ADVERTISEMENT

‘ದಲಿತರ ಉದ್ಧಾರ ದಲಿತರಿಂದಲೇ ಸಾಧ್ಯ’

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2017, 6:24 IST
Last Updated 28 ಆಗಸ್ಟ್ 2017, 6:24 IST
ಬೀದರ್‌ನಲ್ಲಿ ಭಾನುವಾರ ನಡೆದ ಸಾಹಿತ್ಯ ಸಂಸ್ಕೃತಿ ಚಿಂತನೆ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಕಾಶೀನಾಥರೆಡ್ಡಿ ಮಾತನಾಡಿದರು
ಬೀದರ್‌ನಲ್ಲಿ ಭಾನುವಾರ ನಡೆದ ಸಾಹಿತ್ಯ ಸಂಸ್ಕೃತಿ ಚಿಂತನೆ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಕಾಶೀನಾಥರೆಡ್ಡಿ ಮಾತನಾಡಿದರು   

ಬೀದರ್: ‘ದಲಿತರ ಉದ್ಧಾರ ದಲಿತರಿಂದಲೇ ಸಾಧ್ಯ’ ಎಂದು ಸಾಹಿತಿ ಕಾಶೀನಾಥರೆಡ್ಡಿ ತಿಳಿಸಿದರು. ಪ್ರಭುರಾವ್‌ ಕಂಬಳಿವಾಲೆ ಕನ್ನಡ ಸೇವಾ ಪ್ರತಿಷ್ಠಾನವು ನಗರದ ಸರಸ್ವತಿ ವಿದ್ಯಾ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಸಾಹಿತ್ಯ ಸಂಸ್ಕೃತಿ ಚಿಂತನೆ ಕಾರ್ಯಕ್ರಮದಲ್ಲಿ ಯುವ ಬರಹಗಾರ ಪೀರಪ್ಪ ಬಿ. ಸಜ್ಜನ ಅವರ ಬದುಕು ಬರಹ ಕುರಿತು ಉಪನ್ಯಾಸ ನೀಡಿದರು.

‘ಜಾತಿಯಿಂದ ಯಾರನ್ನೂ ದಲಿತ ಎಂದು ಪರಿಗಣಿಸಿದೆ, ಯಾವುದೇ ಮೇಲ್ವರ್ಗದ ವ್ಯಕ್ತಿ ತುಳಿತಕ್ಕೊಳಪಟ್ಟರೆ ಆತನನ್ನು ದಲಿತ ಎಂದು ಕರೆಯಬೇಕೆಂದು ಡಾ. ಬಾಬಾಸಾಹೇಬ ಅಂಬೇಡ್ಕರ್ ಹೇಳಿದ್ದಾರೆ’ ಎಂದು ತಿಳಿಸಿದರು.

‘ಯುವ ಬರಹರಾಗ ಪೀರಪ್ಪ ಸಜ್ಜನ ಅವರು ಬರೆದಿರುವ ಬೀದರ್‌ ಜಿಲ್ಲೆಯ ದಲಿತ ಸಾಹಿತ್ಯ ಎಂಬ ಸಂಶೋಧನ  ಕೃತಿಯು ದಲಿತ ಸಾಹಿತ್ಯದ ಮೇಲೆ ಬೆಳಕು ಚೆಲ್ಲುತ್ತದೆ. ದಲಿತ ಸಾಹಿತ್ಯದ ಸಮಗ್ರವಾದ ಸಂವಾದಗಳನ್ನು, ಅದರ ಒಳನೋಟಗಳನ್ನು ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಗುರುತಿಸಿದ್ದಾರೆ’ ಎಂದರು.

ADVERTISEMENT

‘ಸವರ್ಣೀಯರು ದಲಿತರ ಮೇಲೆ ಶೋಷಣೆಯ ಆಯಾಮಗಳನ್ನು ಬೇರೆ ಬೇರೆ ರೀತಿಯಲ್ಲಿ ಹಾಗೂ ಗುಪ್ತವಾಗಿ ಪೋಷಿಸಿಕೊಂಡು ಬರುತ್ತಿದ್ದಾರೆ. ದಲಿತರು ಕೂಡ ಸಾಮಾಜಿಕ ಹಾಗೂ ಆರ್ಥಿಕವಾಗಿ ಸಮಾನತೆ ಹೊಂದಿದ್ದಾಗ ಮಾತ್ರ ಅವರು ಶೋಷಣೆಗಳಿಂದ ಮುಕ್ತರಾಗಲು ಸಾಧ್ಯವಿದೆ’ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯೆ ಡಾ.ಜಯದೇವಿ ಗಾಯಕವಾಡ ತಿಳಿಸಿದರು.

ಪ್ರಭುರಾವ್‌ ಕಂಬಳಿವಾಲೆ ಕನ್ನಡ ಸೇವಾ ಪ್ರತಿಷ್ಠಾನದ ಅಧ್ಯಕ್ಷ ನಾಗಶೆಟ್ಟಿ ಧರಂಪುರ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಶಿವಕುಮಾರ ಕಟ್ಟೆ, ಶಂಭುಲಿಂಗ ವಾಲ್ದೊಡ್ಡಿ, ಸಂಜೀವಕುಮಾರ ಅತಿವಾಳೆ, ಚಂದ್ರಪ್ಪ ಹೆಬ್ಬಾಳಕರ್, ಗಣಪತಿ ಭಕ್ತಾ, ಎಂ.ಜಿ. ಗಂಗನಪಳ್ಳಿ, ಗುರುನಾಥ ಅಕ್ಕಣ್ಣ, ಎಸ್.ಎಂ. ಜನವಾಡಕರ್, ಹಂಸಕವಿ, ಶಿವಕುಮಾರ ಸದಲಾಪೂರೆ, ರಾಜಕುಮಾರ ಅಲ್ಲೂರೆ ಇದ್ದರು. ಜಗನಾಥ ಕಮಲಾಪೂರೆ ಸ್ವಾಗತಿಸಿರು. ಡಾ. ರಘುಶಂಖ ಭಾತಂಬ್ರಾ ನಿರೂಪಿಸಿದರು. ನಾಗಶೆಟ್ಟಿ ಪಾಟೀಲ ಗಾದಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.