ADVERTISEMENT

ಬಿಎಸ್‌ಪಿ ಮುಖಂಡರ ಸಾಮೂಹಿಕ ರಾಜೀನಾಮೆ

ಮೈತ್ರಿ ನೆಪದಲ್ಲಿ ಟಿಕೆಟ್‌ ಮಾರಾಟ ಆರೋಪ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 7:52 IST
Last Updated 21 ಮಾರ್ಚ್ 2018, 7:52 IST

ಬೀದರ್‌: ಜೆಡಿಎಸ್ ಜತೆಗಿನ ಮೈತ್ರಿ ವಿರೋಧಿಸಿ ಹಾಗೂ ಪದಾಧಿಕಾರಿಗಳ ‘ಏಕಪಕ್ಷೀಯ ನಿರ್ಧಾರ’ವನ್ನು ಖಂಡಿಸಿ ಬಿಎಸ್‌ಪಿ ರಾಜ್ಯ ಘಟಕದ ಉಪಾಧ್ಯಕ್ಷ ಸೈಯದ್‌ ಜುಲ್ಫೇಕಾರ್‌ ಹಾಸ್ಮಿ ಸೇರಿ ಜಿಲ್ಲೆಯ 12 ಮುಖಂಡರು ಸೋಮವಾರ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.

‘ಬಿಎಸ್‌ಪಿ ರಾಜ್ಯ ಉಸ್ತುವಾರಿ ಅಶೋಕ ಸಿದ್ಧಾರ್ಥ, ಮಾರಸಂದ್ರ ಮುನಿಯಪ್ಪ ಹಾಗೂ ಎನ್‌.ಮಹೇಶ್‌ ಪಕ್ಷದ ಮೂಲ ಸಿದ್ಧಾಂತವನ್ನೇ ಬುಡಮೇಲು ಮಾಡಲು ಹೊರಟಿದ್ದಾರೆ. ಇವರು ಬಹುಜನ ಚಳವಳಿಯನ್ನೇ ಹತ್ತಿಕ್ಕಲು ಪ್ರಯತ್ನಿಸುತ್ತಿರುವುದರಿಂದ ಜಿಲ್ಲೆಯ ಮುಖಂಡರು ಸಾಮೂಹಿಕವಾಗಿ ಪಕ್ಷವನ್ನು ತೊರೆಯುತ್ತಿದ್ದೇವೆ’ ಎಂದು ಮಾಜಿ ಶಾಸಕರೂ ಆದ ಹಾಸ್ಮಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕಾನ್ಶಿರಾಂ ಬಹುಜನರಿಗೆ ರಾಜಕೀಯ ಅಧಿಕಾರ ಕೊಡಿಸಲು ಬಹುಜನ ಸಮಾಜ ಪಕ್ಷವನ್ನು ಕಟ್ಟಿದರು. 1994ಲ್ಲಿ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಮತದಾರರು ನನ್ನನ್ನು ಬಿಎಸ್‌ಪಿಯಿಂದ ಆಯ್ಕೆ ಮಾಡಿದ್ದರು. ಉತ್ತರ ಪ್ರದೇಶದ ವೀರಸಿಂಗ್‌ ಹಾಗೂ ಅಶೋಕ ಸಿದ್ಧಾರ್ಥ ರಾಜ್ಯದ ಉಸ್ತುವಾರಿ ವಹಿಸಿಕೊಂಡಾಗಿನಿಂದ ಪಕ್ಷ ದುರ್ಬಲಗೊಂಡಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎನ್‌.ಮಹೇಶ್‌ ಹಾಗೂ ಮಾಜಿ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಜತೆಗೆ ಒಳ ಒಪ್ಪಂದ ಮಾಡಿಕೊಂಡು, ಪಕ್ಷಕ್ಕಾಗಿ ದುಡಿದವರಿಗೆ ಟಿಕೆಟ್‌ ದೊರೆಯದಂತೆ ಮಾಡಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಪಕ್ಷದ ಜಿಲ್ಲಾ ಘಟಕದ ಪದಾಧಿಕಾರಿಗಳ ಸಭೆ ನಡೆಸದೇ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಪ್ರಬಲ ಅಭ್ಯರ್ಥಿಗಳೇ ಇಲ್ಲದ ಕ್ಷೇತ್ರಗಳನ್ನು ಬಿಎಸ್‌ಪಿಗೆ ಬಿಟ್ಟುಕೊಡಲಾಗಿದೆ. ರಾಜ್ಯ ಮುಖಂಡರು ಚುನಾವಣೆಯ ಪೂರ್ವದಲ್ಲೇ ಹಣದ ವ್ಯವಹಾರ ನಡೆಸಿರುವುದು ಗುಟ್ಟಾಗಿ ಉಳಿದಿಲ್ಲ’ ಎಂದು ದೂರಿದರು.

‘ನಾನು ಸೈಯದ್ ಜುಲ್ಫೇಕಾರ್‌ ಹಾಸ್ಮಿ, ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಅಂಕುಶ ಗೋಖಲೆ, ಜಿಲ್ಲಾ ಸಂಯೋಜಕ ವಹೀದ್ ಲಖನ್, ವಿಧಾನಸಭಾ ಕ್ಷೇತ್ರ ಹಾಗೂ ತಾಲ್ಲೂಕು ಘಟಕಗಳ ಮಾಜಿ ಅಧ್ಯಕ್ಷರಾದ ಅಶೋಕ ಮಾಳಗೆ, ರಾಹುಲ್ ಸಿಂಧೆ, ಕಪಿಲ್‌ ಗೋಡಬೋಲೆ, ಅಶೋಕ ಮಂಠಾಳಕರ್, ಜಮೀಲ್‌ಖಾನ್, ಅಲಿ ಅಹಮ್ಮದ್‌ ಖಾನ್, ಅಂಬಾದಾಸ ಚಕ್ರವರ್ತಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸಾಮೂಹಿಕ ರಾಜೀನಾಮೆ ನೀಡಿದ್ದೇವೆ’ ಎಂದು ತಿಳಿಸಿದರು.

ಪ್ರತಿಕಾಗೋಷ್ಠಿಯಲ್ಲಿ ಅಂಕುಶ ಗೋಖಲೆ, ವಹೀದ್‌ ಲಖನ್, ರಾಜಕುಮಾರ ಮೂಲಭಾರತಿ, ಅಲಿ ಅಹಮ್ಮದ್‌ ಖಾನ್, ಅಶೋಕ ಮಾಳಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.