ADVERTISEMENT

ಬೃಹತ್‌ ಸಭಾಭವನ ಉದ್ಘಾಟನೆ ಇಂದು

ಮಾಣಿಕ ಆರ್ ಭುರೆ
Published 13 ಡಿಸೆಂಬರ್ 2017, 9:15 IST
Last Updated 13 ಡಿಸೆಂಬರ್ 2017, 9:15 IST

ಬಸವಕಲ್ಯಾಣ: ರಾಜ್ಯದಲ್ಲಿಯೇ ಅತ್ಯಂತ ದೊಡ್ಡದಾಗಿರುವ 6,500 ಆಸನಗಳ ಇಲ್ಲಿನ ಸಭಾಭವನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಉದ್ಘಾಟಿಸಲಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವಕರ್ನಾಟಕ ನಿರ್ಮಾಣಕ್ಕಾಗಿ ಡಿಸೆಂಬರ್ 13 ರಿಂದ ಒಂದು ತಿಂಗಳ ಪ್ರವಾಸ ಮತ್ತು ಆಯ್ದ ಸ್ಥಳಗಳಲ್ಲಿ ಸಾಧನಾ ಸಮಾವೇಶ ಹಮ್ಮಿಕೊಂಡಿದ್ದು, ಬಸವಾದಿ ಶರಣರ ಕಾರ್ಯಕ್ಷೇತ್ರದಿಂದ ಪ್ರವಾಸ ಆರಂಭಿಸುತ್ತಿದ್ದು ಪ್ರಥಮವಾಗಿ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ನಿರ್ಮಾಣಗೊಂಡಿರುವ ಸಭಾಭವನದ ಜತೆಗೆ ಇತರೆ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ.

₹ 200 ಕೋಟಿಯ ತಾಲ್ಲೂಕಿನ 12 ಕೆರೆಗಳಿಗೆ ನೀರು ಭರ್ತಿ ಮಾಡುವ ಯೋಜನೆ ಒಳಗೊಂಡು ಒಟ್ಟು ₹ 300 ಕೋಟಿ ವೆಚ್ಚದ ಯೋಜನೆಗಳಿಗೆ ಶಂಕುಸ್ಥಾಪನೆ ಕೂಡ ನೆರವೇರಿಸಲಿದ್ದಾರೆ.

ADVERTISEMENT

ಬಸವಕಲ್ಯಾಣ ಅಭಿವೃದ್ಧಿ ಮಂಡಳಿಗೆ ಮುಖ್ಯಮಂತ್ರಿ ಅವರೇ ಅಧ್ಯಕ್ಷರಾಗಿದ್ದು, ಮಂಡಳಿ 2005 ರಲ್ಲಿ ಆಸ್ತಿತ್ವಕ್ಕೆ ಬಂದಿದ್ದು ಇದುವರೆಗೆ ₹ 74 ಕೋಟಿ ವೆಚ್ಚದಲ್ಲಿ 19 ಶರಣ ಸ್ಮಾರಕಗಳ ಕಾಮಗಾರಿ ಪೂರ್ಣಗೊಂಡಿದೆ.

ಮಡಿವಾಳ ಮಾಚಿದೇವರ ಹೊಂಡ, ಶರಣ ನುಲಿ ಚಂದಯ್ಯನವರ ಗುಹೆ, ಸಮಗಾರ ಹರಳಯ್ಯನವರ ಗುಹೆ, ನಿಜಶರಣ ಅಂಬಿಗರ ಚೌಡಯ್ಯನವರ ಗುಹೆ, ಶರಣ ಉರಿಲಿಂಗ ಪೆದ್ದಿ ದೇವಸ್ಥಾನ, ಸಭಾಭವನ, ಅಕ್ಕಮಹಾದೇವಿ ಗುಹೆ, ಪ್ರಭುದೇವರ ಗದ್ದುಗೆ ಮಠ, ತ್ರಿಪುರಾಂತಕೇಶ್ವರ ದೇವಸ್ಥಾನದ ಆವರಣದಲ್ಲಿ ಕೆತ್ತನೆ ಕಲ್ಲುಗಳ ಮಂಟಪ, ಉದ್ಯಾನ ಗಳನ್ನು ನಿರ್ಮಿಸಿ ಅಭಿವೃದ್ಧಿ ಪಡಿಸಲಾಗಿದೆ.

ಸಭಾಭವನವು 67 ಸಾವಿರ ಚದರ ಅಡಿ ಜಾಗದಲ್ಲಿ ನಿರ್ಮಾಣಗೊಂಡಿದೆ. ನಾಲ್ಕು ಕಡೆಗಳಲ್ಲಿ ಪ್ರವೇಶದ್ವಾರಗಳಿದ್ದು ಅವುಗಳ ಮೇಲೆ ಆಕರ್ಷಕ ಗುಂಬಜ್ ಆಕಾರದ ಗೋಪುರಗಳನ್ನು ಕಟ್ಟಲಾಗಿದೆ. ಒಳಗಡೆ ಪೂರ್ವಾಭಿಮುಖವಾಗಿ ವೇದಿಕೆಯಿದೆ. ಹಾಗೂ 6500 ಸ್ಟೀಲ್ ಕುರ್ಚಿಗಳನ್ನು ಅಳವಡಿಸಲಾಗಿದೆ.

ಪ್ರೇಕ್ಷಕರು ಬಾಲ್ಕನಿಯಲ್ಲಿ ಮತ್ತು ಸುತ್ತಲಿನ ವರಾಂಡಾದಲ್ಲಿಯೂ ಕುಳಿತುಕೊಂಡು ಕಾರ್ಯಕ್ರಮ ವೀಕ್ಷಿಸಬಹುದಾಗಿದೆ. ಭವನವು ಒಟ್ಟು 8 ಸಾವಿರ ಜನರು ಹಿಡಿಯುವಷ್ಟು ಸಾಮರ್ಥ್ಯ ಹೊಂದಿದೆ.

‘ಸಭಾ ಭವನವನ್ನು ₹ 20 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಕೂಡಲಸಂಗಮದಲ್ಲಿರುವ ಸಭಾಭವನಕ್ಕಿಂತಲೂ ಇದು ದೊಡ್ಡದಾಗಿದೆ. ಧ್ವನಿವರ್ಧಕದ ವ್ಯವಸ್ಥೆ, ಉತ್ತಮ ಬೆಳಕಿನ ವ್ಯವಸ್ಥೆಯಿದೆ. ಗ್ರಂಥಾಲಯ, ಗಣ್ಯರ ವಿಶ್ರಾಂತಿ ಕೋಣೆ, ಅತಿಥಿಗಳ ಕೊಠಡಿಗಳು, ಸ್ನಾನಗೃಹ, ಶೌಚಾಲಯದ ವ್ಯವಸ್ಥೆಯೂ ಇದೆ’ ಎಂದು ಮಂಡಳಿ ನಿರ್ಧೇಶಕ ಶಿವರಾಜ ನರಶೆಟ್ಟಿ ತಿಳಿಸಿದ್ದಾರೆ.

‘ಎದುರಲ್ಲಿ ವಿಶಾಲವಾದ ಮೈದಾನವಿರುವ ಕಾರಣ ವಾಹನ ನಿಲುಗಡೆಯ ಸಮಸ್ಯೆಯಿಲ್ಲ. ಎರಡು ದ್ವಾರಗಳವರೆಗೆ ವಾಹನಗಳು ಬರುವಂತೆ ರಸ್ತೆ ನಿರ್ಮಿಸಲಾಗಿದೆ. ಸುತ್ತಲಿನಲ್ಲಿ ಹೂಗಿಡ, ಹುಲ್ಲು ಬೆಳೆಸಲಾಗುತ್ತಿದೆ’ ಎಂದಿದ್ದಾರೆ.

* * 

ಮುಖ್ಯಮಂತ್ರಿಯವರು ಇಲ್ಲಿನ ಸಮಾವೇಶದಲ್ಲಿ ₹ 600 ಕೋಟಿ ವೆಚ್ಚದ ಅನುಭವ ಮಂಟಪ ನಿರ್ಮಾಣದ ಘೋಷಣೆ ಮಾಡುವ ಸಾಧ್ಯತೆಯಿದೆ
ಶಿವರಾಜ ನರಶೆಟ್ಟಿ ನಿರ್ದೇಶಕ, ಬಸವಕಲ್ಯಾಣ ಅಭಿವೃದ್ಧಿ ಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.