ADVERTISEMENT

ಬಸವಕಲ್ಯಾಣ: ಚರಂಡಿ ಕಾಮಗಾರಿ ಅಪೂರ್ಣ

​ಪ್ರಜಾವಾಣಿ ವಾರ್ತೆ
Published 24 ಮೇ 2017, 6:13 IST
Last Updated 24 ಮೇ 2017, 6:13 IST

ಬಸವಕಲ್ಯಾಣ: ಇಲ್ಲಿನ ಪ್ರಮುಖ ರಸ್ತೆಗಳ ಚರಂಡಿ ಕಾಮಗಾರಿ ಅಪೂರ್ಣ ಆಗಿರುವುದರಿಂದ ಮಳೆ ಬಂದಾಗ ನೀರು ಸರಾಗವಾಗಿ ಮುಂದಕ್ಕೆ ಸಾಗದೆ ರಸ್ತೆಮೇಲೆ ಹರಿದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

ತಾಲ್ಲೂಕು ಪಂಚಾಯಿತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿವರೆಗೆ ಚರಂಡಿ ನಿರ್ಮಿಸಿ ಐದಾರು ವರ್ಷವಾಯಿತು. ಇಲ್ಲಿಂದ ಮುಂದಕ್ಕೆ ಚರಂಡಿಯೇ ಇಲ್ಲ. ಹೀಗಾಗಿ ಮಳೆ ನೀರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿವರೆಗೆ ಹರಿದುಬಂದು ಕಚೇರಿ ಎದುರಲ್ಲಿಯೇ ಸಂಗ್ರಹಗೊಳ್ಳುತ್ತಿದೆ.

ಹೆಚ್ಚಿನ ದಿನಗಳವರೆಗೆ ನೀರು ಹೀಗೆಯೇ ಇರುತ್ತಿರುವುದರಿಂದ ಪಾಚಿಗಟ್ಟಿದಂತಾಗಿ ದುರ್ನಾತ ಸೂಸುತ್ತಿದೆ. ಸೊಳ್ಳೆ ಕಾಟ ಹೆಚ್ಚುತ್ತಿದೆ. ಅಂಗಡಿಗಳ ಎದುರಲ್ಲಿಯೂ ನೀರು ನಿಲ್ಲುತ್ತಿರುವ ಕಾರಣ ವ್ಯಾಪಾರಸ್ಥರೂ ಸಂಕಟ ಅನುಭವಿಸಬೇಕಾಗುತ್ತಿದೆ. ‘ಇಲ್ಲಿನ ನೀರು ಮುಂದಕ್ಕೆ ಸಾಗಲು ಅನುಕೂಲ ಮಾಡಿಕೊಡಬೇಕು ಎಂದು ನಗರಸಭೆಯವರಿಗೆ ಅನೇಕ ಸಲ ವಿನಂತಿಸಿದರೂ ಪ್ರಯೋಜನ ಆಗಿಲ್ಲ’ ಎಂದು ವ್ಯಾಪಾರಸ್ಥ ದಿಲೀಪ ಭೋಸ್ಲೆ ಅಳಲು ತೋಡಿಕೊಂಡಿದ್ದಾರೆ.

ADVERTISEMENT

ಈ ರಸ್ತೆಯ ಆಚೆ ಬದಿಯಲ್ಲಿ ತಹಶೀಲ್ದಾರ್ ಕಚೇರಿಯ ಹಳೆಯ ಕಟ್ಟಡ ಮತ್ತು ಸಾರ್ವಜನಿಕ ಗ್ರಂಥಾಲಯದ ಎದುರಿನಿಂದ ಸದಾನಂದ ಹೋಟಲ್‌ವರೆಗೆ ಎರಡು ವರ್ಷದ ಹಿಂದೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಚರಂಡಿ ಕಟ್ಟಲಾಗಿದೆ.

ಆದರೆ, ನಿರ್ವಹಣೆ ಇಲ್ಲದೆ ಕೆಲವೆಡೆ ಒಳಗಡೆ ಸಂಪೂರ್ಣವಾಗಿ ಮಣ್ಣು ತುಂಬಿಕೊಂಡು ಚರಂಡಿಯೇ ಕಾಣದಂತಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಮಹಾತ್ಮ ಗಾಂಧೀಜಿ ವೃತ್ತದವರೆಗೂ ಕೆಲ ಸ್ಥಳಗಳಲ್ಲಿ ಚರಂಡಿಯಲ್ಲಿ ಮಣ್ಣು ತುಂಬಿಕೊಂಡಿದೆ. ಲಕ್ಷ್ಮಿ ಥಿಯೇಟರ್ ಸ್ಥಳದಿಂದ ಬನಶಂಕರಿ ದೇವಸ್ಥಾನದ ರಸ್ತೆಯಲ್ಲಿ ರಸ್ತೆ ವಿಸ್ತರಣೆಗಾಗಿ ಅಂಗಡಿ, ಮನೆ ಕೆಡವಲಾಗಿದೆ.

ಆದರೆ, ಇದುವರೆಗೆ ಸರಿಯಾದ ರಸ್ತೆಯಾಗಲಿ, ಚರಂಡಿಯಾಗಲಿ ನಿರ್ಮಿಸಿಲ್ಲ. ‘ಇದು ಇಳಿಜಾರು ಪ್ರದೇಶ ಆಗಿರುವ ಕಾರಣ ಮಳೆಗಾಲದಲ್ಲಿ ಪಟ್ಟಣದ ಪ್ರಮುಖ ರಸ್ತೆಗಳ ನೀರು ಇಲ್ಲಿಗೆ ಹರಿದು ಬರುತ್ತದೆ. ಆದರೆ, ಇಲ್ಲಿಂದ ಮುಂದಕ್ಕೆ ಸಾಗಲು ವ್ಯವಸ್ಥೆಯೇ ಇಲ್ಲ. ಆದ್ದರಿಂದ ಮಳೆ ಬಂದಾಗ ತೀವ್ರ ತೊಂದರೆ ಆಗಲಿದೆ. ಇಲ್ಲಿ ಶೀಘ್ರದಲ್ಲಿ ಚರಂಡಿ ಕಟ್ಟಲು ವ್ಯವಸ್ಥೆ ಮಾಡಬೇಕು ಎಂದು ಈಚೆಗೆ ಇಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರಿಗೂ ಮನವಿಪತ್ರ ಸಲ್ಲಿಸಲಾಗಿದೆ’ ಎಂದು ಓಣಿ ನಿವಾಸಿ ಮಹ್ಮದಸಾಬ್ ಹೇಳಿದ್ದಾರೆ.

ಡಾ.ಅಂಬೇಡ್ಕರ್ ವೃತ್ತದಿಂದ ಟೂರಿಸ್ಟ್ ಲಾಡ್ಜ್ ಮೂಲಕ ಮುಖ್ಯ ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿಯೂ ಅಲ್ಲಲ್ಲಿ ಚರಂಡಿಯಲ್ಲಿ ಮಣ್ಣು ಸಂಗ್ರಹಗೊಂಡಿದೆ. ಹೀಗಾಗಿ ಓಣಿಗಳ ಮನೆ ಬಳಕೆಯ ನೀರು ಅಲ್ಲಲ್ಲಿ ಸಂಗ್ರಹಗೊಂಡು ಕೊಳಚೆ ನಿರ್ಮಾಣವಾಗಿದೆ. ನಿಯಮಿತವಾಗಿ ಸ್ವಚ್ಛತಾ ಕಾರ್ಯ ಕೈಗೊಂಡಿಲ್ಲ.

ಟೂರಿಸ್ಟ್ ಲಾಡ್ಜ್‌ನಿಂದ ಶಾಂತಿನಿಕೇತನ ಶಾಲೆಗೆ ಹೋಗುವ ರಸ್ತೆಯಲ್ಲಿಯೂ ಕೆಲವೆಡೆ ಚರಂಡಿ ಅಪೂರ್ಣವಾಗಿದೆ. ‘ಚರಂಡಿಗಳ ಕಾರ್ಯ ಪೂರ್ಣ ಗೊಳಿಸಲಾಗುತ್ತದೆ. ಸ್ವಚ್ಛತೆ ಕೈಗೊಳ್ಳಲು ಸಂಬಂಧಿತ ಸಿಬ್ಬಂದಿಗೆ ಸೂಚಿಸಲಾ ಗುವುದು` ಎಂದು ನಗರಸಭೆಯ ಎಂಜಿನಿಯರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.