ADVERTISEMENT

ಬಂಜಾರ ಪಾರ್ಕ್‌ ಸ್ಥಾಪನೆಗೆ ಅನುದಾನ

ಹುಮನಾಬಾದ್‌: ಬುಡಕಟ್ಟು ಲಂಬಾಣಿ ಜನಪದ ಉತ್ಸವದಲ್ಲಿ ರಾಜಶೇಖರ ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 6:11 IST
Last Updated 9 ಮಾರ್ಚ್ 2017, 6:11 IST
ಹುಮನಾಬಾದ್‌: ತಾಲ್ಲೂಕಿನ ಕಠ್ಠಳ್ಳಿ ಬಳಿ ಬಂಜಾರ ಪಾರ್ಕ್‌ ಸ್ಥಾಪನೆಗೆ ಮಂಜೂರಾತಿ ನೀಡಲಾಗಿದ್ದು, ಬಜೆಟ್‌ ನಲ್ಲಿ ಅನುದಾನ ಮೀಸಲಿಡಲು ಮುಖ್ಯಮಂತ್ರಿ ಮೇಲೆ ಒತ್ತಡ ಹೇರುವುದಾಗಿ ಭೂಸೇನಾ ನಿಗಮದ ಅಧ್ಯಕ್ಷ ರಾಜಶೇಖರ ಬಿ.ಪಾಟೀಲ ಹೇಳಿದರು. 
 
ಇಲ್ಲಿನ ವೀರಭದ್ರೇಶ್ವರ ದಂತ ಮಹಾವಿದ್ಯಾಲಯದಲ್ಲಿ ಜಾನಪದ ಪರಿಷತ್‌ ಬುಧವಾರ ಏರ್ಪಡಿಸಿದ್ದ ಬುಡಕಟ್ಟು ಲಂಬಾಣಿ ಜನಪದ ಉತ್ಸವ ಹಾಗೂ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. 
 
ಜನಪದ ಸಂಸ್ಕೃತಿ ಹಾಗೂ ಕಲೆ ಉಳಿಸುವುದು ಸಮಾಜದ ಎಲ್ಲರ ಜವಾಬ್ದಾರಿ. ಲಂಬಾಣಿ ಸಮಾಜದ ಸಾಂಪ್ರದಾಯಿಕ ಉಡುಗೆ ಹಾಗೂ ನೃತ್ಯದ ಉಳಿವು ಅವಶ್ಯಕ. ನಗರ ಪ್ರದೇಶಕ್ಕೆ ವಲಸೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರ ಈ ಯೋಜನೆ ಘೋಷಿಸಿದ್ದು, ಯೋಜನೆಗೆ ಭೂಮಿ ಹಸ್ತಾಂತರ ಸೇರಿದಂತೆ ₹160 ಕೋಟಿ ಅನುದಾನ ನೀಡಿದೆ. ಈಗಾಗಲೇ ₹12 ಕೋಟಿ ಅನುದಾನ  ಬಿಡುಗಡೆಗೊಳಿಸಿದೆ. ಕಾಮಗಾರಿ ಚುರುಕುಗೊಳಿಸುವಂತೆ ಭೂಸೇನಾ ನಿಗಮದ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ ಎಂದು ಹೇಳಿದರು. 
 
ಚಿಂಚೋಳಿ ಶಾಸಕ ಡಾ.ಉಮೇಶ ಜಾಧವ್‌ ಮಾತನಾಡಿ, ಇಲ್ಲಿ ಸೇವಾಲಾಲ ಪೀಠ ಸ್ಥಾಪಸಬೇಕೆಂದು ಹೇಳಿದರು. ಪ್ರಾಧ್ಯಾಪಕ ಡಾ.ವೆಂಕಟ್‌ ಪವಾರ್‌ ಬುಡಕಟ್ಟು ಲಂಬಾಣಿ ಕಲೆ ಮತ್ತು ಸಾಹಿತ್ಯ ವಿಷಯ ಕುರಿತು, ಪ್ರೊ.ಸಂಗಪ್ಪ ತೌಡಿ ಬುಡಕಟ್ಟು ಲಂಬಾಣಿ ಜನಾಂಗದ ಸವಾಲುಗಳ ಕುರಿತು ಉಪನ್ಯಾಸ ನೀಡಿದರು. ಸಾಹಿತಿ ಡಾ. ಸೋಮನಾಥ ಯಾಳವಾರ, ಡಾ. ಮಹಾದೇವಿ ಹೆಬ್ಬಾಳೆ ಮಾತನಾಡಿದರು.  
 
ಕರ್ನಾಟಕ ಸಾಹಿತ್ಯ ಅಕಾಡೆಮಿ ಸುವರ್ಣ ಗೌರವ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಿ.ಎಸ್‌.ಖೂಬಾ ಹಾಗೂ ಜಗನ್ನಾಥ ಹಲಮಡ್ಗಿ ಅವರನ್ನು ಸನ್ಮಾನಿಸಲಾಯಿತು. 
ವೀರಭದ್ರೇಶ್ವರ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಚಾರ್ಯ ಆರ್‌.ಡಿ.ಪವಾರ್‌ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸಚ್ಚಿದಾನಂದ ಮಠಪತಿ, ಉಪನ್ಯಾಸಕ ವಿಶ್ವನಾಥ ಬಿರಾದಾರ್‌ ಇದ್ದರು. ವೈಜಿನಾಥ ಪಾಟೀಲ ಸ್ವಾಗತಿಸಿದರು. ಜನಪದ ಪರಿಷತ್‌ ಅಧ್ಯಕ್ಷ ಶರದ್‌ ನಾರಾಯುಣ ಪೇಟಕರ್‌ ಪ್ರಾಸ್ತಾವಿಕ ಮಾತನಾಡಿದರು. 
 
ಮಹಾವೀರ ಜಮಕಂಡಿ ನಿರೂಪಿಸಿದರು. ಗೇಮು ಚವಾಣ ವಂದಿಸಿದರು. ಬಸವಕಲ್ಯಾಣ ತಾಲ್ಲೂಕು ಕಲ್‌ಖೋರಾ ಕಲಾವಿದರು ಲಂಬಾಣಿ ನೃತ್ಯ ಪ್ರದರ್ಶಿಸಿದರು. ದೂರದರ್ಶನ ಕಲಾವಿದರಾದ ಗೋವಿಂದ ಬಿ.ಚವಾಣ ತಂಡದವರು ಭಜನೆ ಪದಗಳನ್ನು ಹಾಡಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.