ADVERTISEMENT

ಸೌಕರ್ಯ ಕೊರತೆ ನಡುವೆ ಆಟ–ಪಾಠ

ಬಸವರಾಜ ಎಸ್.ಪ್ರಭಾ
Published 13 ಡಿಸೆಂಬರ್ 2017, 9:21 IST
Last Updated 13 ಡಿಸೆಂಬರ್ 2017, 9:21 IST
ಭಾಲ್ಕಿ ತಾಲ್ಲೂಕಿನ ಕುಂಟೆಸಿರ್ಸಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು, ಸಿಬ್ಬಂದಿ ಗಿಡಗಳ ಆರೈಕೆ ಮಾಡುತ್ತಿರುವುದು
ಭಾಲ್ಕಿ ತಾಲ್ಲೂಕಿನ ಕುಂಟೆಸಿರ್ಸಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು, ಸಿಬ್ಬಂದಿ ಗಿಡಗಳ ಆರೈಕೆ ಮಾಡುತ್ತಿರುವುದು   

ಭಾಲ್ಕಿ: ಶಾಲೆಯಲ್ಲಿ ಹಲವು ಸಮಸ್ಯೆಗಳು ತಾಂಡವಾಡುತ್ತಿವೆ. ಅವುಗಳ ಮಧ್ಯೆಯೂ ಕುಂಟೆಸಿರ್ಸಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ.

ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ಒಟ್ಟು 63 ವಿದ್ಯಾರ್ಥಿಗಳಿದ್ದು, ನಾಲ್ಕು ಜನ ಶಿಕ್ಷಕರಿದ್ದಾರೆ. ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ 7ನೇ ವರ್ಗದ ವಿದ್ಯಾರ್ಥಿನಿಯರಾದ ವಿಜಯಲಕ್ಷ್ಮೀ ಪಂಡಿತ, ಪ್ರಿಯಾಂಕಾ ಬಸವರಾಜ, ಪಲ್ಲವಿ ಪ್ರಭು, ಬಬಿತಾ ವಿಜಯಕುಮಾರ, ಅಂಬಿಕಾ ಶ್ರಾವಣ, ನೀಲಾಂಬಿಕಾ ಬಸವರಾಜ ಕನ್ನಡ ಕಂಠಪಾಠದಲ್ಲಿ ವಿಜಯಲಕ್ಷ್ಮೀ ಪಂಡಿತ, ಲಘು ಸಂಗೀತದಲ್ಲಿ ಸಂದೀಪ ಮಲ್ಲಿಕಾರ್ಜುನ, ಆಶುಭಾಷಣದಲ್ಲಿ 4ನೇ ವರ್ಗದ ವಿಜಯಲಕ್ಷ್ಮೀ ಕರುಣಾಕರ್‌ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿಯೂ ಪ್ರಥಮ ಸ್ಥಾನ ಪಡೆದಿದ್ದಾರೆ.

ಶಾಲೆಯಲ್ಲಿ ಮಕ್ಕಳಿಗೆ ಪುಸ್ತಕ ಭಾರವನ್ನು ಹೊರದೆ ಸಂತಸ, ಸ್ವ–ವೇಗ, ಬಹುವರ್ಗದ, ಬಹುಹಂತದ ಕಲಿಕೆ, ಸ್ವಕಲಿಕೆ ಎಂಬ ಐದು ತತ್ವಗಳನ್ನು ಆಧಾರವಾಗಿಟ್ಟುಕೊಂಡು ಗುಣಾತ್ಮಕ ಶಿಕ್ಷಣ ಎಂಬ ಮೂಲ ತಳಹದಿಯ ಮೇಲೆ ಜನ್ಮ ತಾಳಿರುವ ನಲಿ–ಕಲಿ ಪದ್ಧತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ.

ADVERTISEMENT

ನಲಿ–ಕಲಿಯಲ್ಲಿ 22 ಮಕ್ಕಳು ಇದ್ದಾರೆ. ನಲಿ–ಕಲಿ ಶಿಶು ಮತ್ತು ಶಿಕ್ಷಕ ಸ್ನೇಹಿಯಾಗಿದೆ. ಮಕ್ಕಳಿಗೆ ಚಟುವಟಿಕೆಯಾಧಾರಿತವಾಗಿ, ಅವರ ಕಲಿಕಾ ವೇಗಕ್ಕನುಗುಣವಾಗಿ ಕಲಿಸಲು ಇದು ಸಹಕಾರಿಯಾಗಿದೆ. ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸಲು ಶಾಲೆ ಆವರಣದಲ್ಲಿ ತೋಟ ನಿರ್ಮಿಸುತ್ತಿದ್ದೇವೆ ಎಂದು ಶಿಕ್ಷಕರಾದ ಶಿಕ್ಷಕ ರಮೇಶ ಮಾನಶೆಟ್ಟೆ, ಮಲ್ಲಿಕಾರ್ಜುನ ಭಂಗೂರೆ ಹೇಳುತ್ತಾರೆ.

ಶಾಲೆಯಲ್ಲಿ ಮಕ್ಕಳಿಗೆ ಆಟವಾಡಲು ಮೈದಾನವಿದೆ. ಆದರೆ, ದೈಹಿಕ ಶಿಕ್ಷಣ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳ ದೈಹಿಕ ಬೆಳವಣಿಗೆಗೆ ಪೆಟ್ಟು ಬೀಳುತ್ತಿದೆ. ಗಣಕಯಂತ್ರ, ಗ್ರಂಥಾಲಯ ಮತ್ತು ಕಾರ್ಯಾಲಯ ಕೋಣೆ, ವಿಜ್ಞಾನ ಪ್ರಯೋಗಾಲಯ, ಪಾಠೋಪಕರಣ, ಡೆಸ್ಕ್‌ ಸಮಸ್ಯೆಗಳಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಇನ್ನಿಲ್ಲದ ತೊಂದರೆ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಪಾಲಕರು.

ಮಕ್ಕಳಿಗಾಗಿ ಈಚೆಗೆ ಭಾಲ್ಕಿ ರೋಟರಿ ಕ್ಲಬ್‌ ವತಿಯಿಂದ ಉತ್ತಮ ಶೌಚಾಲಯ ಕೋಣೆಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ. ಶಿಕ್ಷಕರಿಗೆ ಪ್ರತ್ಯೇಕ ಶೌಚಾಲಯ ಇಲ್ಲ. ಮಕ್ಕಳ ಶೌಚಾಲಯಗಳನ್ನೇ ಅವಲಂಬಿಸಿದ್ದೇವೆ. ಎರಡು ಕೋಣೆ ರಿಪೇರಿ ಆಗಬೇಕಿವೆ.

ಶಾಲೆಯ ಮುಖ ಗ್ರಾಮದ ಮುಖ್ಯರಸ್ತೆಯ ಕಡೆಗೆ ಇರುವುದರಿಂದ ಪಾಠ ಪ್ರವಚನಕ್ಕೆ ತೊಂದರೆ ಆಗುತ್ತಿದೆ. ಈ ಸಂಬಂಧ ಅಧಿಕಾರಿಗಳ ಗಮನ ಸೆಳೆಯಲಾಗಿದೆ ಎನ್ನುತ್ತಾರೆ ಸಿಬ್ಬಂದಿ. ಶಿಕ್ಷಣ ಅಧಿಕಾರಿಗಳು ವಿದ್ಯಾರ್ಥಿಗಳ ಉಜ್ವಲ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಬೇಕು ಎಂದು ಪಾಲಕರು ಆಗ್ರಹಿಸುತ್ತಾರೆ.

* * 

ಶಾಲೆಯಲ್ಲಿರುವ ಹಲವು ಸಮಸ್ಯೆಗಳ ನಡುವೆಯೂ ಮಕ್ಕಳ ಸರ್ವತೋಮುಖ ಏಳಿಗೆಗೆ ಶ್ರಮಿಸಲಾಗುತ್ತಿದೆ. ಸಂಬಂಧಪಟ್ಟವರು ಹೆಚ್ಚಿನ ಸೌಕರ್ಯ ಕಲ್ಪಿಸಬೇಕು
ಮಿಲಿಂದಾ ಪ್ಯಾಗೆ, ಮುಖ್ಯಶಿಕ್ಷಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.