ADVERTISEMENT

‘ಮನುಷ್ಯತ್ವಕ್ಕಿಂತ ದೊಡ್ಡ ಧರ್ಮ ಇನ್ನೊಂದಿಲ್ಲ’

ಹುಮನಾಬಾದ್: ಜೀವನ ಮೌಲ್ಯ ಕುರಿತು ಮಾರ್ಗದರ್ಶಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2016, 9:29 IST
Last Updated 5 ಡಿಸೆಂಬರ್ 2016, 9:29 IST

ಹುಮನಾಬಾದ್: ‘ಹೆತ್ತ ತಂದೆ, ತಾಯಿ ನಮ್ಮ ಅಕ್ಕಪಕ್ಕದ ಮನೆಗಳಲ್ಲೇ ಹೊತ್ತಿನ ಕೂಳಿಗೂ ದಿಕ್ಕಿಲ್ಲದೇ ಜೀವನ್ಮರಣ ಮಧ್ಯ ಅದೆಷ್ಟೋ ಅಸಹಾಯಕರು ಹೋರಾಟ ನಡೆಸುತ್ತಿರುವಾಗ ನಾವು ವಿಶ್ವದ ಮೂಲೆಮೂಲೆ ಸಂಚರಿಸಿ ತೀರ್ಥಯಾತ್ರೆ ಮಾಡಿದರೇ ಯಾವುದೇ ದೇವರು ಮೆಚ್ಚುವುದಿಲ್ಲ. ನೊಂದವರ ನೆರವಾಗುವುದು ಕೋಟಿ ದೇವರ ಪೂಜೆಗೆ ಸಮಾನ ಎಂದು ‘ಹೈದರಾಬಾದ್ ಸಫಾ ಬೇತುಲಮಾನ್‌’ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷ ಮೌಲಾನಾ ಗಯಾಸ್‌ ಅಹ್ಮದ್ ಅಭಿಪ್ರಾಯಪಟ್ಟರು.

ಇಲ್ಲಿ ಶನಿವಾರ ಏರ್ಪಡಿಸಿದ್ದ ನೈತಿಕ ಮೌಲ್ಯ ಕುರಿತು ಮಾರ್ಗದರ್ಶಿ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ನಿಟ್ಟಿನಲ್ಲಿ ನಮ್ಮ ಸ್ವಯಂಸೇವಾ ಸಂಸ್ಥೆಯು ದೇಶದ ವಿವಿಧ ರಾಜ್ಯಗಳಲ್ಲಿ ಶಾಖೆಗಳನ್ನು ಹೊಂದಿದೆ. ಬಡ ಮಕ್ಕಳ ಶಿಕ್ಷಣ, ನಿರ್ಗತಿಕರ ಆರೋಗ್ಯ ಸೇವೆ, ಆರ್ಥಿಕ ಸಂಕಷ್ಟದಲ್ಲಿ ಇರುವವರ ವಿವಾಹ, ಅಂತ್ಯಕ್ರಿಯೆಗೆ ಆರ್ಥಿಕ ನೆರವು ನೀಡಿ ಸೇರಿದಂತೆ ದುರ್ಬಲ ವರ್ಗದವನ್ನು ಮುಖ್ಯ ವಾಹಿನಿಗೆ ತರುವುದೇ ಸಂಸ್ಥೆಯ ಉದ್ದೇಶವಾಗಿದೆ ಎಂದು ಹೇಳಿದರು.

ರಾಷ್ಟ್ರದ ನಿರ್ಮಾತೃಗಳಾಬೇಕಾದ ದೇಶದ ಯುವ ಸಮುದಾಯವು ಇಂದು ಗುಟ್ಕಾ, ಸಿಗರೇಟ್, ಮದ್ಯಪಾನ ಮುಂತಾದ ದುಶ್ಚಟಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿರುವುದು ನಿಜಕ್ಕೂ ಶೋಚನೀಯ ಸಂಗತಿ. ದುಶ್ಚಟಗಳಿಂದ ಮಾನಸಿಕ ಹಾಗೂ ದೈಹಿಕವಾಗಿ  ದುಷ್ಪರಿಣಾಮ ಉಂಟಾಗಲಿದೆ ಎಂದು ಹೇಳಿದರು.

ಪ್ರಜಾಪ್ರಭುತ್ವ ದೇಶದಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ. ಯಾರಿಗೂ ಹೆದರದೇ ಹಿಂದೂ–ಮುಸ್ಲಿಮರಿಬ್ಬರೂ ಸಹೋದರತ್ವದ ಭಾವದಿಂದ ಬಾಳಿ ಬದುಕಬೇಕು ಎಂದು ಅವರು ಸಲಹೆ ನೀಡಿದರು.

ಸ್ವಾರ್ಥದಿಂದ ಮನುಷ್ಯ ನೈತಿಕ ಮೌಲ್ಯ ಕುಸಿದು ವ್ಯಕ್ತಿ ವಾಮಮಾರ್ಗ ಮೊರೆ ಹೋಗುತ್ತಾನೆ. ಯಾವತ್ತೂ ಸತ್ಯ ಶುದ್ಧ ಕಾಯದಿಂದ ಬಂದ ಆದಾಯದಲ್ಲಿ ನೆಮ್ಮದಿ ಜೀವನ ಸಾಗಿಸಬೇಕು. ಜನಪರ ಕಾಳಜಿ ಹೊಂದಿರುವ  ಸಫಾ ಬೇತುಲಮಾನ ಸ್ವಯಂ ಸೇವಾ ಸಂಸ್ಥೆಯ ಸೇವೆ ಶ್ಲಾಘನೀಯ ಎಂದು ಮುಖಂಡ ಹಫೀಜ್‌ ಫಯಾಜುಲ್ಲಾ ಹೇಳಿದರು.

ಗಣ್ಯರಾದ ಮೌಲಾನಾ ಅತೀಕ್‌್ ರೆಹಮಾನ್, ಮೌಲಾನಾ ನಾಜೀರ್‌ ಅಹ್ಮದ್‌, ಮೌಲಾನಾ ಶಕೀಲಸಾಬ್, ಮೌಲಾನಾ ವಾಸಿಂ  ಖುಶ್ಮಿ, ಮೌಲಾನಾ ಫಯಾಜುಲ್ಲಾ, ಹಫೀಜಮಿಯ್ಯಾ  ಇದ್ದರು.  ಇದೇ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.