ADVERTISEMENT

ಬಡ್ತಿ ಮೀಸಲಾತಿ: ಪುನರ್ ಪರಿಶೀಲನಾ ಅರ್ಜಿ ಸಲ್ಲಿಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 9:12 IST
Last Updated 22 ಮಾರ್ಚ್ 2017, 9:12 IST

ಬೀದರ್: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರ ಬಡ್ತಿ ಮೀಸಲಾತಿಯನ್ನು ಸಂರಕ್ಷಿಸಲು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಆಗ್ರಹಿಸಿದೆ.

ಸಮಿತಿಯ ಜಿಲ್ಲಾ ಸಂಚಾಲಕ ಕಲ್ಯಾಣರಾವ್ ಭೋಸ್ಲೆ ಅವರ ನೇತೃತ್ವದಲ್ಲಿ ಸಮಿತಿಯ ಪದಾಧಿ ಕಾರಿಗಳು ನಗರದಲ್ಲಿ ಮಂಗಳವಾರ ನಿಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಯನ್ನು ಭೇಟಿ ಮಾಡಿ ಈ ಕುರಿತು ಮನವಿಪತ್ರ ಸಲ್ಲಿಸಿದರು.

ಎಸ್‌ಟಿ/ಎಸ್‌ಟಿ ನೌಕರರಿಗೆ ಮೀಸಲಾತಿ ಕಲ್ಪಿಸುವ ರಾಜ್ಯ ಸರ್ಕಾರದ 2002 ರ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ಇದರಿಂದಾಗಿ 2002 ರಿಂದ ಮುಂಬಡ್ತಿ ಪಡೆದಿರುವ 37 ಇಲಾಖೆಗಳ 16,000 ಎಸ್‌ಸಿ/ ಎಸ್‌ಟಿ ನೌಕರರು ಹಿಂಬಡ್ತಿ ಪಡೆ ಯಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಬಡ್ತಿ ಮೀಸಲಾತಿ ಸಂಬಂಧ ವಿಶೇಷ ಕಾನೂನು ರಚಿಸಲು ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು. ಮೀಸಲಾತಿ ಕುರಿತು ಸುಗ್ರೀವಾಜ್ಞೆ ಹೊರಡಿಸುವಂತೆ ಶಾಸಕರು ರಾಜ್ಯ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಆಗ್ರಹಿಸಿದರು.

ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಶಂಭುಲಿಂಗ ಪೂಜಾರಿ, ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಅಶೋಕ ಸಂಗಮ, ಸಂಜುಕುಮಾರ ಭಾವಿಕಟ್ಟಿ, ಸಂಜುಕುಮಾರ ಲಾಧಾ, ಸಂಜುಕುಮಾರ ಮೇತ್ರೆ, ಮಾಣಿಕ ಪವಾರ ಮತ್ತಿತರರು ನಿಯೋಗದಲ್ಲಿ ಇದ್ದರು.

ಸುಪ್ರೀಂಕೋರ್ಟ್‌ ತೀರ್ಪು ಅನುಷ್ಠಾನಕ್ಕೆ ಒತ್ತಾಯ: ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರ ಬಡ್ತಿ ಮೀಸಲಾತಿ ಸಂಬಂಧ ಸುಪ್ರೀಂಕೋರ್ಟ್‌ ನೀಡಿದ ತೀರ್ಪನ್ನು ಸರ್ಕಾರ ಅನುಷ್ಠಾನಗೊಳಿಸಬೇಕು ಎಂದು ಅಲ್ಪಸಂಖ್ಯಾತ, ಹಿಂದುಳಿದ ಹಾ ಗೂ ಸಾಮಾನ್ಯ ವರ್ಗಗಳ (ಅಹಿಂಸಾ) ವೇದಿಕೆಯ ಜಿಲ್ಲಾ ಶಾಖೆ ಆಗ್ರಹಿಸಿದೆ.

ವೇದಿಕೆಯ ಅಧ್ಯಕ್ಷ ಚಂದ್ರಕಾಂತ ಪಾಟೀಲ ಅಧ್ಯಕ್ಷತೆಯಲ್ಲಿ ನಗರದಲ್ಲಿ ಈಚೆಗೆ ನಡೆದ ಸಭೆಯಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನು ಜಾರಿಗೆ ತರುವಂತೆ ಸರ್ಕಾರವನ್ನು ಒತ್ತಾಯಿಸಲು ತೀರ್ಮಾನಿಸಲಾಯಿತು.

ರಾಜ್ಯ ಸರ್ಕಾರ ನೌಕರರಿಗೆ ನೀಡುವ ಬಡ್ತಿ ನೀತಿಯಿಂದ ಅಹಿಂಸಾ ವರ್ಗದ ನೌಕರರಿಗೆ ಅನ್ಯಾಯವಾಗಿದೆ. ಸರ್ಕಾರದ ತಪ್ಪು ನೀತಿಯಿಂದಾಗಿ ಅನೇಕ ನೌಕರರು ಬಡ್ತಿ ಇಲ್ಲದೆ ನಿವೃತ್ತಿ ಹೊಂದಿದ್ದಾರೆ. ಈಗ ಸುಪ್ರೀಂಕೋರ್ಟ್‌ನ ತೀರ್ಪು ಜಾರಿಗೆ ತರಲು ವಿಳಂಬ ಮಾಡಲಾಗುತ್ತಿದೆ ಎಂದು ಸಭೆಯಲ್ಲಿ ಆರೋಪಿಸಲಾಯಿತು.

ಬೀದರ್‌ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಜಿ.ಶೆಟಕಾರ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಪ್ರಮುಖ ರಾದ ಕುಶಾಲ ಪಾಟೀಲ ಗಾದಗಿ, ಮಹಮ್ಮದ್‌ ಮೌಜಮ್‌, ಸೋಮ ಶೇಖರ ಅಮಲಾಪುರೆ, ಧನರಾಜ ಮಡಿವಾಳ, ಝಾಕೀರ್ ಹುಸೇನ್, ರಾಜಕುಮಾರ ಮಾಳಗೆ, ಅನಿಲ ಕುಮಾರ ಬಿರಾದಾರ, ಶರಣಪ್ಪ ಮಿ ಠಾರೆ, ವೀರಶೆಟ್ಟಿ ಖ್ಯಾಮಾ, ವಿನಾಯಕ ಕೋತಮುರೆ, ಗೋಪಾಲರಾವ್, ಬಸವರಾಜ ಪಾಟೀಲ, ಸಚಿನ್ ಹುಂಡೇಕಾರ ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.