಿಸಿದರು.

‘ತಹಶೀಲ್ದಾರ್ ಕಚೇರಿಯಲ್ಲಿ ಜನರಿಗೆ ಸಮಸ್ಯೆಯಾಗುತ್ತಿರುವುದು ತಮ್ಮ ಗಮನಕ್ಕೂ ಬಂದಿದೆ. ಪಹಣಿ ಮತ್ತು ಖಾತಾ ನಕಲು ವಿತರಣೆಯಲ್ಲೂ ರೈತರಿಗೆ ತೊಂದರೆ ಮಾಡಲಾಗುತ್ತಿದೆ. ಜನರ ಬೇಡಿಕೆ ಗಂಭೀರವಾಗಿ ಪರಿಗಣಿಸಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಸ್ಥಳದಲ್ಲಿದ್ದ ತಹಶೀಲ್ದಾರ್ ಎಂ. ಚಂದ್ರಶೇಖರ ಅವರಿಗೆ ಸೂಚಿಸಿದರು.

ಸಾಕಷ್ಟು ಊರುಗಳ ಜನ ಸ್ಮಶಾನ ಭೂಮಿ ಸಮಸ್ಯೆ ಹೇಳುತ್ತಿದ್ದಾರೆ. ತಾಲ್ಲೂಕು ಮಟ್ಟದಲ್ಲಿ ಎಲ್ಲ ಸಮುದಾಯದ ಜನರನ್ನು ಕರೆಸಿ ಸ್ಮಶಾನ ಭೂಮಿ ಸಮಸ್ಯೆ ನಿವಾರಣೆ ಮಾಡುವಂತೆಯೂ’ಸೂಚಿಸಿದರು. ತಾಲ್ಲೂಕು ಪಂಚಾಯಿತಿ ಇಒ ಜಗನ್ನಾಥ ಮೂರ್ತಿ ಇದ್ದರು.

***

ಈ ಯೋಜನೆಯಡಿ ತಾಲ್ಲೂಕಿನ ಮೂರು ಪಟ್ಟಣ ಹಾಗೂ ಕೆಲ ಗ್ರಾಮಗಳಲ್ಲಿ ನಿರಂತರ ವಿದ್ಯುತ್ ಕೊಡುವ ಕಾಮಗಾರಿ ಶೀಘ್ರ ಆರಂಭವಾಗಲಿದೆ
–ವಿಜಯಕುಮಾರ ಪಂಚಾಳ, ಜೆಸ್ಕಾಎಂಜಿನಿಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.