ADVERTISEMENT

ಸಂತಪುರ: ಒತ್ತುವರಿ ತೆರವು ಕಾರ್ಯಾಚರಣೆ

ಮುಂಗಡ ಬಾಡಿಗೆ ಪಾವತಿಸಿದ ವ್ಯಾಪಾರಿಗಳ ಸ್ಥಿತಿ ಅತಂತ್ರ, ತೆರವಿಗೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2017, 8:57 IST
Last Updated 14 ಫೆಬ್ರುವರಿ 2017, 8:57 IST
ಔರಾದ್ ತಾಲ್ಲೂಕಿನ ಸಂತಪುರನಲ್ಲಿ ಸೋಮವಾರ ಜೆಸಿಬಿ ಸಹಾಯದಿಂದ ಒತ್ತುವರಿ ತೆರವು ಮಾಡಲಾಯಿತು
ಔರಾದ್ ತಾಲ್ಲೂಕಿನ ಸಂತಪುರನಲ್ಲಿ ಸೋಮವಾರ ಜೆಸಿಬಿ ಸಹಾಯದಿಂದ ಒತ್ತುವರಿ ತೆರವು ಮಾಡಲಾಯಿತು   
ಔರಾದ್: ಬೀದರ್–ನಾಂದೇಡ್ ಹೆದ್ದಾರಿಗೆ ಹೊಂದಿಕೊಂಡಿರುವ ಸಂತಪುರ ಹೋಬಳಿ ಕೇಂದ್ರದಲ್ಲಿ ಸೋಮವಾರ ಬೆಳಿಗ್ಗೆಯಿಂದ ಅಂಗಡಿ ತೆರವು ಕಾರ್ಯಾಚರಣೆ ನಡೆಯಿತು. ಎರಡು ದಿನಗಳ ಹಿಂದೆ ಸಣ್ಣಪುಟ್ಟ ಅಂಗಡಿಗಳು ತೆರವು ಆದ ಬೆನ್ನಲ್ಲೇ ಇಂದು ಅನುಭವ ಮಂಟಪದ ವಾಣಿಜ್ಯ ಮಳಿಗೆ ಸೇರಿದಂತೆ ದೊಡ್ಡ ಅಂಗಡಿಗಳಿಗೂ ತೆರವು ಕಾರ್ಯದ ಬಿಸಿ ತಟ್ಟಿದೆ. 
 
ತಹಶೀಲ್ದಾರ್ ಎಂ. ಚಂದ್ರಶೇಖರ, ಪ್ರೊಬೆಷನರಿ  ಐಎಎಸ್ ಅಧಿಕಾರಿ ಟಿ. ಭೂಬಾಲನ್, ಡಿವೈಎಸ್ಪಿ ಅಶೋಕಕುಮಾರ, ಸಿಪಿಐ ರಮೇಶ ಮೈಲೂರಕರ್ ಸಮ್ಮುಖದಲ್ಲಿ ತೆರವು ಕಾರ್ಯ ನಡೆಯಿತು. ಮುಖ್ಯ ರಸ್ತೆ ಎರಡೂ ಬದಿ 50 ಅಡಿ ಅಂತರದಲ್ಲಿರುವ ಅಂಗಡಿಗಳನ್ನು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಲಾಯಿತು. ಇದರಿಂದ ಎಚ್ಚೆತ್ತ ಇತರೆ ಮಾಲೀಕರು ಅಂಗಡಿಯಲ್ಲಿನ ಸಾಮಾನುಗಳು ಟ್ರ್ಯಾಕ್ಟರ್‌ಗಳಲ್ಲಿ ತುಂಬಿ ಖಾಲಿ ಮಾಡಿದರು. 
 
ತೆರವು ಕಾರ್ಯಾಚರಣೆಯಿಂದ ಸಂತಪುರನಲ್ಲಿರುವ ಬಹುತೇಕ ಎಲ್ಲ ಅಂಗಡಿಗಳು ತೆರವುಗೊಳ್ಳಲಿದ್ದು, ಇದರಿಂದಾಗಿ ಬಹುತೇಕ ವ್ಯಾಪಾರ ವಹಿವಾಟು ಸ್ಥಗಿತಗೊಂಡು ಸೋಮವಾರ ಇಡೀ ದಿನ ಅಘೋಷಿತ ಬಂದ್ ನಿರ್ಮಾಣವಾಗಿತ್ತು. ಚಹಾ, ನೀರು ಕುಡಿಯಲು ಒಂದು ಹೋಟೆಲ್ ಸಹ ಎಲ್ಲಿಯೂ ಕಾಣಲಿಲ್ಲ. 
 
ಗ್ರಾಮಸ್ಥರ ಆಕ್ಷೇಪ: ಊರು ಹೊರಗೆ ಬಸ್ ನಿಲ್ದಾಣ ನಿರ್ಮಾಣ ಆದರೂ ಅಲ್ಲಿ ಬಸ್ ನಿಲ್ಲಿಸದ ಕಾರಣ ಬಸವೇಶ್ವರ ವೃತ್ತದ ಬಳಿ ಸಂಚಾರ ಸಮಸ್ಯೆಯಾಗಿದೆ ಎಂದು ಸಂತಪುರ ನಾಗರಿಕರು ತಕರಾರು ತೆಗೆದರು. ನಾಳೆಯಿಂದ ಎಲ್ಲ ಬಸ್‌ಗಳು ಹೊಸ ಬಸ್ ನಿಲ್ದಾಣದಲ್ಲಿ ನಿಲ್ಲಿಸಲು ಸೂಚಿಸಲಾಗುವುದು ಎಂದು ತಹಶೀಲ್ದಾರ್ ಜನರಲ್ಲಿ ಮನವರಿಕೆ ಮಾಡಿದರು. 
 
ಮೂನ್ಸೂಚನೆ ನೀಡದೇ ಅಂಗಡಿ ತೆರವು ಮಾಡಿದರೆ ನಾವು ಹೇಗೆ ಜೀವನ ನಡೆಸಬೇಕು.  ₹40–50 ಸಾವಿರ ಮುಂಗಡ ಬಾಡಿಗೆ ಪಾವತಿಸಿದ್ದೇವೆ. ಅದನ್ನು ಈಗ ಯಾರ ಬಳಿ ಕೇಳಬೇಕು ಎಂದು ದೀಪಾವಳಿ ವೇಳೆ ವರ್ಷದ ಮುಂಗಡ ಹಣ ಕಟ್ಟಿದ ವ್ಯಾಪಾರಿಗಳು ಗೋಳು ತೋಡಿಕೊಂಡರು. 
 
ಅನುಭವ ಮಂಟಪಕ್ಕೆ ಸೇರಿದ ಒಟ್ಟು 36 ಅಂಗಡಿಗಳಿವೆ. ಮುಂಗಡ ಬಾಡಿಗೆ ಪಡೆಯುವ ಮುನ್ನ ಯಾವುದೇ ಸಂದರ್ಭದಲ್ಲಿ ಅಂಗಡಿಗಳು ತೆರವು ಆದರೆ ಅದಕ್ಕೆ ನಾವು ಜವಾಬ್ದಾರಿ ಆಗುವುದಿಲ್ಲ ಎಂದು ವ್ಯಾಪಾರಿಗಳಿಗೆ ತಿಳಿಸಿರುವುದಾಗಿ ಟ್ರಸ್ಟ್‌ ಅಧ್ಯಕ್ಷ ಬಸವರಾಜ ಬಿರಾದಾರ ತಿಳಿಸಿದ್ದಾರೆ. ಈ ಕುರಿತು ಆಡಳಿತ ಮಂಡಳಿ ಸಭೆ ಕರೆದು ಚರ್ಚಿಸುವುದಾಗಿ ಅವರು ಹೇಳಿದ್ದಾರೆ.
 
ಯಾವುದೇ ಕಾರಣಕ್ಕೂ ಅತಿಕ್ರಮಣ ಕಾರ್ಯಾಚರಣೆ ನಿಲ್ಲುವುದಿಲ್ಲ. ರಾಜ್ಯ ಹೆದ್ದಾರಿ ಮೇಲ್ದರ್ಜೇಗೇರಿಸುವ ಕಾರ್ಯ  ನಡೆಯುತ್ತಿರುವುದರಿಂದ ಮುಖ್ಯ ರಸ್ತೆ ಎರಡೂ ಬದಿ 50 ಅಡಿ ಅಂತರದಲ್ಲಿಯ ಎಲ್ಲ ಕಟ್ಟಡಗಳನ್ನು ತೆರವು ಮಾಡುವುದು ಅನಿವಾರ್ಯ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
 
* ಅಂತರರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಎರಡು ಮುಖ್ಯ ರಸ್ತೆಗಳು ಸಂತಪುರದಿಂದ ಹಾದು ಹೋಗುತ್ತಿರುವುದರಿಂದ ಒತ್ತುವರಿ ತೆರವು ಅನಿವಾರ್ಯ. ನಾಗರಿಕರು ತೆರವು ಕಾರ್ಯಾಚರಣೆಗೆ ಸಹಕರಿಸಬೇಕು.
ಎಂ. ಚಂದ್ರಶೇಖರ, ತಹಶೀಲ್ದಾರ್, ಔರಾದ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.