ADVERTISEMENT

ಬ್ಯಾರೇಜ್ ಕಾಮಗಾರಿ ಕಳಪೆ: ಆರೋಪ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 4:17 IST
Last Updated 19 ಏಪ್ರಿಲ್ 2017, 4:17 IST
ಭಾಲ್ಕಿ: ಬ್ಯಾರೇಜ್ ನಿರ್ಮಾಣ ಕಾಮಗಾರಿ ಕಳಪೆಯಾಗಿರುವ ಕಾರಣ ಬೇಸಿಗೆ ಕಾಲದಲ್ಲಿ ಕಾರಂಜಾ ಜಲಾಶಯದಿಂದ ಹರಿಬಿಟ್ಟ ನೀರಿನ ರಭಸಕ್ಕೆ ಬ್ಯಾರೇಜ್ ಒಡೆದು, ರೈತರ ಜಮೀನಿಗೆ ಹಾನಿ ಸಂಭವಿಸಿದೆ ಎಂದು ಮಾಜಿ ಶಾಸಕ ಪ್ರಕಾಶ ಖಂಡ್ರೆ ಆರೋಪಿಸಿದರು.
 
ತಾಲ್ಲೂಕಿನ ಗೋಧಿ ಹಿಪ್ಪರ್ಗಾ ಗ್ರಾಮಕ್ಕೆ ಬಿಜೆಪಿ ಮುಖಂಡರೊಂದಿಗೆ ಮಂಗಳವಾರ ಭೇಟಿ ನೀಡಿದ ಅವರು ಕುಸಿದ ಬ್ರಿಜ್ ಕಂ ಬ್ಯಾರೇಜ್‌ನ್ನು ಪರಿಶೀಲಿಸಿದರು.
 
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಳಪೆಮಟ್ಟದ ಬ್ಯಾರೇಜ್ ನಿರ್ಮಾಣ ಕಾಮಗಾರಿ ಕುರಿತು ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದರು. 
 
‘ಕ್ಷೇತ್ರದಲ್ಲಿ ಸಚಿವರು ಅಭಿವೃದ್ಧಿಪರ ಕಾರ್ಯ ಕೈಗೊಳ್ಳಲು ವಿಫಲರಾಗಿದ್ದಾರೆ. ಗೋಧಿ ಹಿಪ್ಪರ್ಗಾ-ಮಾಸಿಮಾಡ್ ಬ್ರಿಜ್ ಕಂ ಬ್ಯಾರೇಜ್ ಕುಸಿದಿರುವುದು ಇದಕ್ಕೆ ಸಾಕ್ಷಿ. ತಾಲ್ಲೂಕಿನ ಕಳಸದಾಳ, ಅಂಬೆಸಾಂಗವಿ, ಹುಪಳಾ ಕೆರೆ ಒಡೆದು 8 ತಿಂಗಳು ಕಳೆದರೂ ಇನ್ನೂ ದುರಸ್ತಿ ಭಾಗ್ಯ ಕೂಡಿ ಬಂದಿಲ್ಲ’ ಎಂದರು.
 
‘ಕ್ಷೇತ್ರವನ್ನು ಪ್ರತಿನಿಧಿಸುವ ಸಚಿವ ಈಶ್ವರ ಖಂಡ್ರೆ ಅವರ ಅವಧಿಯಲ್ಲಿ ಪೂರ್ಣಗೊಂಡ  4 ಬ್ಯಾರೇಜ್‌ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿವೆ ಬ್ಯಾರೇಜ್‌ಗಳಿಗೆ ಸರಿಯಾದ ರೀತಿಯಲ್ಲಿ ಗೇಟ್ ಅಳವಡಿಸದ ಪರಿಣಾಮ ಬ್ಯಾರೇಜುಗಳಲ್ಲಿ ಹನಿ ನೀರು ನಿಂತಿಲ್ಲ’ ಎಂದು ಆರೋಪಿಸಿದರು.
 
‘ಒಂದು ತಿಂಗಳೊಳಗೆ ಗೋಧಿಹಿಪ್ಪರ್ಗಾ-ಮಾಸಿಮಾಡ್ ಬ್ಯಾರೇಜ್ ದುರುಸ್ತಿಗೊಳಿಸಬೇಕು. 4 ಬ್ರಿಜ್ ಕಂ ಬ್ಯಾರೇಜ್‌ಗಳಲ್ಲಿ ನೀರು ನಿಲ್ಲಿಸುವ ವ್ಯವಸ್ಥೆಯಾಗಬೇಕು.
 
ವಾಗಲಗಾಂವ-ಭಾಟಸಾಂಗವಿ ಬ್ಯಾರೇಜ್ ಗೇಟ್ ಕೂಡಿಸಲು ಕ್ರಮ ಕೈಗೊಳ್ಳಬೇಕು ಮತ್ತು ಬ್ಯಾರೇಜ್‌ಗಳ ನಿರ್ಮಾಣದಲ್ಲಿ ಅವ್ಯವಹಾರ ಎಸಗಿದ ಗುತ್ತಿಗೆದಾರರ, ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. 
 
ಬಿಜೆಪಿ ಕಬ್ಬು ಬೆಳೆಗಾರರ ಪ್ರಕೋಷ್ಠದ ರಾಜ್ಯ ಸಂಚಾಲಕ ಡಿ.ಕೆ.ಸಿದ್ರಾಮ್‌ ಮಾತನಾಡಿ, ‘ತಾಲ್ಲೂಕಿನಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ. ಅಧಿಕಾರಿಗಳ ಮೇಲೆ ಸಚಿವರ ಹಿಡಿತ ಇಲ್ಲದಂತಾಗಿದೆ. ಪಟ್ಟಣದ ಉಪನ್ಯಾಸಕರ ಬಡಾವಣೆಯಿಂದ ತಳವಾಡ (ಕೆ) ವರೆಗೂ ಟೆಂಡರ್ ನಿಯಮ ಪಾಲಿಸದೇ ರಸ್ತೆ ಕಾಮಗಾರಿ ನಡೆದಿದೆ’ ಎಂದು ಆರೋಪಿಸಿದರು.
 
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಶಿವರಾಜ ಗಂದಗೆ, ಮುಖಂಡರಾದ ಸುಧೀರ ನಾಯಕ, ಸೂರಜ್‌ಸಿಂಗ್‌ ರಜಪೂತ್, ಪ್ರಭುರಾವ ಧೂಪೆ, ತಾಲ್ಲೂಕು ಅಧ್ಯಕ್ಷ ಗೋವಿಂದರಾವ ಬಿರಾದಾರ್, ಅಶೋಕ ತಮಾಸಂಗೆ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.