ADVERTISEMENT

‘ರೈತರ ಉತ್ಪಾದಕ ಸಂಸ್ಥೆ ಸ್ಥಾಪಿಸಿ’

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 6:13 IST
Last Updated 20 ಜುಲೈ 2017, 6:13 IST

ಬೀದರ್‌: ‘ಒಂದೇ ವಿಧದ ಬೆಳೆ ಬೆಳೆಯುವ ಕನಿಷ್ಠ 50 ಜನ ರೈತರನ್ನು ಒಗ್ಗೂಡಿಸಿ ರೈತರ ಉತ್ಪಾದಕ ಸಂಸ್ಥೆ ಸ್ಥಾಪಿಸಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮುಂದೆ ಬರಬೇಕು’ ಎಂದು ಸಹಕಾರ ಇಲಾಖೆಯ ನಿಬಂಧಕ ಅಯ್ಯಪ್ಪ ತಿಳಿಸಿದರು.

13 ಜಿಲ್ಲೆಗಳ 50 ಆಯ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯ ನಿರ್ವಾಹಕರಿಗೆ ನಗರದ ಸಹಾರ್ದ ತರಬೇತಿ ಕೇಂದ್ರದಲ್ಲಿ ಈಚೆಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘5 ವಿವಿಧ ಬೆಳೆಗಳ ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಲು ಮುಂದಾದರೆ ನಬಾರ್ಡ್‌ ₹ 17.50 ಲಕ್ಷ ಸಹಾಯಧನ ನೀಡಲಿದೆ’  ಎಂದು ಹೇಳಿದರು.
‘ರೈತ ಉತ್ಪಾದಕ ಸಂಸ್ಥೆ ಸ್ಥಾಪಿಸಿದರೆ ರೈತರು ತಮ್ಮ ಉತ್ಪನ್ನಗಳನ್ನು ಸೂಕ್ತ ಬೆಲೆಗೆ ನೇರವಾಗಿ ಮಾರಾಟ ಮಾಡಬಹುದು. ಇದರಿಂದ ಮಧ್ಯವರ್ತಿಗಳ ಹಾವಳಿ ಕಡಿಮೆಯಾಗುತ್ತದೆ. ರೈತರು ಹಾಗೂ ಸಂಘಕ್ಕೆ ಲಾಭವಾಗುತ್ತದೆ’ ಎಂದು ಹೇಳಿದರು.

ADVERTISEMENT

‘ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಹಾಕಿಕೊಳ್ಳಬೇಕು. ರೈತರಿಗೆ ಬೆಳೆ ಸಾಲ, ರಸಗೊಬ್ಬರ, ಬೀಜ, ಕ್ರಿಮಿನಾಶಕ, ಯಂತ್ರೋಪಕರಣ, ದಾಸ್ತಾನು ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯ ನೀಡುವಂತೆ ಬೆಳೆಗಳಿಗೂ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು’ ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿರ್ದೇಶಕ ವಿಜಯಕುಮಾರ ಪಾಟೀಲ, ಬೀದರ್‌ ಪಟ್ಟಣ ಸಹಕಾರ ಬ್ಯಾಂಕ್‌ ಅಧ್ಯಕ್ಷ ಮಹಮ್ಮದ್‌ ಸಲೀಮುದ್ದೀನ್‌, ಸಹಕಾರ ಸಂಘಗಳ ಉಪ ನಿಬಂಧಕ ಮಲಕೂಡ, ಡಿಸಿಸಿ ಬ್ಯಾಂಕ್‌ ಕಾರ್ಯನಿರ್ವಹಣಾಧಿಕಾರಿ ಮಲ್ಲಿಕಾರ್ಜುನ ಮಹಾಜನ್‌, ಚಂದ್ರಶೇಖರ ಹತ್ತಿ, ಚನ್ನಬಸಯ್ಯ ಸ್ವಾಮಿ, ಅನಿಲಕುಮಾರ ಪಾಟೀಲ ಇದ್ದರು. ಸೌಹಾರ್ದ  ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು. ನಾಗಶೆಟ್ಟಿ ಘೋಡಂಪಳ್ಳಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.