ADVERTISEMENT

ಲಿಂಗಾಯತ ರ್‌್ಯಾಲಿಗೆ ಸಕಲ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 5:59 IST
Last Updated 19 ಜುಲೈ 2017, 5:59 IST

ಬೀದರ್‌: ‌ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಒತ್ತಾಯಿಸಿ ನಗರದಲ್ಲಿ ಬುಧವಾರ (ಜುಲೈ19) ನಡೆಯಲಿರುವ ಬೃಹತ್‌ ಮೆರವಣಿಗೆಗೆ ಲಿಂಗಾಯತ ಸಮುದಾಯದ ಸಂಘಟನೆಗಳು ಸಕಲ ಸಿದ್ಧತೆ ಮಾಡಿಕೊಂಡಿವೆ. ನಗರದಲ್ಲಿ ಈಗಾಗಲೇ ಬ್ಯಾನರ್‌, ಕಟೌಟ್‌ ಹಾಗೂ ಷಟಸ್ಥಲ ಧ್ವಜಗಳನ್ನು ಅಳವಡಿಸಲಾಗಿದೆ. ಎಸ್‌ಎಂಎಸ್‌, ವಾಟ್ಸ್ಆ್ಯಪ್‌ ಮೂಲಕವೂ ಸಂದೇಶ ಕಳುಹಿಸಿ ಜಾಗೃತಿ ಮೂಡಿಸಲಾಗಿದೆ.

ಬೀದರ್‌ನಲ್ಲಿ ನಡೆಯಲಿರುವ ರ್‌್ಯಾಲಿಯಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಲಿಂಗಾಯತರು ಭಾಗವಹಿಸಲಿದ್ದಾರೆ. ಮಹಾರಾಷ್ಟ್ರದ ದೇಗಲೂರು, ಔರಾದ್‌, ಜನವಾಡ ಕಡೆಯಿಂದ ಬರುವವರಿಗೆ ಚಿಕ್ಕಪೇಟೆಯ ಹನುಮಾನ ಮಂದಿರದ ಬಳಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಚಿಂಚೋಳಿ, ತಾಂಡೂರು ಹಾಗೂ ಜಹೀರಾಬಾದ್ ಕಡೆಯಿಂದ ಬರುವವರಿಗೆ ಬಿವಿಬಿ ಕಾಲೇಜಿನ ಆವರಣದಲ್ಲಿ ವಾಹನ ನಿಲುಗಡೆಗೆ ಅನುಕೂಲ ಮಾಡಲಾಗಿದೆ. ಹುಮನಾಬಾದ್‌ ಹಾಗೂ ಬಸವಕಲ್ಯಾಣ ಕಡೆಯಿಂದ ಬರುವವರಿಗೆ ಬೆಲ್ದಾಳೆ ಕಲ್ಯಾಣ ಮಂಟಪದಲ್ಲಿ ವಾಹನ ನಿಲುಗಡೆ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ.

ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಅಕ್ಕ ಅನ್ನಪೂರ್ಣ, ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದೇವರು ಜುಲೈ 10ರಂದು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಜುಲೈ 19ರಂದು ನಡೆಯಲಿರುವ ರ್‌್ಯಾಲಿಯಲ್ಲಿ ಲಿಂಗಾಯತ ಸಮಾಜದವರು ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.  ಕೌಠಾದ ಬೆಲ್ದಾಳ ಸಿದ್ಧರಾಮ ಶರಣರು, ಬಸವಪ್ರಭು ಸ್ವಾಮೀಜಿ, ಚನ್ನಾಬಸವಾನಂದ ಸ್ವಾಮೀಜಿ, ಶಾಸಕ ಅಶೋಕ ಖೇಣಿ, ಮಾಜಿ ಶಾಸಕ ಪ್ರಕಾಶ ಖಂಡ್ರೆ ಸೇರಿದಂತೆ ಲಿಂಗಾಯತ ಸಮುದಾಯದ ಪ್ರಮುಖರು ರ್‌್ಯಾಲಿಗೆ ಬೆಂಬಲ ಸೂಚಿಸಿದ್ದಾರೆ.

ADVERTISEMENT

ಅರೆ ಸರ್ಕಾರಿ ನೌಕರರ ಬೆಂಬಲ: ಜುಲೈ 19 ರಂದು ನಗರದಲ್ಲಿ ನಡೆಯಲಿರುವ ರ್‌್ಯಾಲಿಯಲ್ಲಿ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರು ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಅಧ್ಯಕ್ಷತೆಯಲ್ಲಿ ನಗರದ ಶಿವಾ ಇಂಟರ್‌ನ್ಯಾಷನಲ್‌ ಸಭಾಂಗಣದಲ್ಲಿ ಈಚೆಗೆ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ರಾಜೇಂದ್ರಕುಮಾರ ಗಂದಗೆ ಮಾತನಾಡಿ, ‘ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರಿಂದ ಸ್ಥಾಪಿತವಾದ ಲಿಂಗಾಯತ ಧರ್ಮವು ಸಾಮಾಜಿಕ ಸಮಾನತೆ ಪ್ರತಿಪಾದಿಸುವ ಧರ್ಮವಾಗಿದೆ. ಈ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ದೊರೆಯಬೇಕು’ ಎಂದು ಹೇಳಿದರು.

ಉದ್ಯಮಿ ಬಸವರಾಜ ಧನ್ನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಬು ವಾಲಿ, ಶ್ರೀಕಾಂತ ಸ್ವಾಮಿ, ಕುಶಲರಾವ್‌ ಪಾಟೀಲ ಗಾದಗಿ, ವಿರೂಪಾಕ್ಷ ಗಾದಗಿ, ರಾಜೇಂದ್ರ ಜೊನ್ನಿಕೇರಿ, ಸಿ.ಎಸ್‌. ಪಾಟೀಲ ಇದ್ದರು. ರಮೇಶ ಮಠಪತಿ ಸ್ವಾಗತಿಸಿದರು. ರಾಜಕುಮಾರ ಪಾಟೀಲ ನಿರೂಪಿಸಿದರು. ಮಾಣಿಕಪ್ಪ ಗೋರನಾಳೆ ವಂದಿಸಿದರು.

ಬೈಕ್‌ ರ್‌್ಯಾಲಿ: ಯುವ ಮುಖಂಡ ಆಕಾಶ ಪಾಟೀಲ್ ಅಯಾಸಪುರ  ನೇತೃತ್ವದಲ್ಲಿ ಲಿಂಗಾಯತ ಸಮಾಜದ ಯುವಕರು ಮಂಗಳವಾರ ನೌಬಾದ್‌ನ ವೃತ್ತದಿಂದ ನಗರದ ಬಸವೇಶ್ವರ ವೃತ್ತದ ವರೆಗೆ ಬೈಕ್‌ ರ್‌್ಯಾಲಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.