ADVERTISEMENT

ನಕಲು ಕಲೆಯಿಂದ ಕಲಾವಿದರ ಅಸ್ತಿತ್ವಕ್ಕೆ ಧಕ್ಕೆ: ಮಹಾದೇವಪ್ಪ ಶಿಲ್ಪಿ

ಹೈದರಾಬಾದ್ ಕರ್ನಾಟಕ ಶಿಲ್ಪಕಲೆಗಳು: ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 10:02 IST
Last Updated 10 ಜನವರಿ 2017, 10:02 IST
ಬೀದರ್: ನಕಲು ಕಲೆಯಿಂದ ಕಲಾವಿದರ ಅಸ್ತಿತ್ವಕ್ಕೆ ಧಕ್ಕೆ ಉಂಟಾಗಿದೆ. ಇದರಿಂದ ಅರ್ಹ ಕಲಾವಿದರಿಗೆ ಪ್ರಶಸ್ತಿಗಳು ಲಭಿಸುತ್ತಿಲ್ಲ. ಪ್ರಶಸ್ತಿಗಳು ಅನರ್ಹರ ಪಾಲಾಗುತ್ತಿವೆ ಎಂದು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಮಹಾದೇವಪ್ಪ ಶಿಲ್ಪಿ ವಿಷಾದ ವ್ಯಕ್ತಪಡಿಸಿದರು.
 
ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ ಹಾಗೂ ಕರ್ನಾಟಕ ಕಾಲೇಜಿನ ಕನ್ನಡ ಮತ್ತು ಇತಿಹಾಸ ವಿಭಾಗಗಳ ಸಹಯೋಗದಲ್ಲಿ ನಗರದ ಕರ್ನಾಟಕ ಕಾಲೇಜಿನಲ್ಲಿ ಸೋಮವಾರ ಆರಂಭವಾದ ‘ಹೈದರಾಬಾದ್ ಕರ್ನಾಟಕ ಶಿಲ್ಪಕಲೆಗಳು’ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
 
ನಕಲು ಕಲೆಗೆ ಪ್ರಾಮುಖ್ಯ ನೀಡುವುದು ಅಂದರೆ ಕಲಾವಿದರ ಮೇಲೆ ದೌರ್ಜನ್ಯ ನಡೆಸುವುದು ಎಂದೇ ಭಾವಿಸಬೇಕಾಗುತ್ತದೆ. ಅರ್ಹರನ್ನು ಗುರುತಿಸುವ ಕಾರ್ಯಗಳು ಪ್ರಾಮಾಣಿಕವಾಗಿ ನಡೆಯದಿದ್ದರೆ ಶಿಲ್ಪಕಲಾ ಕೌಶಲ ನಿಧಾನವಾಗಿ ಮಾಯವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
 
ಕಲೆಯನ್ನು ಕರಗತ ಮಾಡಿಕೊಂಡಿರುವವರ ಸಂಖ್ಯೆ ವಿರಳವಾಗುತ್ತಿದೆ. ಸಾಧಕರಲ್ಲದಿದ್ದರೂ ಪ್ರಶಸ್ತಿಗಾಗಿ ಹಾತೊರೆಯುವವರ ಸಂಖ್ಯೆ ಹೆಚ್ಚಾಗಿದೆ. ರಾಜಾಶ್ರಯದಲ್ಲಿದ್ದ ಕಲಾವಿದರಿಗೆ ಅಪಾರ ಗೌರವ ಇತ್ತು. ಕಲಾಸಕ್ತರು ಕಲಾವಿದರನ್ನು ದೇವತಾಸ್ವರೂಪದಲ್ಲಿ ಕಾಣುತ್ತಿದ್ದರು. ಆದರೆ, ಈಗ ಅದೆಲ್ಲ ಮಾಯವಾಗಿದೆ ಎಂದರು.
 
ಜಕಣಚಾರಿಗೆ ಎಂತಹ ಶಿಲೆಯಲ್ಲೂ ಕಲೆಯನ್ನು ಅರಳಿಸುವ ಶಕ್ತಿ ಇತ್ತು. ಆದರೆ, ಇಂದಿನ ಕಲಾವಿದರಿಗೆ ಎಚ್‌.ಡಿ.ಕೋಟೆ ಶಿಲೆಯನ್ನು ಬಿಟ್ಟರೆ ಬೇರೆ ಶಿಲೆಯಲ್ಲಿ ಶಿಲ್ಪಕಲಾಕೃತಿಗಳನ್ನು ಮಾಡಲು ಆಗದಂಥ ಸ್ಥಿತಿ ನಿರ್ಮಾಣವಾಗಿದೆ. ಕಲಾವಿದರು ಶಿಲೆಗಳ ಬಗೆಗೆ ಆಳವಾಗಿ ಅರಿತುಕೊಳ್ಳಬೇಕು. ವಿದ್ಯೆಗೆ ವಿನಯವೇ ಭೂಷಣ. ಸಹನೆ, ಸಚ್ಚಾರಿತ್ರ್ಯ, ಸ್ವಾಭಿಮಾನ ಉಳಿಸಿಕೊಳ್ಳುವ ಮೂಲಕ ಕಲೆಯ ಘನತೆಯನ್ನೂ ಉಳಿಸಿಕೊಳ್ಳಬೇಕಾದದ್ದು ಕಲಾವಿದರ ಕರ್ತವ್ಯವಾಗಿದೆ ಎಂದು ತಿಳಿಸಿದರು.
 
ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯ ಮಹೇಶಕುಮಾರ ತಳವಾರ ಮಾತನಾಡಿ, ಮಹಾದೇವಪ್ಪ ಶಿಲ್ಪಿ ಅವರು ಅಕಾಡೆಮಿಯ ಅಧ್ಯಕ್ಷರಾದ ನಂತರ ರಾಜ್ಯದಲ್ಲಿ ಒಟ್ಟು 50 ಕಲಾ ಶಿಬಿರಗಳನ್ನು ಮಾಡಲಾಗಿದೆ. ಹೈದರಾಬಾದ್ ಕರ್ನಾಟಕದಲ್ಲಿ ಒಂದು ಸಿಮೆಂಟ್‌ ಶಿಲ್ಪ ಶಿಬಿರವನ್ನೂ ನಡೆಸಲಾಗಿದೆ. ಬೀದರ್‌ನಲ್ಲಿ ಶೀಘ್ರದಲ್ಲೇ ಫೈಬರ್ ಶಿಲ್ಪಕಲೆ ಶಿಬಿರ ಆಯೋಜಿಸಲಾಗುವುದು ಎಂದು ತಿಳಿಸಿದರು.
 
ಕರ್ನಾಟಕ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಗನ್ನಾಥ ಹೆಬ್ಬಾಳೆ ಮಾತನಾಡಿ, ಪ್ರತಿಯೊಂದು ಕಲೆಯಲ್ಲಿ ಸಂದೇಶ ಅಡಗಿದೆ. ಅದನ್ನು ಗ್ರಹಿಸುವ ಶಕ್ತಿ ಇರಬೇಕು. ಕಲಬುರ್ಗಿ ವಿಭಾಗದಲ್ಲಿ ಬಿದರಿ ಕಲೆ, ಕಿನ್ನಾಳ ಕಲೆ ಪ್ರಸಿದ್ಧಿ ಪಡೆದಿವೆ. ಇವು ಈ ನೆಲದ ಸಾಂಸ್ಕೃತಿಕ ಸಿರಿವಂತಿಕೆಯನ್ನು ಬಿಂಬಿಸುತ್ತವೆ ಎಂದರು.
ಕೆಆರ್‍ಇ ಸಂಸ್ಥೆ ಉಪಾಧ್ಯಕ್ಷ ಬಿ.ಜಿ. ಶೆಟಕಾರ ಅಧ್ಯಕ್ಷತೆ ವಹಿಸಿದ್ದರು. 
 
ಕರ್ನಾಟಕ ಕಾಲೇಜಿನ ಪ್ರಾಚಾರ್ಯ ಡಾ.ಬಿ. ಎಸ್‌.ಬಿರಾದಾರ ಇದ್ದರು. ರಾಷ್ಟ್ರೀಯ ಜಾನಪದ ಬುಡಕಟ್ಟು ಕಲಾ ಪರಿಷತ್ತಿನ ಸಂಯೋಜಕ ರಾಜಕುಮಾರ ಹೆಬ್ಬಾಳೆ ನಿರೂಪಿಸಿದರು. ಪ್ರಾಧ್ಯಾಪಕ ವೈಜನಾಥ ಚಿಕಬಸೆ ವಂದಿಸಿದರು.
 
**
ಬಿದರಿ ಕಲೆ, ಕಿನ್ನಾಳ ಕಲೆ ನೆಲಮೂಲದಿಂದ ಪ್ರಸಿದ್ಧಿ ಪಡೆದಿವೆ. ಕಲೆ ಒಂದು ಪ್ರದೇಶದ ಸಾಂಸ್ಕೃತಿಕ ಹಿರಿಮೆಯ ಮೇಲೆ 
ಬೆಳಕು ಚೆಲ್ಲುತ್ತದೆ.
-ಡಾ.ಜಗನ್ನಾಥ ಹೆಬ್ಬಾಳೆ, ಕರ್ನಾಟಕ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.