ADVERTISEMENT

ದಡಾರ, ರುಬೆಲ್ಲಾ ಸಾಂಕ್ರಾಮಿಕ ಕಾಯಿಲೆ

ಬೀದರ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಜಬ್ಬಾರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 6:53 IST
Last Updated 31 ಜನವರಿ 2017, 6:53 IST
ಬೀದರ್‌ನ ಡಿಎಚ್‌ಒ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ದಡಾರ ಮತ್ತು ರುಬೆಲ್ಲಾ ಲಸಿಕೆ ಅಭಿಯಾನದ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ  ಪ್ರತಿಜ್ಞಾವಿಧಿ ಬೋಧಿಸಲಾಯಿತು
ಬೀದರ್‌ನ ಡಿಎಚ್‌ಒ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ದಡಾರ ಮತ್ತು ರುಬೆಲ್ಲಾ ಲಸಿಕೆ ಅಭಿಯಾನದ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಪ್ರತಿಜ್ಞಾವಿಧಿ ಬೋಧಿಸಲಾಯಿತು   
ಬೀದರ್: ದಡಾರ ಮತ್ತು ರುಬೆಲ್ಲಾ ಸಾಂಕ್ರಾಮಿಕ ಕಾಯಿಲೆಗಳಾಗಿವೆ. ಈ ರೋಗಗಳಿಂದ ಬಳಲುತ್ತಿರುವವರು ಮಾರಣಾಂತಿಕ ಕಾಯಿಲೆಗಳಿಗೂ ತುತ್ತಾಗುವ ಸಾಧ್ಯತೆ ಇರುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಎ. ಜಬ್ಬಾರ್ ತಿಳಿಸಿದರು.
 
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿ ಸಭಾಂಗಣದಲ್ಲಿ ಸೋಮವಾರ ದಡಾರ ಮತ್ತು ರುಬೆಲ್ಲಾ ಲಸಿಕೆ ಅಭಿಯಾನ ಕುರಿತು ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. 
 
ದಡಾರ ಮತ್ತು ರುಬೆಲ್ಲಾ ಸೋಂಕಿನಿಂದ ಬರುತ್ತವೆ.  ದಡಾರ, ಕೆಮ್ಮು ಮತ್ತು ಸೀನುವುದರ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡಿದರೆ, ರುಬೆಲ್ಲಾದ ಸೋಂಕು ಗಾಳಿ ಮೂಲಕ ದೇಹದ ಒಳಗೆ ಸೇರಿಕೊಳ್ಳುತ್ತದೆ. 
 
ಇವು 15 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ ಎಂದು ಹೇಳಿದರು.
 
ವಿಪರೀತ ಜ್ವರ, ಕೆಮ್ಮು, ನೆಗಡಿ ಮತ್ತು ಕೆಂಗಣ್ಣು ದಡಾರದ ಮುಖ್ಯ ಲಕ್ಷಣಗಳಾಗಿವೆ. ದಡಾರದಿಂದ ಭಾರತದಲ್ಲಿ ಪ್ರತಿ ವರ್ಷ 49,200 ಮಕ್ಕಳು ಸಾವಿಗೀಡಾಗುತ್ತಿದ್ದಾರೆ. 
 
ಕಡಿಮೆ ರೋಗ ನಿರೋಧಕ ಶಕ್ತಿ ಇರುವವರು, ಅಪೌಷ್ಟಿಕ  ಮತ್ತು ಕಡಿಮೆ ವಿಟಮಿನ್‌ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳು ಈ ರೋಗಕ್ಕೆ ಹೆಚ್ಚಾಗಿ ತುತ್ತಾಗುತ್ತಿದ್ದಾರೆ ಎಂದು ತಿಳಿಸಿದರು. 
 
ಗರ್ಭಿಣಿಯರಲ್ಲಿ ರುಬೆಲ್ಲಾ ಕಾಣಿಸಿಕೊಂಡರೆ ಸೋಂಕು ಭ್ರೂಣಕ್ಕೆ ಸೇರಿಕೊಳ್ಳುವ ಸಾಧ್ಯತೆ ಇರುತ್ತದೆ. ಮುಂಜಾಗ್ರತಾ ಕ್ರಮ ವಹಿಸದಿದ್ದರೆ ಮಗುವಿಗೆ ಮಿದುಳು ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ ಎಂದರು.
 
ದಡಾರ ಮತ್ತು ರುಬೆಲ್ಲಾ ರೋಗ ತಡೆಗಟ್ಟುವ ಉದ್ದೇಶದಿಂದ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ.  ಅಭಿಯಾನದ ಸಂದರ್ಭದಲ್ಲಿ 9 ತಿಂಗಳಿಂದ 15 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಉಚಿತ ಲಸಿಕೆ ನೀಡಲಾಗುವುದು. ಈ ಹಿಂದೆ ರೋಗಕ್ಕೆ ತುತ್ತಾಗಿ  ಲಸಿಕೆ ಹಾಕಿಸಿಕೊಂಡವರೂ ಈಗ ಮತ್ತೆ ಲಸಿಕೆ ಹಾಕಿಸಿಕೊಳ್ಳಬಹುದು ಎಂದು ಹೇಳಿದರು.
 
ಕಲಬುರ್ಗಿಯ ಎಸ್‌.ಎಂ.ಒ ಡಾ. ಅನಿಲ ತಾಳಿಕೋಟೆ ವಿಶೇಷ ಉಪನ್ಯಾಸ ನೀಡಿದರು. ಡಾ. ಸಿ. ಆನಂದರಾವ್‌, ಡಾ. ರವೀಂದ್ರ ಸಿರ್ಸಗೆ, ಡಾ. ಅನಿಲ ಚಿಂತಾಮಣಿ, ಮಾರ್ಥಂಡ ಕಾಶೆಂಪುರಕರ್‌ ಉಪಸ್ಥಿತರಿದ್ದರು.
 
**
ಗರ್ಭಿಣಿಯರಲ್ಲಿ ರುಬೆಲ್ಲಾ ಲಕ್ಷಣ ಕಂಡು ಬಂದರೆ ತಕ್ಷಣ ಚಿಕಿತ್ಸೆ ಒದಗಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಮಗುವಿನ ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆ ಹೆಚ್ಚು.
-ಡಾ. ಎಂ.ಎ. ಜಬ್ಬಾರ್
ಡಿಎಚ್‌ಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.