ADVERTISEMENT

ಮೂಲಸೌಲಭ್ಯ ವಂಚಿತ ಮಲ್ಕಾಪುರ

​ಪ್ರಜಾವಾಣಿ ವಾರ್ತೆ
Published 23 ಮೇ 2017, 7:18 IST
Last Updated 23 ಮೇ 2017, 7:18 IST
ಹುಮನಾಬಾದ್ ತಾಲ್ಲೂಕಿನ ಮಲ್ಕಾಪುರ ಗ್ರಾಮದ ರಸ್ತೆಬದಿಯ ಚರಂಡಿಯಲ್ಲಿ ತ್ಯಾಜ್ಯ ಸಂಗ್ರಹಗೊಂಡಿರುವುದು
ಹುಮನಾಬಾದ್ ತಾಲ್ಲೂಕಿನ ಮಲ್ಕಾಪುರ ಗ್ರಾಮದ ರಸ್ತೆಬದಿಯ ಚರಂಡಿಯಲ್ಲಿ ತ್ಯಾಜ್ಯ ಸಂಗ್ರಹಗೊಂಡಿರುವುದು   

ಹುಮನಾಬಾದ್: ತಾಲ್ಲೂಕಿನ ಮದರ ಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಮಲಪುರ ಗ್ರಾಮವು ಮೂಲ ಸೌಲಭ್ಯಗಳ ಕೊರತೆ ಎದುರಿಸುತ್ತಿದೆ. ತಾಲ್ಲೂಕು ಕೇಂದ್ರದ ರಾಷ್ಟ್ರೀಯ ಹೆದ್ದಾರಿ 9ರಿಂದ 6ಕಿ.ಮೀ ದೂರ ದಲ್ಲಿರುವ ಈ ಕುಗ್ರಾಮದಲ್ಲಿ 225 ಮನೆ ಗಳಿದ್ದು, ಒಂದೂವರೆ ಸಾವಿರ ಜನಸಂಖ್ಯೆಯಿದೆ.

ಊರಿನ ಬಹುತೇಕ ಓಣಿಗಳಲ್ಲಿ ಸಿಸಿ ರಸ್ತೆ ನಿರ್ಮಿಸಲಾಗಿದೆ. ಆದರೆ ಗ್ರಾಮದ ಕುಂಬಾರ ಓಣಿ ಹೊರತು ಪಡಿಸಿದರೇ ಬೇರೆ ಓಣಿಯಲ್ಲಿ ಚರಂಡಿ ಸೌಲಭ್ಯ ಕಲ್ಪಿಸಿಲ್ಲ. ಇದರಿಂದ ತ್ಯಾಜ್ಯ ನೀರು ರಸ್ತೆಯಲ್ಲಿ ಹರಿಯು ವುದರಿಂದ ಗ್ರಾಮಸ್ಥರು ರೋಗ ಭೀತಿಯ ಆತಂಕದಲ್ಲಿದ್ದಾರೆ.

ಕಾರಂಜಾ ಜಲಾಶಯದಿಂದ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದ್ದ ಚುನಾಯಿತ ಪ್ರತಿನಿಧಿ ಹಾಗೂ ಅಧಿಕಾರಿಗಳ ಹೇಳಿಕೆ ಭರವಸೆ ಯಾಗಿಯೇ ಉಳಿದಿದೆ.

ADVERTISEMENT

ಗ್ರಾಮದ ಶೇ25ರಷ್ಟು ಮನೆಗಳು ವೈಯಕ್ತಿಕ ಶೌಚಾಲಯ ಹೊಂದಿಲ್ಲ. ಗ್ರಾಮದಲ್ಲಿ ಸಮುದಾಯ ಶೌಚಾಲಯ ಇಲ್ಲದೇ ಇರುವುದರಿಂದ ಪರಿಶಿಷ್ಟರ ಓಣಿ ಸೇರಿದಂತೆ ಇತರೆ ಸಮುದಾಯದ ಮಹಿಳೆಯರು ಬಯಲು ಶೌಚಾಲ ಯವನ್ನೇ ಅವಲಂಬಿಸಿದ್ದಾರೆ ಎಂದು ಹೇಳುತ್ತಾರೆ ಗ್ರಾಮದ ರಾಜಕುಮಾರ ಜಾಳಗಿ.

ದಶಕ ಹಿಂದೆ ಮದರಗಾಂವ್‌ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ಯುತ್ತಮ ಶಾಲೆ ಎಂಬ ಕೀರ್ತಿಗೆ ಪಾತ್ರವಾಗಿದ್ದ ಗ್ರಾಮದ ಸರ್ಕಾರಿ ಪೂರ್ವ ಪ್ರಾಥಮಿಕ ಶಾಲೆಗೆ ಕ್ರೀಡಾ ಮೈದಾನ, ಪ್ರತ್ಯೇಕ ಕೊಳವೆಬಾವಿ ವ್ಯವಸ್ಥೆ ಇಲ್ಲ. ಅಲ್ಲದೇ ಗ್ರಾಮಕ್ಕೆ  ಬರುವ ಏಕೈಕ ಬಸ್‌ ಆಗಾಗ್ಗೆ ಕೈಕೊಡುವುದರಿಂದ ಹೆಚ್ಚುವರಿ ಬಸ್‌ ಸಂಚಾರ ವ್ಯವಸ್ಥೆ ಮಾಡಬೇಕು ಎನ್ನುತ್ತಾರೆ ಮುಖ್ಯಶಿಕ್ಷಕ ಗುರುಲಿಂಗಪ್ಪ.

‘ಉದ್ಯೋಗ ಖಾತರಿ ಯೋಜನೆ ಅಡಿ ಗ್ರಾಮದಲ್ಲಿ ಚರಂಡಿ ನಿರ್ಮಿಸಲು ತೀರ್ಮಾನಿಸಲಾಗಿದೆ. ಈ ಬಾರಿ ಕುಡಿಯುವ ನೀರಿನ ಸಮಸ್ಯೆ ಇಲ್ಲ.  ಬಸ್‌ ಸೌಲಭ್ಯ ಸಂಬಂಧ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾ ಗುವುದು. ಸರ್ಕಾರಿ ಜಾಗದ ಕೊರತೆ ಕಾರಣ ಶಾಲೆಗೆ ಸೌಲಭ್ಯ ಒದಗಿಸಲು ಸಾಧ್ಯವಾಗುತ್ತಿಲ್ಲ’ ಎಂದು ಪಿಡಿಒ ಬಾಲಮಣಿ ತಿಳಿಸಿದರು.

‘ಈ ಗ್ರಾಮದಲ್ಲಿ ಹನುಮಂತ, ವಾಲ್ಮೀಕಿ, ನಾಗಣ್ಣ, ಲಕ್ಷ್ಮಿ, ಮಹಾದೇವ, ಭವಾನಿ, ಮರಗೆಮ್ಮ, ಬಸವಣ್ಣ ಸೇರಿದಂತೆ 10ಕ್ಕೂ ಅಧಿಕ ದೇವಸ್ಥಾನಗಳಿದ್ದು, ಒಂದು ದರ್ಗಾ ಇದೆ. ವರ್ಷಕ್ಕೊಮ್ಮೆ ದರ್ಗಾದಲ್ಲಿ ಉರುಸ್‌ ನಡೆದರೆ, ಪ್ರತಿ ದೀಪಾವಳಿಯ ಬಲಿಪಾಢ್ಯಮಿಯಂದು ಮಾಳಿಂಗ ರಾಯ ದೇವರ ಜಾತ್ರೆ ಬಹಳ ಅದ್ದೂರಿ ಯಾಗಿ ನೆರವೇರುತ್ತದೆ.

ಊರಿನ ಉರುಸ್‌ ಮತ್ತು ಜಾತ್ರೆಯಲ್ಲಿ ಸರ್ವ ಧರ್ಮಿಯರು ಪಾಲ್ಗೊಂಡು ಪೂಜೆ  ಸಲ್ಲಿಸುವುದು ಗ್ರಾಮಸ್ಥರ ಕೋಮು ಸಾಮರಸ್ಯಕ್ಕೆ ಹಿಡಿದ ಕನ್ನಡಿ. ಇದೂ ಇತರೆ ಗ್ರಾಮ ಗಳಿಗೆ ಮಾದರಿ ನ್ನುತ್ತಾರೆ ರಾಜಪ್ಪ ಜಾಳಗಿ, ದಿಲೀಪ ಎಣಕೂರೆ.

* * 

ಸ್ಥಳ ಅಭಾವದ ಕಾರಣ ಶಾಲೆಯಲ್ಲಿ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಹೊಸ ಕಟ್ಟಡ ಹಾಗೂ ಆಟದ ಮೈದಾನ ನಿರ್ಮಿಸಬೇಕು.
ಇರ್ಪಣ್ಣ ಖಂಡಗೊಂಡ, ಗ್ರಾಮಸ್ಥ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.