ADVERTISEMENT

‘ಮೌಲ್ಯಯುತ ಶಿಕ್ಷಣದಿಂದ ಭವಿಷ್ಯ ಉಜ್ವಲ’

ಜನಸೇವಾ ಶಾಲೆಯಲ್ಲಿ ಅಕ್ಷರ ಅಭ್ಯಾಸಕ್ಕೆ ಸಿದ್ಧಾರೂಢ ಮಠದ ಗಣೇಶಾನಂದ ಸ್ವಾಮೀಜಿ ಚಾಲನೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 6:24 IST
Last Updated 13 ಜುಲೈ 2017, 6:24 IST

ಬೀದರ್: ‘ಮಕ್ಕಳಿಗೆ ಅಕ್ಷರ ಜ್ಞಾನ ನೀಡಿದರಷ್ಟೇ ಸಾಲದು. ಭವಿಷ್ಯ ಉಜ್ವಲವಾಗಲು ಸಂಸ್ಕಾರಯುತ ಶಿಕ್ಷಣ ಕೊಡಬೇಕು’  ಎಂದು ಸಿದ್ಧಾರೂಢ ಮಠದ ಗಣೇಶಾನಂದ ಸ್ವಾಮೀಜಿ ಹೇಳಿದರು.

ಜನಸೇವಾ ಪ್ರತಿಷ್ಠಾನ ಸಂಚಾಲಿತ ನಗರದ  ಜನಸೇವಾ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಮಕ್ಕಳ ಅಕ್ಷರ ಕಲಿಕೋತ್ಸವದಲ್ಲಿ ಅವರು ಮಾತನಾಡಿದರು.
‘ಹಿಂದೆ ಗುರುಕುಲ ಶಿಕ್ಷಣ ಪದ್ಧತಿಯಲ್ಲಿ ಮಕ್ಕಳಿಗೆ ಎಲ್ಲ ಬಗೆಯ ಶಿಕ್ಷಣವನ್ನೂ ನೀಡಲಾಗುತಿತ್ತು. ಬ್ರಿಟಿಷರ ಪ್ರವೇಶದ ನಂತರ ಎಲ್ಲವೂ ಬದಲಾಯಿತು. ಈಗ ಮಕ್ಕಳನ್ನು ಸಾಧ್ಯವಾದಷ್ಟು ಮನೆಯಿಂದ ದೂರ ಇಡುವ ಪ್ರವೃತ್ತಿ ಹೆಚ್ಚುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪಾಲಕರು ಮಕ್ಕಳ ಕಲಿಕೆಯ ಮೇಲೆ ನಿಗಾ ಇಡಬೇಕು. ಪ್ರತಿ ದಿನ ಒಂದಿಷ್ಟು ಸಮಯವನ್ನು ಮಕ್ಕಳೊಂದಿಗೆ ಕಳೆಯಬೇಕು. ಆತ್ಮೀಯವಾಗಿ ಮಾತನಾಡಿ ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಇದರಿಂದ ಪಾಲಕರು ಹಾಗೂ ಮಗುವಿನ ಸಂಬಂಧ ಇನ್ನಷ್ಟು ಗಟ್ಟಿಗೊಳ್ಳುತ್ತದೆ’ ಎಂದು ಸಲಹೆ ನೀಡಿದರು.

ADVERTISEMENT

‘ಪಾಲಕರು ಪ್ರಾರಂಭದಲ್ಲೇ ಸರಿಯಾಗಿ ಮಕ್ಕಳ ಉಪಚಾರ ಮಾಡಿದರೆ, ಮುಪ್ಪಿನಲ್ಲಿ ಮಕ್ಕಳು ಪಾಲಕರ ಯೋಗಕ್ಷೇಮದ ಬಗೆಗೆ ಕಾಳಜಿ ವಹಿಸಬಲ್ಲರು’ ಎಂದುಹೇಳಿದರು.
‘ಜನಸೇವಾ ಶಾಲೆಯಲ್ಲಿ ಅಕ್ಷರ  ಅಭ್ಯಾಸದ ಮೊದಲ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇಲ್ಲಿ ಸಂಸ್ಕಾರ ಸಹಿತ ಶಿಕ್ಷಣ ನೀಡಲಾಗುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಮನುಷ್ಯನ ಜೀವನದಲ್ಲಿ ವಿದ್ಯೆಗೆ ಮಹತ್ವದ ಸ್ಥಾನವಿದೆ. ವಿದ್ಯೆ ಇರುವಲ್ಲಿ ಸಂಪತ್ತು ನೆಲೆಯೂರುತ್ತದೆ. ಅರಸನನ್ನು ಆತನ ಪ್ರಜೆಗಳು ಮಾತ್ರ ಗೌರವಿಸುತ್ತಾರೆ. ಆದರೆ, ವಿದ್ವಾಂಸರನ್ನು ಇಡೀ ಜಗತ್ತು ಗೌರವಿಸುತ್ತದೆ’ ಎಂದು ಹೇಳಿದರು.

ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ‘ಅಕ್ಷರ ಅಭ್ಯಾಸವು ನಾಮಕರಣ, ಮದುವೆಯಷ್ಟೇ ಮಹತ್ವದ ದಿನವಾಗಿದೆ. ವಿದ್ಯಾರ್ಜನೆಯ ಮೊದಲ ಮೆಟ್ಟಿಲು ಅಕ್ಷರ ಅಭ್ಯಾಸ. ಎಲ್ಲ ಪಾಲಕರು ಇದನ್ನು ಹಬ್ಬದ ರೀತಿಯಲ್ಲಿ ಆಚರಿಸಬೇಕು ಎಂದು ಸಲಹೆ ನೀಡಿದರು.

‘ಅಕ್ಷರ ಅಭ್ಯಾಸಕ್ಕೆ ಮುಂಚೆ, ಆಂಧ್ರದ ಭಾಸರದಲ್ಲಿ ಇರುವ ಸರಸ್ವತಿ ಮಂದಿರಕ್ಕೆ ತೆರಳಿ ಪೂಜೆ, ಅರ್ಚನೆ ಮಾಡಲಾಗಿದೆ. ಮಕ್ಕಳ ಕಲಿಕೆ ನಿರ್ವಿಘ್ನವಾಗಿ ಮುಂದುವರೆಯಲಿ, ಯಶಸ್ಸು ಸಿಗಲಿ ಎಂದು ಪ್ರಾರ್ಥಿಸಲಾಗಿದೆ’ ಎಂದು ತಿಳಿಸಿದರು.

ಶಾಲೆಯ ಆಡಳಿತಾಧಿಕಾರಿ ಸೌಭಾಗ್ಯವತಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಬಸವರಾಜ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಸುನಂದಾ ಸ್ವಾಮಿ ನಿರೂಪಿಸಿದರು. ಮುಖ್ಯ ಶಿಕ್ಷಕಿ ನೀಲಮ್ಮ ಚಾಮರೆಡ್ಡಿ ವಂದಿಸಿದರು.

***

ಗುರುಕುಲ ಮಾದರಿ ಶಿಕ್ಷಣ ಹೆಚ್ಚು ಮಹತ್ವದ್ದಾಗಿದೆ. ಗುರುಕುಲದಲ್ಲಿ ವಿದ್ಯಾರ್ಥಿಗಳು ಎಲ್ಲ ಬಗೆಯ ಶಿಕ್ಷಣವನ್ನೂ ಪಡೆಯಲು ಸಾಧ್ಯವಿದೆ.
ಗಣೇಶಾನಂದ ಸ್ವಾಮೀಜಿ, ಸಿದ್ಧಾರೂಢ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.