ADVERTISEMENT

ಸರ್ಕಾರದ ವೈಫಲ್ಯ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 5:37 IST
Last Updated 21 ಜುಲೈ 2017, 5:37 IST

ಬೀದರ್: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಹಾಗೂ ರಾಜ್ಯದಲ್ಲಿ ಪಿಎಫ್‍ಐ ಮತ್ತು ಕೆಎಫ್‌ಡಿ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ ನಗರದ ಗಣೇಶ ಮೈದಾನದಲ್ಲಿ ಸೇರಿದ ಪಕ್ಷದ ಕಾರ್ಯಕರ್ತರು ಅಲ್ಲಿಂದ ಘೋಷಣೆಗಳನ್ನು ಕೂಗುತ್ತ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದರು. ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಷಣ್ಮುಖ ಅವರಿಗೆ ಸಲ್ಲಿಸಿದರು.

‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಆಡಳಿತ ಯಂತ್ರ ಎಲ್ಲ ಹಂತಗಳಲ್ಲೂ ಹಳಿ ತಪ್ಪಿರುವುದರಿಂದ ಜನ ಹಲವು ಸಂಕಷ್ಟಗಳನ್ನು ಎದುರಿಸಬೇಕಾಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ ಹೇಳಿದರು.

ADVERTISEMENT

‘ನಾಲ್ಕು ವರ್ಷಗಳ ಅವಧಿಯಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದ 23 ಕಾರ್ಯಕರ್ತರ ಹತ್ಯೆ ಮಾಡಲಾಗಿದೆ. ಮಂಗಳೂರಿನ ಶರತ್ ಮಡಿವಾಳ ಕೊಲೆ ಇದಕ್ಕೆ ಹೊಸ ಸೇರ್ಪಡೆಯಾಗಿದೆ’ ಎಂದು ದೂರಿದರು.

‘ಪೊಲೀಸರು ಈವರೆಗೂ ಕೊಲೆ ಆರೋಪಿಗಳನ್ನು ಬಂಧಿಸದೇ ಇರುವುದು ಆತಂಕಕ್ಕೆ ಕಾರಣವಾಗಿದೆ. ಇದರಿಂದ ಕೆಲ ಸಂಘಟನೆಗಳಿಗೆ ಇನ್ನಿಲ್ಲದ ಕುಮ್ಮಕ್ಕು ದೊರೆತಂತಾಗಿದೆ’ ಎಂದು ಹೇಳಿದರು.

‘ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಸಚಿವರ ನಡವಳಿಕೆಯು ನಿರ್ಭಿತಿಯಿಂದ ಅಪರಾಧ ಕೃತ್ಯ ಎಸಗಲು ನೆರವಾಗಿದೆ. ಅಮಾಯಕರು ತೊಂದರೆಗೆ ಒಳಗಾಗಬೇಕಾಗಿದೆ’ ಎಂದು ಆರೋಪಿಸಿದರು. ‘ರಾಜ್ಯ ಸರ್ಕಾರ ತನ್ನ ಮತ ಬ್ಯಾಂಕ್ ಗಟ್ಟಿಗೊಳಿಸಲು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿರುವುದರಿಂದ ನಿಷ್ಠಾವಂತ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲಾಗದ ಸ್ಥಿತಿಯಲ್ಲಿದ್ದಾರೆ. ಸರ್ಕಾರ ಭ್ರಷ್ಟರಿಗೆ ರಕ್ಷಣೆ ಹಾಗೂ ನಿಷ್ಠಾವಂತರಿಗೆ ಕಿರುಕುಳ ಕೊಡುತ್ತಿದೆ’ ಎಂದು ಆರೋಪಿಸಿದರು.

‘ನಿಷ್ಠಾವಂತ ಅಧಿಕಾರಿಗಳಿಗೆ ರಕ್ಷಣೆ ನೀಡುವ ಜತೆಗೆ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಆರೋಪಿಗಳನ್ನು ಬಂಧಿಸಬೇಕು. ಪಿಎಫ್‍ಐ ಮತ್ತು ಕೆಎಫ್‌ಡಿ ಸಂಘಟನೆಗಳನ್ನು ನಿಷೇಧಿಸಬೇಕು. ಸರ್ಕಾರ ಸ್ವಹಿತಾಸಕ್ತಿ ನಡವಳಿಕೆಗಳಿಂದ ಹೊರ ಬಂದು ರಾಜ್ಯದಲ್ಲಿ ಶಾಂತಿ, ಸೌಹಾರ್ದ ನೆಲೆಸಲು ಕ್ರಮ ಕೈಗೊಳ್ಳಬೇಕು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ ಒತ್ತಾಯಿಸಿದರು.

ಬಿಜೆಪಿ ಸ್ಲಂ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಬಾಬುವಾಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಾಬುರಾವ್ ಕಾರಬಾರಿ, ಜಯಕುಮಾರ ಕಾಂಗೆ, ಮುಖಂಡರಾದ ರಾಜಕುಮಾರ ಚಿದ್ರಿ, ಜಗನ್ನಾಥ ಪಾಟೀಲ, ಆಕಾಶ ಪಾಟೀಲ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.