ADVERTISEMENT

ಹಾವು ಕುಡಿಯುವುದು ಹಾಲಲ್ಲ, ನೀರು

ಗುವಿವಿಯಲ್ಲಿ ಆಗುಂಬೆಯ ಪಿ.ಗೌರಿಶಂಕರ್ ಉಪನ್ಯಾಸ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2017, 9:00 IST
Last Updated 14 ಫೆಬ್ರುವರಿ 2017, 9:00 IST
ಕಲಬುರ್ಗಿಯ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಆಗುಂಬೆಯ ಕಾಳಿಂಗ ಸರ್ಪ ಮತ್ತು ಪರಿಸರ ವರ್ಷರಣ್ಯ ಕೇಂದ್ರದ ಸಂಸ್ಥಾಪಕ ನಿರ್ದೇಶಕ ಪಿ.ಗೌರಿಶಂಕರ್‌ ಉಪನ್ಯಾಸ ನೀಡಿದರು
ಕಲಬುರ್ಗಿಯ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಆಗುಂಬೆಯ ಕಾಳಿಂಗ ಸರ್ಪ ಮತ್ತು ಪರಿಸರ ವರ್ಷರಣ್ಯ ಕೇಂದ್ರದ ಸಂಸ್ಥಾಪಕ ನಿರ್ದೇಶಕ ಪಿ.ಗೌರಿಶಂಕರ್‌ ಉಪನ್ಯಾಸ ನೀಡಿದರು   
ಕಲಬುರ್ಗಿ: ‘ಹಾವು ಹಾಲು ಕುಡಿಯುವುದಿಲ್ಲ, ನೀರು ಕುಡಿಯುತ್ತವೆ. ಕಾಳಿಂಗ ಸರ್ಪ ಜಾತಿಯ ಹಾವುಗಳು ಗೂಡುಕಟ್ಟುತ್ತವೆ’ ಎಂದು ಶಿವಮೊಗ್ಗ ಜಿಲ್ಲೆ ಆಗುಂಬೆಯ ಕಾಳಿಂಗ ಸರ್ಪ ಮತ್ತು ಪರಿಸರ ವರ್ಷರಣ್ಯ ಕೇಂದ್ರದ ಸಂಸ್ಥಾಪಕ ನಿರ್ದೇಶಕ ಪಿ.ಗೌರಿಶಂಕರ್‌ ಹೇಳಿದರು.
 
ಇಲ್ಲಿಯ ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಡಾರ್ವಿನ್ ಹಾಲ್‌ನಲ್ಲಿ ಪರಿಸರ ವಿಜ್ಞಾನ ವಿಭಾಗದ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಸೋಮವಾರ ಆಯೋಜಿಸಿದ್ದ ಉಪನ್ಯಾಸಗೋಷ್ಠಿಯಲ್ಲಿ ‘ಪ್ರಕೃತಿಯಲ್ಲಿ ಕಾಳಿಂಗ ಸರ್ಪ ಬೆಳೆದು ಬಂದ ಇತಿಹಾಸ’ ಕುರಿತು ಅವರು ಮಾತನಾಡಿದರು.
 
‘ಭಾರತದಲ್ಲಿ ಸುಮಾರು 28 ಸಾವಿರ ಹಾವಿನ ಪ್ರಭೇದಗಳಿವೆ. ಉರಿಮಂಡಲ, ನಾಗರಹಾವು, ಕಿಂಗ್ ಖೋಬ್ರಾ ಸಹ ಇವೆ. ಯಾವುದೇ ಜಾತಿಯ ಹಾವು ಕಚ್ಚಿದರೂ ನಿರ್ಲಕ್ಷ್ಯ ವಹಿಸುವುದು ಸಲ್ಲ, ತಕ್ಷಣವೇ ಸಮೀಪದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕು. ಕೆಲವೊಂದು ಜಾತಿಯ ಹಾವುಗಳು ಕಚ್ಚಿದರೆ ನೋವಾಗುವುದಿಲ್ಲ, ಸ್ವಲ್ಪ ಸಮಯದಲ್ಲಿಯೇ ಸಾವು ಸಂಭವಿಸುವ ಸಾಧ್ಯತೆ ಇರುತ್ತದೆ’ ಎಂದು ವಿವರ ನೀಡಿದರು. 
 
‘ಹಾವು ಹಿಡಿದುಕೊಂಡು ಫೋಟೊಗಳನ್ನು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುತ್ತಿರುತ್ತಾರೆ, ಅಂತಹವುಗಳನ್ನು ಲೈಕ್ ಮಾಡಿ, ಪ್ರೋತ್ಸಾಹಿಸಬೇಡಿ. ಹಾವುಗಳನ್ನು ಕೈಯಲ್ಲಿ ಹಿಡಿದುಕೊಂಡು ಆಟವಾಡಿಸುವುದರಿಂದ ಅವರ ಜೀವಕ್ಕೂ ಅಪಾಯ ಮತ್ತು ಪ್ರಾಣಿ ಹಿಂಸೆಯೂ ಆಗುತ್ತದೆ. ಶೇ 86ರಷ್ಟು ಜನರು ಹಾವುಗಳನ್ನು ಕೊಲ್ಲುತ್ತಾರೆ, ಹಾವುಗಳನ್ನು ರಕ್ಷಿಸಬೇಕು ಎನ್ನುವವರ ಪ್ರಮಾಣ ಶೇ 14 ಮಾತ್ರ’ ಎಂದರು.
 
ವಿಜ್ಞಾನ ವಿಭಾಗದ ಡೀನ್‌ ಪ್ರೊ.ಕೆ.ವೆಂಕಟರಮನ್, ಪ್ರಾಣಿ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಕೆ ವಿಜಯಕುಮಾರ್, ಪರಿಸರ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಪಕ ಡಾ.ಪ್ರಕಾಶ ಕರಿಯಜ್ಜನವರ್, ಪ್ರೊ.ಮುರುಳಿ ಜಡೇಶ್  ಇದ್ದರು. ಅಮರೇಶ ಯಾಕಾಪೂರ ನಿರೂಪಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.