ADVERTISEMENT

ಬಹುಬೆಳೆ ಪದ್ಧತಿ ಆರ್ಥಿಕ ಪ್ರಗತಿಗೆ ಪೂರಕ

ಡಾ.ಚನ್ನಬಸವ ಪಟ್ಟದ್ದೇವರ 19ನೇ ಸ್ಮರಣೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 6:45 IST
Last Updated 23 ಏಪ್ರಿಲ್ 2018, 6:45 IST
ಭಾಲ್ಕಿಯಲ್ಲಿ ಚನ್ನಬಸವಾಶ್ರಮದಲ್ಲಿ ಭಾನುವಾರ ನಡೆದ ವಚನ ಜಾತ್ರೆಯಲ್ಲಿ ಕೃಷಿಕರಾದ ಕವಿತಾ ಮಿಶ್ರಾ ದಂಪತಿಯನ್ನು ಸನ್ಮಾನಿಸಲಾಯಿತು
ಭಾಲ್ಕಿಯಲ್ಲಿ ಚನ್ನಬಸವಾಶ್ರಮದಲ್ಲಿ ಭಾನುವಾರ ನಡೆದ ವಚನ ಜಾತ್ರೆಯಲ್ಲಿ ಕೃಷಿಕರಾದ ಕವಿತಾ ಮಿಶ್ರಾ ದಂಪತಿಯನ್ನು ಸನ್ಮಾನಿಸಲಾಯಿತು   

ಭಾಲ್ಕಿ: ‘ಏಕ ಬೆಳೆ ಪದ್ಧತಿ ರೈತರಿಗೆ ಮಾರಕವಾಗಿದ್ದು, ಆರ್ಥಿಕ ಏಳಿಗೆಗೆ ಪೂರಕವಾದ ಬಹು ಬೆಳೆ ಪದ್ಧತಿಯನ್ನು ರೈತರು ಅನುಸರಿಸಬೇಕು’ ಎಂದು ನೈಸರ್ಗಿಕ ಕೃಷಿಕರಾದ ಕವಿತಾ ಮಿಶ್ರಾ ಸಲಹೆ ನೀಡಿದರು.

ಲಿಂಗೈಕ್ಯ ಡಾ.ಚನ್ನಬಸವ ಪಟ್ಟದ್ದೇವರ 19ನೇ ಸ್ಮರಣೋತ್ಸವ, ವಚನ ಜಾತ್ರೆ ನಿಮಿತ್ತ  ಭಾನುವಾರ ನಡೆದ ನೈಸರ್ಗಿಕ ಕೃಷಿಗೋಷ್ಠಿಯಲ್ಲಿ ತಮ್ಮ ಅನುಭಾವ ಹಂಚಿಕೊಂಡರು.

‘ರೈತರು ಆರ್ಥಿಕ ಸಂಕಷ್ಟದಿಂದ ಪಾರಾಗಲು ಮತ್ತು ಕೃಷಿಯನ್ನು ಲಾಭದಾಯಕವನ್ನಾಗಿಸಲು ಋತು ಆಧಾರಿತ ಬೆಳೆ ಬೆಳೆಯಬೇಕು. ಜಗತ್ತಿಗೆ ಅನ್ನ ನೀಡುವ ರೈತನ ಸ್ಥಿತಿ ಇಂದು ಚಿಂತಾಜನಕವಾಗಿದೆ. ಇದಕ್ಕೆ ಕಾರಣ ರೈತನ ಕಷ್ಟದ ಬದುಕು. ರೈತ ಸಾಲದಲ್ಲಿಯೇ ಹುಟ್ಟಿ ಸಾಲದಲ್ಲಿಯೇ ಸಾಯುವಂತಹ ಸ್ಥಿತಿ ನಿರ್ಮಾವಾಗಿದೆ. ರೈತ ಸ್ವಾಭಿಮಾನದ ಬದುಕು ನಡೆಸಲು ಹವಣಿಸುತ್ತಾನೆ. ಯಾರಿಗೂ ಮೋಸ ಮಾಡುವುದಿಲ್ಲ. ತುಂಬಾ ಕಷ್ಟ ಎದುರಾದರೆ ನೇಣಿಗೆ ಶರಣಾಗುತ್ತಾನೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ಏಕ ಬೆಳೆ ಪದ್ಧತಿ ಕೈಬಿಟ್ಟು ಬಹು ಬೆಳೆ ಪದ್ಧತಿಯನ್ನು ಅನುಸರಿಸಬೇಕು. ಒಂದು ಬೆಳೆ ಕೈ ಕೊಟ್ಟರೆ ಇನ್ನೊಂದು ಬೆಳೆ ಕೈಹಿಡಿಯುತ್ತದೆ. ಇದರಿಂದ ಸ್ಥಿರ ಬದುಕು ನಡೆಸಲು ಸಾಧ್ಯವಾಗುತ್ತದೆ. ಅರಣ್ಯ ಬೆಳೆಗೆ ವಿಶೇಷ ಗಮನ ಕೊಡುವ ಅಗತ್ಯವಿಲ್ಲ. ಹಾಗಾಗಿ, ತೋಟಗಾರಿಕೆ ಬೆಳೆಯಲ್ಲಿ ಅರಣ್ಯ ಕೃಷಿ ಮಾಡಬೇಕು. ದಾಳಿಂಬೆ, ಮಾವಿನ ಗಿಡ, ಪೆರಲ್‌ ಗಿಡ, ಬಾಳೆ, ನಿಂಬೆ, ಬೆಟ್ಟದ ನೆಲ್ಲಿಕಾಯಿ, ಕರಿಬೇವು, ಮೋಸಂಬಿ, ಬೆಳೆಯಬೇಕು. ಸಾವಯವ ಕೃಷಿಯ ಮೂಲಕ ಮಣ್ಣಿನ ಆರೋಗ್ಯ ಕಾಪಾಡಿ ಉತ್ತಮ ಬೆಳೆ ಬೆಳೆದು ಮಾರುಕಟ್ಟೆಗೆ ಸಡ್ಡು ಹೊಡೆದು ನಿಲ್ಲಬೇಕು. ಯಾರ ಬಳಿಯೂ ಕೈ ಒಡ್ಡ ಬಾರದು’ ಎಂದು ಸಲಹೆ ನೀಡಿದರು.

‘ಕುರಿ ಸಾಕಾಣಿಕೆ, ಜೇನು ಸಾಕಾಣಿಕೆ, ಕೋಳಿ ಸಾಕಾಣಿಕೆಯನ್ನು ಉಪಕಸುಬನ್ನಾಗಿ ಮಾಡಿಕೊಳ್ಳಬೇಕು. ರೈತರು ಕ್ಷುಲ್ಲಕ ಕಾರಣಕ್ಕೆ ಸಾವಿಗೆ ಶರಣಾಗಿ ಹೆಂಡತಿ, ಮಕ್ಕಳನ್ನು ಕಷ್ಟಕ್ಕೆ ದೂಡಬಾರದು. ಈಸಬೇಕು ಇದ್ದು ಜಯಿಸಬೇಕು. ಭೂಮಿ ತಾಯಿ ಎಂದಿಗೂ ನಂಬಿದ ರೈತನ ಕೈ ಬಿಡುವುದಿಲ್ಲ ಎಂಬ ದೃಢ ನಂಬಿಕೆ ರೈತರಲ್ಲಿರಬೇಕು. ಇತರ ಉದ್ಯೋಗಿಗಳಂತೆ ಉತ್ತಮ ಜೀವನ ನಡೆಸಬೇಕು. ತುಳಿಯುವ ಸಮಾಜವನ್ನು ಎತ್ತಿ ಬಿಸಾಕುವ ಶಕ್ತಿ ನಮ್ಮಲ್ಲಿರಬೇಕು. ಕಷ್ಟಪಟ್ಟರೆ ಎಲ್ಲವನ್ನೂ ಸಾಧ್ಯವನ್ನಾಗಿಸಬಹುದು’ ಎಂದು ಹುರಿದುಂಬಿಸಿದರು.

ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ‘ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳದೆ ಸಮಸ್ಯೆಗಳಿಂದ ಹೊರ ಬರಲು ವಿಭಿನ್ನವಾಗಿ ಯೋಚಿಸಬೇಕು. ಅವಶ್ಯ ಕತೆ ಆವಿಷ್ಕಾರದ ತಾಯಿ ಎನ್ನುವುದನ್ನು ತಿಳಿದುಕೊಳ್ಳಬೇಕು’ ಎಂದು ಹೇಳಿದರು.

ಗುರುಬಸವ ಪಟ್ಟದ್ದೇವರು, ಶಿವಕುಮಾರ ಸ್ವಾಮೀಜಿ, ಪಂಚಾಕ್ಷರ ಸ್ವಾಮೀಜಿ, ಕೃಷಿ ಅಧಿಕಾರಿ ರವಿ ದೇಶಮುಖ, ಎಚ್.ಸಿ.ರುದ್ರಪ್ಪ, ಶಂಕರೆಪ್ಪ ಬೇವೂರ, ಬಸವರಾಜ ಬುಳ್ಳಾ, ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ಶ್ರೀಕಾಂತ ಸ್ವಾಮಿ ಮಾತನಾಡಿದರು.

ಆನಂದ ದೇವಪ್ಪ, ರೈತ ಸಂಘದ ಪ್ರಮುಖರಾದ ಮಲ್ಲಿಕಾರ್ಜುನ ಸ್ವಾಮಿ, ಸಿದ್ರಾಮಪ್ಪ ಅಣದೂರೆ, ಬಾಬುರಾವ್‌ ಜೋಳದಾಬಕಾ, ಶೇಷರಾವ್‌ ಕಣಜೆ ಉಪಸ್ಥಿತರಿದ್ದರು.

ಹಾನಗಲ್ಲ ಕುಮಾರಸ್ವಾಮಿ ಪ್ರಸಾದ ನಿಲಯದ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ನಾಗಯ್ಯ ಸ್ವಾಮಿ ಸ್ವಾಗತಿಸಿದರು.

**

ಜವಾನನಿಗೆ ಹೆಣ್ಣು ಕೊಡಲು ಜನರು ಮುಂದೆ ಬರುತ್ತಿದ್ದಾರೆ. ರೈತನಿಗೆ ಹೆಣ್ಣು ಕೊಡಲು ಹಿಂದೇಟು ಹಾಕುತ್ತಿರುವುದು ಕಳವಳಕಾರಿ ಸಂಗತಿ -
ಕವಿತಾ ಮಿಶ್ರಾ,

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.