ADVERTISEMENT

ಮಾಹಿತಿ ಹಕ್ಕು ಕಾಯ್ದೆ ಸಮಗ್ರ ಅರಿಯಿರಿ

ಅಧಿಕಾರಿಗಳಿಗೆ ಮಾಹಿತಿ ಆಯುಕ್ತ ಶಂಕರ ಪಾಟೀಲ ಸಲಹೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 4:42 IST
Last Updated 22 ಏಪ್ರಿಲ್ 2017, 4:42 IST
ಬೀದರ್‌: ‘ಮಾಹಿತಿ ಹಕ್ಕು ಕಾಯ್ದೆಯನ್ನು ಅಧಿಕಾರಿಗಳು ಸಮಗ್ರವಾಗಿ ಅರಿಯಬೇಕು’ ಎಂದು ರಾಜ್ಯ ಮಾಹಿತಿ ಆಯುಕ್ತ ಶಂಕರ ಪಾಟೀಲ ಸಲಹೆ ಮಾಡಿದರು.
 
ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಮಾಹಿತಿ ಹಕ್ಕು ಕಾಯ್ದೆಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದರು.
 
‘ಬಹುತೇಕರಿಗೆ ಕಾಯ್ದೆ ಅರಿವೇ ಇಲ್ಲ. ಕೆಲ ಇಲಾಖೆಗಳಲ್ಲಿ ಈ ಬಗೆಗೆ ಮಾಹಿತಿ ಫಲಕ ಹಾಕಿಲ್ಲ ಎನ್ನುವ ದೂರುಗಳು ಕೇಳಿ ಬರುತ್ತಿವೆ. ಕಾಯ್ದೆಯನ್ನು ಹಗುರವಾಗಿ ಪರಿಗಣಿಸಬಾರದು’ ಎಂದು ತಿಳಿಸಿದರು. 
 
‘ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಉದ್ದೇಶದಿಂದ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಹೀಗಾಗಿ ಯಾವುದೇ ಯೋಜನೆ ಇರಲಿ, ಅದಕ್ಕೆ ಬಂದ ಅನುದಾನ ಎಷ್ಟು, ಖರ್ಚಾದ ಅನುದಾನ ಎಷ್ಟು ಎಂಬಿತ್ಯಾದಿ ವಿಷಯಗಳ ಕುರಿತು ಅಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು’ ಎಂದು ಹೇಳಿದರು. 
 
ಮಾಹಿತಿ ಕೋರಿ ಸಲ್ಲಿಸುವ ಅರ್ಜಿಗಳಿಗೆ ಕೆಲ ಅಧಿಕಾರಿಗಳು ಅನಗತ್ಯ ಮಾಹಿತಿ ಒದಗಿಸಿ ಸಮಸ್ಯೆ ಎದುರಿಸುತ್ತಿರುವುದು ಕಂಡು ಬಂದಿದೆ. ಒಂದು ಪ್ರಶ್ನೆಗೆ ಒಂದೇ ಉತ್ತರ ನೀಡಬೇಕು. ಉಳಿದ ಪ್ರಶ್ನೆಗಳಿಗೆ ಮತ್ತೆ ಪ್ರತ್ಯೇಕವಾಗಿ ಉತ್ತರಿಸಬೇಕು ಎನ್ನುವ ತಿಳಿವಳಿಕೆಯೂ ಕೆಲವರಲ್ಲಿ ಇಲ್ಲ. ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ’ ಎಂದು ತಿಳಿಸಿದರು.
 
‘ಮಾಹಿತಿ ಹಕ್ಕು ಕಾಯ್ದೆ ಅರ್ಜಿಗಳ ವಿಚಾರಣೆಗೆ ಅಧಿಕಾರಿಗಳು ಖುದ್ದು ಹಾಜರಾಗದೆ ತಮ್ಮ ಅಧೀನ ಅಧಿಕಾರಿಗಳನ್ನು ಕಳಿಸುತ್ತಿದ್ದಾರೆ. ಹೀಗಾಗಿ ವಿಚಾರಣೆ ವೇಳೆ ಅವರು ಸರಿಯಾದ ಮಾಹಿತಿ ನೀಡಲು ಆಗುತ್ತಿಲ್ಲ. ಪ್ರಕರಣ ವಿಲೇವಾರಿ ವಿಳಂಬ ಆಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
 
ಅರ್ಜಿ ಪಡೆಯುವ, ಮಾಹಿತಿ ಒದಗಿಸುವ ವಿಷಯಗಳಿಗೆ ಸಂಬಂಧಿಸಿದಂತೆ ಕೆಲ ಅಧಿಕಾರಿಗಳಲ್ಲಿದ್ದ ಅನುಮಾನಗಳನ್ನು ಅವರು ಹೋಗಲಾಡಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಡಿ. ಷಣ್ಮುಖ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು, ಚುನಾವಣಾ ತಹಶೀಲ್ದಾರ್‌ ಶಾಂತಲಾ ಚಂದನ, ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.