ADVERTISEMENT

ಮಾಹಿತಿ ನೀಡದ ಇಬ್ಬರಿಗೆ ದಂಡ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 6:02 IST
Last Updated 21 ಏಪ್ರಿಲ್ 2017, 6:02 IST

ಬೀದರ್: ಅರ್ಜಿದಾರರಿಗೆ ಸಕಾಲದಲ್ಲಿ ಮಾಹಿತಿ ಒದಗಿಸದ ಹುಮನಾಬಾದ್‌ ತಾಲ್ಲೂಕಿನ ಇಬ್ಬರು ಅಧಿಕಾರಿಗಳಿಗೆ ದಂಡವಿಧಿಸಲಾಗಿದೆ ಎಂದು ರಾಜ್ಯ ಮಾಹಿತಿ ಆಯುಕ್ತ ಶಂಕರ ಆರ್.ಪಾಟೀಲ ತಿಳಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ  ಗುರುವಾರ  ವಿಡಿಯೊ ಕಾನ್ಫರೆನ್ಸ್ ಮೂಲಕ ಆರ್‌ಟಿಐ ಪ್ರಕರಣಗಳ ವಿಚಾರಣೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹುಮನಾಬಾದ್ ತಾಲ್ಲೂಕಿನ ಕಲ್ಲೂರಿನ ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೋಮಶೇಖರ್‌ ಅವರಿಗೆ  ₹10,000 ಹಾಗೂ ಹುಮನಾಬಾದ್‌ನ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ(ಸಿಡಿಪಿಒ) ಶಂಭುಲಿಂಗ ಅವರಿಗೆ ₹5,000 ದಂಡ ವಿಧಿಸಲಾಗಿದೆ’ ಎಂದು ಹೇಳಿದರು.

‘ಮಾಹಿತಿ ಕೇಳಿದ ವ್ಯಕ್ತಿಗೆ ಒಂದು ತಿಂಗಳಲ್ಲಿ ಮಾಹಿತಿ ನೀಡಬೇಕು. ಮಾಹಿತಿ ಆಯೋಗವು ಸೂಚನೆ ನೀಡಿದ ನಂತರವೂ  ಅರ್ಜಿದಾರರಿಗೆ ಸರಿಯಾದ ಸಮಯಕ್ಕೆ ಮಾಹಿತಿ ನೀಡದ ಕಾರಣ ದಂಡ ವಿಧಿಸಲಾಗಿದೆ’ ಎಂದರು.‘ಹುಮನಾಬಾದ್‌ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗೋವಿಂದರಾವ್‌ ಹಾಗೂ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್‌. ಅಪರಂಜಿ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಫಾರಸು ಮಾಡಲಾಗಿದೆ’ ಎಂದು ತಿಳಿಸಿದರು.

‘ವ್ಯಕ್ತಿಯೊಬ್ಬರು ಒಂದು ವರ್ಷದ ಹಿಂದೆ ಮಾಹಿತಿ ಕೇಳಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಆಯೋಗ ಬಿ.ಎಸ್‌. ಅಪರಂಜಿ ಅವರಿಗೆ ನೋಟಿಸ್‌ ಜಾರಿ ಮಾಡಿತು. ಸಹಕಾರ ಸಂಸ್ಥೆಗಳು ಆರ್‌ಟಿಐ ಅಡಿಯಲ್ಲಿ ಬರುವುದಿಲ್ಲ ಎನ್ನುವ ಒಂದೇ ಕಾರಣಕ್ಕೆ ವಿಚಾರಣೆಗೆ ಗೈರಾಗಿದ್ದಾರೆ. ಆಯೋಗದ ಮುಂದೆ ಹಾಜರಾಗಿ ಏನಿದ್ದರೂ ಸ್ಪಷ್ಟೀಕರಣ ನೀಡಬೇಕು. ನಿರ್ಲಕ್ಷ್ಯ ತೋರಿರುವ ಕಾರಣ ಅವರ ವಿರುದ್ಧ ಕ್ರಮಕ್ಕೆ ಮೇಲಧಿಕಾರಿಗೆ ಶಿಫಾರಸು ಮಾಡಲಾಗಿದೆ’ ಎಂದು ಹೇಳಿದರು.

ADVERTISEMENT

‘ಶೇ 95 ರಷ್ಟು ಪ್ರಕರಣಗಳಲ್ಲಿ ಮೊದಲ ಹಂತದ ಮೇಲ್ಮನವಿ ಪ್ರಾಧಿಕಾರ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಸಾರ್ವಜನಿಕ ಮಾಹಿತಿ ಅಧಿಕಾರಿ (ಪಿಐಒ)ಗಳು ಆಯೋಗದ ಮುಂದೆ ಹಾಜರಾಗುತ್ತಿಲ್ಲ. ಪಿಐಒ ಪರವಾಗಿ ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರನ್ನು ಕಳಿಸಿದರೆ ಪ್ರಯೋಜನ ಇಲ್ಲ. ಎರಡು ಅಥವಾ ಮೂರು ವರ್ಷಗಳವರೆಗೂ ಮಾಹಿತಿ ಕೊಡದಿದ್ದರೆ ಆರ್‌ಟಿಐ ಉದ್ದೇಶ ಈಡೇರುವುದಿಲ್ಲ’ ಎಂದುಅವರು ತಿಳಿಸಿದರು.

‘ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್(ಆರ್‌ಡಿಪಿಆರ್), ಕಂದಾಯ ಇಲಾಖೆ, ನಗರಾಭಿವೃದ್ಧಿ  ಪ್ರಾಧಿಕಾರ ಹಾಗೂ ಬಿಬಿಎಂಪಿಗೆ ಸಂಬಂಧಿಸಿದಂತೆ ಹೆಚ್ಚು ಅರ್ಜಿಗಳು ಬರುತ್ತಿವೆ. ಒಟ್ಟು 36 ಸಾವಿರ ಅರ್ಜಿಗಳು ಬಾಕಿ ಇವೆ.  ಈವರೆಗೆ  8,000 ಅರ್ಜಿಗಳ ವಿಲೇವಾರಿ ಮಾಡಿದ್ದೇನೆ’
ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.