ADVERTISEMENT

ಚಿಕ್ಕ ಊರಿನ ಚೆಂದದ ಸರ್ಕಾರಿ ಪ್ರಾಥಮಿಕ ಶಾಲೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2014, 8:50 IST
Last Updated 30 ಜುಲೈ 2014, 8:50 IST

ಬಸವಕಲ್ಯಾಣ: ತಾಲ್ಲೂಕಿನ ಧಾಮುರಿ, 600 ಜನಸಂಖ್ಯೆಯ ಚಿಕ್ಕ ಗ್ರಾಮ. ಇಲ್ಲಿ ನಾಲ್ಕೈದು ದೊಡ್ಡ ಹಳೆಯ ಮನೆಗಳು ಬಿಟ್ಟರೆ ಬಹುತೇಕ ಮನೆಗಳು ತಗಡಿನ ಛಾವಣಿಯ ಚಿಕ್ಕ ಮನೆಗಳಿವೆ. ಇಂಥಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಸುಂದರ ಕಟ್ಟಡವಿದ್ದು, ಊರಿನ ಸೊಬಗನ್ನು ಹೆಚ್ಚಿಸಿದೆ.

ಆವರಣ ಗೋಡೆ, ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ ಇಲ್ಲಿದೆ. ಎದುರಿಗೆ ಗಿಡ ಮರಗಳಿವೆ. ಕೈ ತೋಟ  ಹಸಿರಿನಿಂದ ಕಂಗೊಳಿಸುತ್ತಿದೆ.

ಕ್ರೀಡೆ, ಕಲಿಕೆ ಮತ್ತು ಇತರೆ ಚಟುವಟಿಕೆಗಳಲ್ಲಿಯೂ ಈ ಶಾಲೆ ಉತ್ತಮ ಸಾಧನೆ ತೋರಿದೆ. ಅದಕ್ಕಾಗಿ ಕಳೆದ ಸಾಲಿನಲ್ಲಿ ಜಿಲ್ಲಾ ಪಂಚಾಯಿತಿ, ಶಾಲೆಗೆ ₨10 ಸಾವಿರ ವಿಶೇಷ ಅನುದಾನ ನೀಡಿ ಪ್ರೋತ್ಸಾಹಿಸಿದೆ.

‘ಪಕ್ಕದ ಮಹಾರಾಷ್ಟ್ರದ ಗಡಿ ಗ್ರಾಮದಿಂದ 2 ಕಿಲೋ ಮೀಟರ್ ಅಂತರದಲ್ಲಿದೆ. ಮೊದಲು ಇಲ್ಲಿನ ಶಾಲೆಯಲ್ಲಿ ಶಿಕ್ಷಕರ ಕೊರತೆ ಇತ್ತು. ಇತರೆ ಸೌಲಭ್ಯಗಳೂ ಇರಲಿಲ್ಲ. ಆದ್ದರಿಂದ ಇಲ್ಲಿನ ಮಕ್ಕಳು ಶಿಕ್ಷಣಕ್ಕಾಗಿ ಮಹಾರಾಷ್ಟ್ರದ ಗ್ರಾಮಗಳ ಶಾಲೆಗಳಿಗೆ ಹೋಗುತಿದ್ದರು. ಆದರೆ, ಈಗ ಇಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ಇರುವುದರಿಂದ ಗ್ರಾಮದ ಎಲ್ಲ ಮಕ್ಕಳು ಇಲ್ಲಿಯೇ ಕಲಿಯುತ್ತಿದ್ದಾರೆ’ ಎಂದು ಹಿರಿಯರಾದ ಶ್ರೀಮಂತ ಪಾಟೀಲ ಮತ್ತು ಶಾಲಾ ಸುಧಾರಣಾ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ದಶರಥ ಜಾಧವ್‌ ಹೆಮ್ಮೆಯಿಂದ ಹೇಳುತ್ತಾರೆ.

ಐದಾರು ವರ್ಷಗಳ ಹಿಂದೆ ಒಬ್ಬರೇ ಶಿಕ್ಷಕರಿದ್ದಾಗ ಪರಿಸ್ಥಿತಿ ಹದಗೆಟ್ಟಿತ್ತು. ನಂತರ ಮುಖ್ಯಶಿಕ್ಷಕ ಸೇರಿದಂತೆ ಮೂವರು ಕಾಯಂ ಶಿಕ್ಷಕರು ಮತ್ತು ಇಬ್ಬರು ಅತಿಥಿ ಶಿಕ್ಷಕರು ಬಂದ ನಂತರ ಶಾಲೆಯ ಪರಿಸ್ಥಿತಿ ಸುಧಾರಿಸಿದೆ. ಶಾಲಾ ಸುಧಾರಣೆಗೆ ಬಿಡುಗಡೆಯಾದ ಹಣವನ್ನು  ಸಮಪರ್ಕವಾಗಿ ಬಳಿಸಿದ್ದರಿಂದ ಮೂಲ ಸೌಲಭ್ಯಗಳ ಕೊರತೆ ನೀಗಿದೆ. ಗ್ರಾಮದ ರಸ್ತೆ ಸರಿಯಿಲ್ಲವೆಂದು ಗ್ರಾಮಸ್ಥರು ಒಂದು ಬಾರಿ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಿದ್ದರು. ಈಗ ರಸ್ತೆಯೂ ಸುಧಾರಣೆಯಾಗಿದೆ.

ಈ ಶಾಲೆಯ ಮಕ್ಕಳು ವಿವಿಧ ಆಟಗಳಲ್ಲಿಯೂ ಪ್ರೌಢಿಮೆ ಮೆರೆದಿದ್ದು ಹೋಬಳಿ ಮತ್ತು ತಾಲ್ಲೂಕು ಮಟ್ಟದ ಕ್ರೀಡೆಗಳಲ್ಲಿ ಮಿಂಚಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಕಾರಣ ಎನ್.ಪಿ.ಜಿ.ಇ.ಎಲ್. ಯೋಜನೆಯಲ್ಲಿ ಕ್ಲಸ್ಟರ್ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಆಯೋಜಿಸುವ ಅವಕಾಶ ಈ ಶಾಲೆಗೆ ಎರಡು ಸಲ ದೊರೆತಿತ್ತು ಎಂದು ಮುಖ್ಯಶಿಕ್ಷಕ ಗಿರಿಧರ ಧಾನೂರೆ ತಿಳಿಸಿದ್ದಾರೆ.

‘ಇದು ಮರಾಠಿ ಮಾಧ್ಯಮದ ಶಾಲೆ ಆಗಿದ್ದರೂ ಶಿಕ್ಷಕರ ಪರಿಶ್ರಮದಿಂದ ಶಾಲೆಯಲ್ಲಿ ಕನ್ನಡಮಯ ವಾತಾವರಣ ನಿರ್ಮಾಣ­ವಾಗಿದೆ. ಕನ್ನಡಪರ ಚಟುವಟಿಕೆ­ಗಳಿಗೆ ಹೆಚ್ಚಿನ ಮಹತ್ವ ಕೊಡಲಾಗುತ್ತಿದೆ. ಈ ಗ್ರಾಮದಲ್ಲಿ ಎಲ್ಲರೂ ಪರಿಶಿಷ್ಟ ಜಾತಿಯವರು ವಾಸಿಸುವುದರಿಂದ ಸರ್ಕಾರ ಈ ಶಾಲೆಗೆ ಇನ್ನಷ್ಟು ಸೌಲಭ್ಯ ಒದಗಿಸಬೇಕು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಕೇಶವರಾವ ಜಾಧವ್ ಅವರ ಆಗ್ರಹ.

ಶೈಕ್ಷಣಿಕ ಅಂಗಳ

‘ಪ್ರಗತಿ ಶಾಲೆ’
ಇದು ಸಮಸ್ಯೆ ಇಲ್ಲದ ಶಾಲೆ. ಶಿಕ್ಷಕರ ಪರಿಶ್ರಮದಿಂದ ಇಲ್ಲಿ ಪ್ರಗತಿಯಾಗಿದೆ. ನಾನು ಇಲ್ಲಿಗೆ ಭೇಟಿ ನೀಡಿದಾಗ ಗ್ರಾಮಸ್ಥರು ಶಾಲೆಯಲ್ಲಿನ ಚಟುವಟಿಕೆಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
–ಸಂಜಯಕುಮಾರ ಕಾಂಗೆ, ಸಮನ್ವಯಾಧಿಕಾರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಬಸವಕಲ್ಯಾಣ
 

‘ಗ್ರಾಮಸ್ಥರ ಸಹಕಾರದಿಂದ ಸುಧಾರಣೆ’
ಗ್ರಾಮಸ್ಥರ ಸಹಕಾರದಿಂದ ಶಾಲೆಯ ಸುಧಾರಣೆ ನಡೆದಿದೆ. ಸರ್ಕಾರದ ಯೋಜನೆಗಳ ಸದ್ಬಳಕೆಯಾಗಿದೆ. ಮಕ್ಕಳು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ತೋರುವಂತೆ ಪ್ರಯತ್ನಿಸಲಾಗುವುದು.
– ಗಿರಿಧರ ಧಾನೂರೆ, ಮುಖ್ಯಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT