ADVERTISEMENT

ಸ್ತ್ರೀ ಸ್ವಾತಂತ್ರ್ಯ ನೀಡಿದ ಬಸವಾದಿ ಶರಣರು

ಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಲೇಖಕಿ ಸುಮತಿ ಜಯಪ್ಪ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2017, 6:00 IST
Last Updated 3 ಫೆಬ್ರುವರಿ 2017, 6:00 IST
ಸ್ತ್ರೀ ಸ್ವಾತಂತ್ರ್ಯ ನೀಡಿದ ಬಸವಾದಿ ಶರಣರು
ಸ್ತ್ರೀ ಸ್ವಾತಂತ್ರ್ಯ ನೀಡಿದ ಬಸವಾದಿ ಶರಣರು   

ಹುಮನಾಬಾದ್: ಸ್ತ್ರೀ ಸ್ವಾತಂತ್ರ್ಯದ ಬಗ್ಗೆ ಮೊದಲು ಚಿಂತಿಸಿ, ಕ್ರಾಂತಿಗೈದು  ಸಮಾನತೆ ಒದಗಿಸಿದ ಮೊದಲ ಕೀರ್ತಿ 12ನೆಯ ಶತಮಾನದ ಬಸವಾದಿ ಶರಣರಿಗೆ ಸಲ್ಲುತ್ತದೆ ಎಂದು ಖ್ಯಾತ ಬರಹಗಾರ್ತಿ ಸುಮತಿ ಜಯಪ್ಪ ಅಭಿಪ್ರಾಯಪಟ್ಟರು. ಕನ್ನಡ ಸಾಹಿತ್ಯ ಪರಿಷತ್‌ ನಗರದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ಏರ್ಪಡಿಸಿದ್ದ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

12ನೇ ಶತಮಾನಕ್ಕೂ ಮುನ್ನ ಮಹಿಳೆಯನ್ನು ಕೇವಲ ನಾಲ್ಕು ಗೋಡೆಗಳಿಗೆ ಸೀಮಿತಗೊಳಿಸಿ, ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಒಳಗೊಂಡಂತೆ ಪ್ರತಿಯೊಂದು ಕ್ಷೇತ್ರಗಳಿಗೆ ನಿರ್ಬಂಧಿಸಲಾಗಿತ್ತು. ಅಂಥ ಸಂದರ್ಭದಲ್ಲಿ ದಿಟ್ಟ ಹೆಜ್ಜೆ ಇಟ್ಟವರು ಬಸವಣ್ಣನವರು. ಅವರ ಕ್ರಾಂತಿ ಪರಿಣಾಮ ಅಕ್ಕಮಹಾದೇವಿ ಅವರಂಥ ಅದೆಷ್ಟೋ ಬರಹಗಾರ್ತಿಯರು ಹೊರಬರಲು ಸಾಧ್ಯವಾಯಿತು ಎಂದರು. ಆದರೇ 21ನೇ ಶತಮಾನದ ಈ ಅವಧಿಯಲ್ಲೂ ಮಹಿಳೆ ಮೇಲಿನ ವಿವಿಧ ಬಗೆ ದೌರ್ಜನ್ಯ ತಡೆಗಟ್ಟಲು ಸಾಧ್ಯವಾಗಿಲ್ಲ. ಮಹಾಭಾರತದಲ್ಲಿ ತನ್ನ 5ಜನ ಪತಿಯಂದಿರಿದ್ದರೂ ಸಹ ದ್ರೌಪದಿ ರಕ್ಷಣೆ ಕೋರಿ ಶ್ರೀಕೃಷ್ಣನ ಮೊರೆ ಹೋದಳು. ಇಂದಿನ ಮಹಿಳೆಯರೇನು ಯಾರ ಮೊರೆ ಹೋಗಬೇಕು? ಎಂದು ಪ್ರಶ್ನಿಸಿದ ಸುಮತಿ ನಿತ್ಯ ಕನಿಷ್ಟ 600ಭ್ರೂಣಹತ್ಯೆ ಪ್ರಕರಣ ನಡೆಯುತ್ತಿವೆ ಎಂದು ವಿಷಾದಿಸಿದರು.

ಹೆಣ್ಣು– ಗಂಡಿನ ಯಶಸ್ಸಿನ ಹಿಂದೆ ಪರಸ್ಪರರ ಸಹಕಾರವಿದೆ. ಮಹಿಳೆಯರ ಅತಿಯಾದ ಆಸೆ ಕಾರಣಕ್ಕಾಗಿ ಪುರುಷರು ಭ್ರಷ್ಟಾಚಾರದಂಥ ಕೃತ್ಯಕ್ಕೆ ಕೈಹಾಕುವ ಅನಿವಾರ್ಯ ಬರುವ ಕಾರಣ ಸತಿಪತಿಗಳಿಬ್ಬರು ಹಾಸಿಗೆ ಇದ್ದಷ್ಟು ಕಾಲು ಚಾಚುವ ಮೂಲಕ ನೆಮ್ಮದಿ ಜೀವನ ಸಾಗಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಖ್ಯಾತ ಬರಹಗಾರ್ತಿ ಡಾ.ವಿಜಯಶ್ರಿ ಸಬರದ ಮಾತನಾಡಿ, ಹೈ.ಕ ಭಾಗದ ಬೆರಳೆಣಿಕೆ ಬರಹಗಾರರು ಮಾತ್ರ ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಕನ್ನಡಕ್ಕೆ ಈವರೆಗೆ ಬಂದ ಜ್ಞಾನಪೀಠ ಪ್ರಶಸ್ತಿಗಳ ಪೈಕಿ ಹೈ.ಕ ಭಾಗದ ಸಾಹಿತಿಗಳ್ಯಾರಿಗೂ ಅಂಥ ಅವಕಾಶ ಸಿಕ್ಕಿಲ್ಲ. ಆ ನಿಟ್ಟಿನಲ್ಲಿ ಈ ಭಾಗದ ಸಾಹಿತಿ ಚಿಂತಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು. ಸಾನಿಧ್ಯ ವಹಿಸಿದ್ದ ಬೀದರ್‌ ಬಸವಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣಾ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಸದಸ್ಯ ಲಕ್ಷ್ಮಣರಾವ ಬುಳ್ಳಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಮೇಶ ಡಾಕುಳಗಿ, ಇಒ ಡಾ.ಗೋವಿಂದಪ್ಪ, ಪುರಸಭೆ ಉಪಾಧ್ಯಕ್ಷೆ ಪಾರ್ವತಿ ಶೇರಿಕಾರ, ಮುಖ್ಯಾಧಿಕಾರಿ ಮೀನಾಕುಮಾರಿ ಬೋರಾಳಕರ್, ಕಸಾಪ ಜಿಲ್ಲಾ ಮಹಿಳಾ ಪ್ರತಿನಿಧಿ ಕಸ್ತೂರಿ ಪಟಪಳ್ಳಿ , ತಾಲ್ಲೂಕು ಮಹಿಳಾ ಘಟಕ ಅಧ್ಯಕ್ಷೆ ಶ್ರೀದೇವಿ ಎಸ್‌. ಮೋತಕಪಳ್ಳಿ ಇದ್ದರು. ಇದಕ್ಕೂ ಮುನ್ನ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸಚ್ಚಿದಾನಂದ ಮಠಪತಿ ರಾಷ್ಟ್ರಧ್ವಜ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸುರೇಶ ಚೆನಶೆಟ್ಟಿ ನಾಡಧ್ವಜ, ವಿಠ್ಠಲ ಕಡ್ಡಿ ಪರಿಷತ್‌ ಧ್ವಜಾರೋಹಣ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.