ADVERTISEMENT

ಶಾಂತಿ ಸುವ್ಯವಸ್ಥೆಗಾಗಿ ‘ಸಬ್‌ ಬೀಟ್‌ ಸಿಸ್ಟಮ್‌ ’

ಹುಮನಾಬಾದ್‌ಉಪವಿಭಾಗ ವ್ಯಾಪ್ತಿ ಪೊಲೀಸರಿಗೆ ತರಬೇತಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2017, 8:47 IST
Last Updated 14 ಫೆಬ್ರುವರಿ 2017, 8:47 IST
ಹುಮನಾಬಾದ್ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ‘ಸಬ್‌ ಬೀಟ್‌ ಸಿಸ್ಟಮ್‌’ ತರಬೇತಿ ಕಾರ್ಯಾಗಾರದಲ್ಲಿ ಎಸ್‌ಪಿ ಪ್ರಕಾಶ ನಿಕ್ಕಂ ಮಾತನಾಡಿದರು. ಡಿವೈಎಸ್ಪಿ ಚಂದ್ರಕಾಂತ ಪೂಜಾರಿ ಇದ್ದಾರೆ
ಹುಮನಾಬಾದ್ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ‘ಸಬ್‌ ಬೀಟ್‌ ಸಿಸ್ಟಮ್‌’ ತರಬೇತಿ ಕಾರ್ಯಾಗಾರದಲ್ಲಿ ಎಸ್‌ಪಿ ಪ್ರಕಾಶ ನಿಕ್ಕಂ ಮಾತನಾಡಿದರು. ಡಿವೈಎಸ್ಪಿ ಚಂದ್ರಕಾಂತ ಪೂಜಾರಿ ಇದ್ದಾರೆ   
ಹುಮನಾಬಾದ್:  ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ  ಮತ್ತಷ್ಟು ಪರಿಣಾಮಕಾರಿ ಅನುಷ್ಠಾನಕ್ಕಾಗಿ ಜಿಲ್ಲೆಯಲ್ಲಿ ಪೊಲೀಸ್‌ ‘ಸಬ್‌ ಬೀಟ್‌ ಸಿಸ್ಟಮ್‌’ ಜಾರಿಗೆ ತರಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಹೇಳಿದರು. 
 
ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಹುಮನಾಬಾದ್‌ ಉಪವಿಭಾಗ ವ್ಯಾಪ್ತಿಯ ಪೊಲೀಸ್‌ ಸಿಬ್ಬಂದಿಗಾಗಿ ಸೋಮವಾರ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. 
 
ಈ ಮೊದಲು ಕೂಡಾ ಇಲಾಖೆಯಲ್ಲಿ ಈ ಹಿಂದೆ ಬೀಟ್‌ ಸಿಸ್ಟಮ್‌, ನ್ಯೂ ಬೀಟ್‌ ಸಿಸ್ಟಮ್‌ ಯೋಜನೆ ಚಾಲ್ತಿಯಲ್ಲಿತ್ತು. ಆದರೆ ಅದನ್ನು ಇನ್ನಷ್ಟು ಪರಿಣಾಮಕಾರಿಗೊಳಿಸುವ ಏಕೈಕ ಉದ್ದೇಶದಿಂದ ಸಬ್‌ ಬೀಟ್‌ ಸಿಸ್ಟಮ್‌ ಎಂಬ ಹೊಸ ಪದ್ಧತಿ ಜಾರಿಗೆ ತರಲಾಗುತ್ತಿದೆ ಎಂದರು. ಮೊದಲ ಬೀಟ್‌ನಲ್ಲಿ ಐದರಿಂದ  ಆರು ಗ್ರಾಮಗಳಿರುತ್ತಿದ್ದವು.
 
ಗ್ರಾಮದಲ್ಲಿ ನಡೆಯುವ ಕ್ಷಣ–ಕ್ಷಣದ ಒಳಿತು–ಕೆಡುಕುಗಳ ಮಾಹಿತಿಯನ್ನು ಕಲೆಹಾಕಿ ತಕ್ಷಣವೇ ಮೇಲಾಧಿಕಾರಿ ಗಮನಕ್ಕೆ ತಂದು ಆಗಬಹುದಾದ ಅವಘಡಗಳಿಗೂ ಮುನ್ನ ಮುಂಜಾಗೃತಾ  ಕ್ರಮ ಕೈಗೊಂಡು ಅನಾಹುತ ತಪ್ಪಿಸಿ, ಶಾಂತಿ ಸುವ್ಯವಸ್ಥೆ ಕಾಪಾಡುವುದು ಗ್ರಾಮಕ್ಕೊಂದು ಬೀಟ್‌ ಸ್ಥಾಪಿಸುವುದರ ಮೂಲ ಉದ್ದೇಶ ಎಂದರು. ಇದಕ್ಕಾಗಿ ಕಡ್ಡಾಯವಾಗಿ ಗ್ರಾಮದಲ್ಲಿನ ಪ್ರತೀ ಸಮುದಾಯದ ಕನಿಷ್ಠ ಒಬ್ಬ ಪ್ರತಿನಿಧಿಯಂತೆ ಕನಿಷ್ಠ 25–50 ಜನರ ಗ್ರಾಮ ನಾಗರೀಕ ಸಮಿತಿ ರಚಿಸಿ, ನಿರಂತರ ಅವರ ಸಂಪರ್ಕದಲ್ಲಿ ಇರಬೇಕು. 
 
ಗ್ರಾಮದಲ್ಲಿನ ವೃತ್ತಗಳು, ಮಠ, ಮಂದಿರ, ಮಸೀದಿ, ಚರ್ಚ್‌, ಬುದ್ಧ ವಿಹಾರ, ಪ್ರಮುಖ ವ್ಯಾಪಾರಗಳು, ಗ್ರಾಮದ ಗಣ್ಯ ವ್ಯಕ್ತಿಗಳು, ಅಪರಾಧ ಕೃತ್ಯದಲ್ಲಿ ತೊಡಗುವವರು, ಗ್ರಾಮದಲ್ಲಿ ಶಾಂತಿ ಕೋಮುಗಲಭೆ ಸೃಷ್ಟಿಸುವವರು, ಕಾನೂನು ಸುವ್ಯವಸ್ಥೆ ಭಂಗ ತರುವವರು ಒಳಗೊಂಡಂತೆ ಸಮಗ್ರ ಮಾಹಿತಿ ಕಲೆ ಹಾಕಲಾಗುತ್ತದೆ.
 
ಅಲ್ಲದೇ ಆ ಸಮುದಾಯ ಮತ್ತು ವ್ಯಕ್ತಿಗಳ ಹೆಸರು,  ವೃತ್ತಿ, ಮೊಬೈಲ್‌ ಸಂಖ್ಯೆ ಬೀಟ್‌ ಪುಸ್ತಕದಲ್ಲಿ ದಾಖಲಿಸಬೇಕು. ಅಂಥವರ ದೈನಂದಿನ ಚಟುವಟಿಕೆ ಮೇಲೆ ನಿಗಾ ಇರಿಸಿ,  ಪ್ರತಿನಿತ್ಯ ಮೇಲಧಿಕಾರಿ ಗಮನಕ್ಕೆ ತರಬೇಕು. ಈ ಎಲ್ಲದರ ಜೊತೆ ಗ್ರಾಮದಲ್ಲಿ ಮೂಲಸೌಲಭ್ಯ ಕೊರತೆಗಳ ಕುರಿತು ಗ್ರಾಮಸ್ಥರಿಂದ ಮಾಹಿತಿ ಕಲೆಹಾಕಿ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನಿಸಬೇಕು. ಈ ಕಾರ್ಯವು ತಿಂಗಳಲ್ಲಿ ಪೂರ್ಣಗೊಳ್ಳಬೇಕು ಎಂದು ಸೂಚಿಸಿದರು. 
 
ಡಿವೈಎಸ್ಪಿ ಚಂದ್ರಕಾಂತ ಪೂಜಾರಿ, ಇನ್‌ಸ್ಪೆಕ್ಟರ್‌ ದತ್ತಾತ್ರಯ ಕಾರ್ನಾಡ್, ಎಂ.ಎಂ.ಮುಲ್ಲಾ, ಸಬ್‌ಇನ್‌ಸ್ಪೆಕ್ಟರ್‌ ಎಲ್‌.ಟಿ.ಸಂತೋಷ, ಗುರು ಎಂ.ಪಾಟೀಲ, ಅಲಿಸಾಬ್‌ ಮಾರ್ಗದರ್ಶನ ನೀಡಿದರು.   
 
* ಶಾಂತಿ ಸುವ್ಯವಸ್ಥೆ ಕಾಪಾಡುವುದು ‘ಸಬ್‌ ಬೀಟ್‌ ಸಿಸ್ಟಮ್’ ಉದ್ದೇಶ. ಈಗಾಗಲೇ ಈ ನಿಯಮವು ಬೆಳಗಾವಿ ಜಿಲ್ಲೆಯಲ್ಲಿ ಯಶಸ್ವಿಯಾಗಿದ್ದು, ರಾಜ್ಯದಾದ್ಯಂತ ಜಾರಿ ಮಾಡುವ ಸಲುವಾಗಿ ಜಿಲ್ಲೆಯಲ್ಲಿ ಪ್ರಯೋಗ ಮಾಡಲಾಗುತ್ತಿದೆ. 
ಪ್ರಕಾಶ ನಿಕ್ಕಂ, ಎಸ್‌ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.