ADVERTISEMENT

ನೈರ್ಮಲ್ಯ ಜಾಗೃತಿಗೆ ಆಂದೋಲನ: ಸಲಹೆ

ಬೀದರ್‌ ನಗರಸಭೆ ಬಜೆಟ್‌: ಸಂಘ ಸಂಸ್ಥೆಗಳ ಸಭೆಯಲ್ಲಿ ಹಲವು ಬೇಡಿಕೆ ಇಟ್ಟ ನಾಗರಿಕರು

​ಪ್ರಜಾವಾಣಿ ವಾರ್ತೆ
Published 5 ಜನವರಿ 2017, 8:57 IST
Last Updated 5 ಜನವರಿ 2017, 8:57 IST

ಬೀದರ್‌: ಸ್ವಚ್ಛ ಭಾರತ ಅಭಿಯಾನ ಮಾದರಿಯಲ್ಲಿ ನಗರಸಭೆ ವತಿಯಿಂದ ನಗರದಲ್ಲಿ ಸ್ವಚ್ಛತಾ ಜಾಗೃತಿ ಆಂದೋಲನ ನಡೆಸಬೇಕು ಎಂದು ವಿವಿಧ ಸಂಘ ಸಂಸ್ಥೆಗಳ ಮುಖಂಡರು ಸಲಹೆ ನೀಡಿದರು.

ನಗರ ಸ್ವಚ್ಛತೆಗೆ ಆದ್ಯತೆ ನೀಡಬೇಕು. ನೈರ್ಮಲ್ಯ ಜಾಗೃತಿಗೆ ವಿಶೇಷ ಯೋಜನೆ ಹಾಕಿಕೊಳ್ಳಬೇಕು. ಅದಕ್ಕೆ ಅನುದಾನ ಮೀಸಲಿಡಬೇಕು ಎಂದು ನಗರಸಭೆಯ 2017– 18ನೇ ಸಾಲಿನ ಆಯವ್ಯಯ ಸಿದ್ಧಪಡಿಸುವುದಕ್ಕಾಗಿ ನಾಗರಿಕರ ಸಲಹೆ ಸೂಚನೆ ಪಡೆಯಲು ಇಲ್ಲಿಯ ನಗರಸಭೆ ಸಭಾಂಗಣದಲ್ಲಿ ಬುಧವಾರ ಕರೆದಿದ್ದ ಸಭೆಯಲ್ಲಿ ಒಕ್ಕೊರಲಿನಿಂದ ಆಗ್ರಹಿಸಿದರು.

ನಗರದ ಎಲ್ಲ ಬಡಾವಣೆಗಳಲ್ಲಿ ಸ್ವಚ್ಛತೆ ಮಹತ್ವ ಮನವರಿಕೆ ಮಾಡಿಕೊಡುವ ಕಿರು ಚಿತ್ರಗಳನ್ನು ಪ್ರದರ್ಶಿಸಬೇಕು. ಶಾಲಾ ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳನ್ನು ಜಾಗೃತಿ ಅಭಿಯಾನಕ್ಕೆ ಬಳಸಿಕೊಳ್ಳಬೇಕು ಎಂದರು.

ನಗರದ ಪ್ರತಿ ಬಡಾವಣೆಯ ಪ್ರಮುಖ ಸ್ಥಳಗಳಲ್ಲಿ ಕಸದ ತೊಟ್ಟಿಗಳನ್ನು ಇಡಬೇಕು. ಸ್ವಚ್ಛತಾ ಕಾರ್ಯಕ್ಕೆ ಹೆಚ್ಚಿನ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಸದಸ್ಯ ರಾಜಾರಾಮ್‌ ಚಿಟ್ಟಾ ಆಗ್ರಹಿಸಿದರು.

ನಾಗರಿಕರು ತಮ್ಮ ಮನೆಯಲ್ಲಿನ ಕಸವನ್ನು ಖಾಲಿ ನಿವೇಶನ ಹಾಗೂ ಚರಂಡಿಯಲ್ಲಿ ಬೀಸಾಡುತ್ತಿದ್ದಾರೆ. ಎಲ್ಲ ಬಡಾವಣೆಗಳಲ್ಲಿ ಮನೆ ಮನೆ ಕಸ ಸಂಗ್ರಹಿಸುವ ಕಾರ್ಯವನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು.

ಬೀದರ್‌ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಜಿ. ಶೆಟಕಾರ ಮಾತನಾಡಿ, ನಗರದ ಪ್ರಮುಖ ರಸ್ತೆಗಳು, ಮಾರುಕಟ್ಟೆ ಸ್ಥಳಗಳಲ್ಲಿ ಸಾರ್ವಜನಿಕ ಮೂತ್ರಾಲಯ ಹಾಗೂ ಶೌಚಾಲಯಗಳು ಇಲ್ಲ. ಜನ ರಸ್ತೆ ಬದಿಯಲ್ಲಿಯೇ ಮೂತ್ರ ವಿಸರ್ಜನೆ ಮಾಡುವಂತಾಗಿದೆ. ಮೂತ್ರಾಲಯ ಹಾಗೂ ಶೌಚಾಲಯ ನಿರ್ಮಾಣಕ್ಕೆ ಅನುದಾನ ಮೀಸಲಿಡಬೇಕು ಎಂದು ಸಲಹೆ ನೀಡಿದರು.

ನಗರದಲ್ಲಿ ರಸ್ತೆ ಮೇಲೆ ಕುಳಿತು ವಾಹನ ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತಿರುವ ಬಿಡಾಡಿ ದನಗಳನ್ನು ನಿಯಂತ್ರಿಸಬೇಕು. ಬಿ.ವಿ. ಭೂಮರೆಡ್ಡಿ ಕಾಲೇಜು ಎದುರುಗಡೆಯ ರುದ್ರಭೂಮಿಯನ್ನು ನಿರ್ವಹಣೆ ಮಾಡಬೇಕು ಎಂದು ಆಗ್ರಹಿಸಿದರು. ನಗರ ಸಾರಿಗೆ ಬಸ್‌ಗಳು ನಿಲುಗಡೆಯಾಗುವ ಸ್ಥಳಗಳಲ್ಲಿ ಬಸ್‌ ತಂಗುದಾಣ ನಿರ್ಮಿಸಬೇಕು ಎಂದು ರಾಂಪುರೆ ಕಾಲೊನಿಯ ವೈಜನಾಥ ಪಾಟೀಲ ಒತ್ತಾಯಿಸಿದರು.

ರಾಂಪುರೆ ಕಾಲೊನಿಯಲ್ಲಿ ಹಾಳಾಗಿರುವ ರಸ್ತೆಗಳನ್ನು ದುರಸ್ತಿ ಮಾಡಬೇಕು. ನಳಗಳ ಮೂಲಕ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಕಾಲೊನಿ ನಿವಾಸಿ ವೀರಶೆಟ್ಟಿ ಚೌಕನಪಳ್ಳಿ ಮನವಿ ಮಾಡಿದರು. ಬಡಾವಣೆಗಳಲ್ಲಿ ಬೀದಿ ನಾಯಿ, ಜಾನುವಾರು ಮೃತಪಟ್ಟರೆ ತಕ್ಷಣ ತೆಗೆದುಕೊಂಡು ಹೋಗುತ್ತಿಲ್ಲ. ಸಾರ್ವಜನಿಕರ ದೂರು ಸ್ವೀಕರಿಸಲು ಉಚಿತ ಸಹಾಯವಾಣಿ ಆರಂಭಿಸಬೇಕು ಎಂದರು.

ಮಹಮೂದ್‌ ಗವಾನ್‌ ಚೌಕ್‌ ಸಮೀಪ ಹಾಗೂ ಮಂಗಲಪೇಟ್‌ನಲ್ಲಿ ಗ್ರಂಥಾಲಯ ಸ್ಥಾಪಿಸಬೇಕು ಎಂದು ಸದಸ್ಯ ಸೈಯದ್‌ ಮನ್ಸೂರ್‌ ಅಹಮ್ಮದ್‌ ಖಾದ್ರಿ ಬೇಡಿಕೆ ಮಂಡಿಸಿದರು. ಸಿಎಂಸಿ ಕಾಲೊನಿಗೆ ರಸ್ತೆ, ಚರಂಡಿ ಮತ್ತಿತರ ಮೂಲಸೌಕರ್ಯ ಕಲ್ಪಿಸಬೇಕು ಎಂದು ಸದಸ್ಯ ಅಬ್ದುಲ್‌ ಅಜೀಜ್‌ ಒತ್ತಾಯಿಸಿದರು. ಈ ಬಾರಿಯ ಬಜೆಟ್‌ನಲ್ಲಿ ನಗರದಲ್ಲಿ ನೈರ್ಮಲ್ಯ ಕಾಪಾಡಲು ಪ್ರಥಮ ಆದ್ಯತೆ ನೀಡಲಾಗುವುದು ಎಂದು ನಗರಸಭೆ ಆಯುಕ್ತ ನರಸಿಂಹಮೂರ್ತಿ ತಿಳಿಸಿದರು.

ಈಗಾಗಲೇ ಪ್ಲಾಸ್ಟಿಕ್‌ ಸಾಮಗ್ರಿಗಳ ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಲಾಗಿದೆ. ಆದರೂ ಕೆಲಕಡೆ ಮಾರಾಟ ಮತ್ತು ಬಳಕೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಪ್ಲಾಸ್ಟಿಕ್‌ ಸಾಮಗ್ರಿಗಳ ಮಾರಾಟ ತಡೆಯಲು ಸಂಘ ಸಂಸ್ಥೆಗಳ ಸಹಕಾರ ಅಗತ್ಯವಿದೆ ಎಂದು ಹೇಳಿದರು.

20 ವರ್ಷಗಳಿಂದ ಸದಸ್ಯನಾಗಿದ್ದೇನೆ. ಒಮ್ಮೆಯೂ ಇಂಥ ಸಭೆ ನಡೆದಿಲ್ಲ. ಈಗ ಕರೆದಿರುವ ಸಭೆ ನಿಯಮಬದ್ಧವಾಗಿದೆಯೇ ಎನ್ನುವ ಸದಸ್ಯ ನಾಗಶೆಟ್ಟಿ ವಗದಾಳೆ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಂಘ ಸಂಸ್ಥೆಗಳ ಸಭೆಯನ್ನು ನಿಯಮಬದ್ಧವಾಗಿಯೇ  ಕರೆಯಲಾಗಿದೆ ಎಂದು ತಿಳಿಸಿದರು. ನಗರಸಭೆ ಉಪಾಧ್ಯಕ್ಷೆ ಶಾಲಿನಿ ಚಿಂತಾಮಣಿ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.