ADVERTISEMENT

ಸುಶಿಕ್ಷಿತರ ಮೌನದಿಂದ ಸಮಾಜ ಹಾಳು: ಪ್ರಭುದೇವರು

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2017, 7:11 IST
Last Updated 16 ನವೆಂಬರ್ 2017, 7:11 IST

ಜನವಾಡ: ‘ಸಮಾಜವು ಸುಶಿಕ್ಷಿತರ ಮೌನದಿಂದ ಹಾಳಾಗುತ್ತಿದೆಯೇ ಹೊರತು ಅಜ್ಞಾನಿಗಳಿಂದಲ್ಲ’ ಎಂದು ಬಸವಗಿರಿಯ ಪ್ರಭುದೇವರು ನುಡಿದರು.

ಬೀದರ್ ತಾಲ್ಲೂಕಿನ ರಾಜಗೀರಾ ಗ್ರಾಮದಲ್ಲಿ ಈಚೆಗೆ ಗ್ರಾಮ ವಿಕಾಸ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಜೀವನ ದರ್ಶನ ಪ್ರವಚನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಮಾಜ ಕೆಟ್ಟು ಹೋಗುತ್ತಿದೆ ಎಂದು ದೂಷಿಸುವ ಬದಲು ಸಮಾಜದ ಒಳಿತಿಗೆ ನಾವೇನು ಮಾಡುತ್ತಿದ್ದೇವೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ADVERTISEMENT

‘ಪ್ರತಿ ಗ್ರಾಮಗಳಲ್ಲಿನ ಯುವ ಸಮೂಹ ಜಾಗೃತವಾದರೆ ಗ್ರಾಮಗಳು ಒಳ್ಳೆಯ ದಾರಿಯಲ್ಲಿ ಸಾಗುತ್ತವೆ. ಎಲ್ಲರೂ ತಮ್ಮ ಕುಟುಂಬಗಳಿಗೆ ಸೀಮಿತರಾದರೆ ಯಾವ ಬದಲಾವಣೆ ಆಗುವುದಿಲ್ಲ. ಇತರರಿಗೆ ಮಾದರಿ ಆಗುವಂತೆ ಬದುಕಬೇಕು’ ಎಂದರು.

ಮನ್ನಳ್ಳಿ ಪೋಲಿಸ್ ಠಾಣೆಯ ಪೋಲಿಸ್ ಸಬ್ ಇನ್‌ಸ್ಪೆಕ್ಟರ್ ಪ್ರಕಾಶ ಯಾತನೂರ ಮಾತನಾಡಿ, ‘ಗ್ರಾಮದ ಯುವಸಮೂಹ ಒಂದೆಡೆ ಸೇರಿ ಗ್ರಾಮದ ಅಭಿವೃದ್ಧಿಗೆ ಗ್ರಾಮ ವಿಕಾಸ ಸಮಿತಿ ರಚಿಸಿ ಪ್ರವಚನ ಹಮ್ಮಿಕೊಂಡಿರುವುದು ಸಂತಸದ ಸಂಗತಿ. ಗ್ರಾಮದ ವಿಕಾಸದಿಂದಲೇ ದೇಶದ ವಿಕಾಸ ಸಾಧ್ಯವಿದೆ’ ಎಂದರು.

ರಾಜ್ಯ ಪ್ರಶಸ್ತಿ ಪುರಸ್ಕೃತ ಟೀಮ್ ಯುವಾ ಸದಸ್ಯ ನಾಗನಾಥ ಪಾಟೀಲ ಮಾತನಾಡಿ, ‘ಯುವಶಕ್ತಿ ದೇಶದ ಆಸ್ತಿ. ಯುವಶಕ್ತಿ ಜಾಗೃತವಾದರೆ ಎಲ್ಲವೂ ತನ್ನಿಂದ ತಾನೆ ಒಳ್ಳೆಯ ದಾರಿಯತ್ತ ಸಾಗುತ್ತದೆ’ ಎಂದರು.

ಕರಕನಳ್ಳಿ ದೇವಸ್ಥಾನದ ಟ್ರಸ್ಟಿಗಳಾದ ಗಂದಾಧರ ಪಾಟೀಲ, ಗೋಪಾಲ ರೆಡ್ಡಿ, ಯೋಗ ಶಿಕ್ಷಕ ಲೋಕೇಶ ವರವಟ್ಟೆ, ಶಿವಕುಮಾರ ಪಾಂಚಾಳ ಗಾಯನ ನಡೆಸಿಕೊಟ್ಟರು. ಗ್ರಾಮದ ಹಿರಿಯರಾದ ಅಮೃತ ಪಾಟೀಲ, ನರಸಿಂಹ ದೇಸಾಯಿ, ಶಿವರಾಜ ಅಡ್ಡಿ, ಜಗನ್ನಾಥ ತೋಟಪ್ಪ, ಶಾಂತು ಕಮಲಪುರ, ಬಸಪ್ಪ ಹಸನಬಾದ್, ಓಂಕಾರ ಪಾಟೀಲ, ಆಕಾಶ ಅಡ್ಡಿ, ಲಕ್ಷ್ಮಣ, ತುಕಾರಾಮ ಪೂಜಾರಿ, ಅಶೋಕ ಚಿಂತಾ, ಶ್ರೀನಿವಾಸ ಭುತ್ತಾಳಿ, ಗುಂಡಪ್ಪ ಚಿಮ್ಮಾ ಇದ್ದರು.

ಗುರುನಾಥ ರಾಜಗೀರಾ ನಿರೂಪಿಸಿದರು. ಸಂತೋಷ ಪಾಟೀಲ ಸ್ವಾಗತಿಸಿದರು. ಶಿವಾನಂದ ದೇಶಪಾಂಡೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.