ADVERTISEMENT

ಸಿಗದ ಶುದ್ಧ ಕುಡಿಯುವ ನೀರು: ರೋಗಭೀತಿ

​ಪ್ರಜಾವಾಣಿ ವಾರ್ತೆ
Published 16 ಮೇ 2017, 8:53 IST
Last Updated 16 ಮೇ 2017, 8:53 IST
ಭಾಲ್ಕಿ ತಾಲ್ಲೂಕಿನ ಖಟಕ ಚಿಂಚೋಳಿ ಗ್ರಾಮದಲ್ಲಿ ಮನೆಗಳ ಮಧ್ಯೆ ಹೊಲಸು ನೀರು ಸಂಗ್ರಹಗೊಂಡಿರುವುದು
ಭಾಲ್ಕಿ ತಾಲ್ಲೂಕಿನ ಖಟಕ ಚಿಂಚೋಳಿ ಗ್ರಾಮದಲ್ಲಿ ಮನೆಗಳ ಮಧ್ಯೆ ಹೊಲಸು ನೀರು ಸಂಗ್ರಹಗೊಂಡಿರುವುದು   

ಭಾಲ್ಕಿ: ಜನರಿಗೆ ದೊರೆಯದ ಶುದ್ಧ ಕುಡಿಯುವ ನೀರು, ವಿವಿಧೆಡೆ ಮನೆಗಳ ಸುತ್ತ ಸಂಗ್ರಹಗೊಂಡ ಹೊಲಸು ನೀರು, ಶಿಕ್ಷಕರ ಕೊರತೆ ಕಾರಣ ಶೈಕ್ಷಣಿಕ ಬೆಳವಣಿಗೆ ಕುಂಠಿತ.
–ಇದು ತಾಲ್ಲೂಕು ಕೇಂದ್ರದಿಂದ 18 ಕಿಲೋ ಮೀಟರ್‌ ದೂರದಲ್ಲಿರುವ ಖಟಕ ಚಿಂಚೋಳಿ ಗ್ರಾಮದ ಚಿತ್ರಣ. ಇದು ಗ್ರಾಮ ಪಂಚಾಯಿತಿ ಕೇಂದ್ರವೂ ಹೌದು.

ಇಲ್ಲಿ ಸುಮಾರು ಹದಿನೈದು ಸಾವಿರ ಜನಸಂಖ್ಯೆ ಇದೆ. ಆದರೆ, ಉತ್ತಮ ಗ್ರಾಮಕ್ಕೆ ಅಗತ್ಯವಾದ ಮೂಲ ಸೌಕರ್ಯಗಳು ಬಹುತೇಕ ಇಲ್ಲದ ಕಾರಣ ಜನರು ನಿತ್ಯ ಸಂಕಟ ಅನುಭವಿಸುತ್ತಿದ್ದಾರೆ.

ಗ್ರಾಮ ಪಂಚಾಯಿತಿ ಪಕ್ಕ, ಕೆಳ ಓಣಿಯ ಹನುಮಾನ ದೇವಾಲಯ ಸಮೀಪ 3 ವರ್ಷಗಳ ಹಿಂದೆ ನಿರ್ಮಿಸಿರುವ ಶೌಚಾಲಯ ಉದ್ಘಾಟನೆ ಭಾಗ್ಯ ಕಾಣದೆ ಹಾಳು ಬಿದ್ದಿವೆ. ಸುತ್ತಲೂ ಚರಂಡಿ ನೀರು ನಿಂತಿವೆ. ಚಳಕಾಪೂರ ರಸ್ತೆ ಮಾರ್ಗದ ಶೌಚಾಲಯವೂ ನಿರ್ವಹಣೆ ಕೊರತೆಯಿಂದ ಉಪಯೋಗಕ್ಕೆ ಬಾರದಂತಾಗಿದೆ.

ADVERTISEMENT

ಹಾಗೆಯೇ ಸಂಯುಕ್ತ ಪ್ರೌಢಶಾಲೆಯಲ್ಲಿಯೂ ಹೆಣ್ಣುಮಕ್ಕಳಿಗಾಗಿ ಶೌಚಾಲಯ ಇಲ್ಲದಿರುವುದರಿಂದ ವಿದ್ಯಾರ್ಥಿನಿಯರು ತುಂಬಾ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಸಾರ್ವಜನಿಕರು ತಿಳಿಸುತ್ತಾರೆ.

‘ಗ್ರಾಮದ ಬಹುತೇಕ ಕಡೆಗಳಲ್ಲಿ ಹೊಲಸು ನೀರು ಹರಿದು ಹೋಗಲು ಚರಂಡಿ ಇಲ್ಲ. ನೀರು ಶುದ್ದೀಕರಣ ಘಟಕ ಇದ್ದರೂ ಉದ್ಘಾಟನೆ ಆಗದೆ ಪಾಳು ಬಿದ್ದಿದೆ. ಕುಡಿಯಲು ಶುದ್ಧ ನೀರು ಸಿಗದೆ ನಾಗರಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಇನ್ನು, ಮಕ್ಕಳು, ಮಹಿಳೆಯರಾದಿಯಾಗಿ ಊರ ಸಮೀಪದ ರಸ್ತೆ ಅಕ್ಕಪಕ್ಕ ಬಯಲು ಶೌಚ ಮಾಡುವುದರಿಂದ ಸುತ್ತಲಿನ ಮನೆಗಳ ಜನರು ಸಾಂಕ್ರಾಮಿಕ ರೋಗಗಳ ಭಯದಲ್ಲಿ ದಿನ ಕಳೆಯುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ರೇವಣಸಿದ್ದ ಜಾಡರ್‌, ವೈಜಿನಾಥ ಶಾಹಪೂರೆ.

‘ಮನೆಗಳ ಹೊಲಸು ಮತ್ತು ಮಳೆ ನೀರು ಮನೆ, ಕೊಳವೆಬಾವಿ ಸುತ್ತ ಸಂಗ್ರಹವಾಗುತ್ತಿದೆ. ಹಾಗಾಗಿ, ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಡೆಂಗಿ, ಕಾಲರಾ, ಚಿಕುನ್‌ಗುನ್ಯ, ಮಲೇರಿಯಾ ಸೇರಿದಂತೆ ಇತರ ರೋಗಗಳ ಭೀತಿ ನಮ್ಮನ್ನು ಆವರಿಸಿದೆ.

ಎಲ್ಲ ಸಮಸ್ಯೆಗಳು ಅಧಿಕಾರಿ, ಜನಪ್ರತಿನಿಧಿಗಳ ಗಮನಕ್ಕಿದ್ದರೂ ಪರಿಹಾರಕ್ಕೆ ಮುಂದಾಗುತ್ತಿಲ್ಲ. ಮರಗಮ್ಮ ದೇವಾಲಯದ ಸುತ್ತಮುತ್ತ ಹೊಲಸು ಇರುವುದರಿಂದ ಜನರು ದೇವಾಲಯಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಕನಿಷ್ಠ ಪಕ್ಷ ಹೊಲಸು ಇರುವ ಕಡೆಗಳಲ್ಲಿ ಆಗಾಗೆ ಬ್ಲೀಚಿಂಗ್‌ ಪೌಡರ್‌ ಸಿಂಪಡಿಸಲೂ ಮುಂದಾಗುತ್ತಿಲ್ಲ’ ಎಂದು ಆರೋಪಿಸುತ್ತಾರೆ ಗ್ರಾಮಸ್ಥರು.

ಶೌಚಾಲಯ ಸಮಸ್ಯೆ: ‘ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲ. ಗ್ರಾಮಸ್ಥರು ಬಯಲಿನಲ್ಲಿಯೇ ಮಲಮೂತ್ರ ವಿಸರ್ಜನೆ ಮಾಡುತ್ತಾರೆ. ಗಂಡಸರಿಗೆ ಅಷ್ಟೊಂದು ಸಮಸ್ಯೆ ಆಗುವುದಿಲ್ಲ. ಹೆಣ್ಣುಮಕ್ಕಳ ಕಷ್ಟ ಹೇಳತೀರದಂತಾಗಿದೆ’ ಎಂದು ದೂರುತ್ತಾರೆ ಮಹಿಳೆಯರು.

ವಿದ್ಯಾರ್ಥಿಗಳ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಲು ಶೀಘ್ರದಲ್ಲಿ ಪಿಯು ಕಾಲೇಜು ಆರಂಭಿಸಬೇಕು. ಗ್ರಾಮದ ಸಮಸ್ಯೆಗಳನ್ನು ಸಂಬಂಧಪಟ್ಟವರು ಆದಷ್ಟು ಶೀಘ್ರ ಪರಿಹರಿಸಿ ಜನರಿಗೆ ಸುಗಮ ಜೀವನ ನಡೆಸಲು ಸಹಕರಿಸಬೇಕು ಎಂಬುದು ಸಾರ್ವಜನಿಕರ ಸದಾಶಯ.
 

*

ಗ್ರಾಮ ದೊಡ್ಡದಿರುವುದರಿಂದ ಕೆಲವೆಡೆ ಸಮಸ್ಯೆಗಳಿವೆ. ಪರಿಹಾರಕ್ಕೆ ಪ್ರಯತ್ನ ಮಾಡುತ್ತೇನೆ. ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಉತ್ತೇಜನ ನೀಡಲಾಗುತ್ತಿದೆ.
ರೇಖಾ ಚನ್ಮಲ್‌
ಪಿಡಿಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.