ADVERTISEMENT

ಒಂದು ಕಾಲೇಜಿಗೆ ಪ್ರವೇಶ, ಮೂರು ಕಾಲೇಜಿಗೆ ಸುತ್ತಾಟ

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ಸೌಲಭ್ಯಗಳ ಕೊರತೆ, ವಿದ್ಯಾಭ್ಯಾಸಕ್ಕೆ ತೊಂದರೆ

ಚಂದ್ರಕಾಂತ ಮಸಾನಿ
Published 15 ಜನವರಿ 2018, 8:05 IST
Last Updated 15 ಜನವರಿ 2018, 8:05 IST
ಬೀದರ್‌ನ ಓಲ್ಡ್‌ಸಿಟಿಯಲ್ಲಿರುವ ಪ್ರೌಢ ಶಾಲಾ ಕಟ್ಟಡದಲ್ಲಿ ನಡೆಯುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಒಂದೇ ಕೊಠಡಿಯಲ್ಲಿ ಕುಳಿತಿರುವ ವಿವಿಧ ವಿಭಾಗಗಳ ವಿದ್ಯಾರ್ಥಿನಿಯರು
ಬೀದರ್‌ನ ಓಲ್ಡ್‌ಸಿಟಿಯಲ್ಲಿರುವ ಪ್ರೌಢ ಶಾಲಾ ಕಟ್ಟಡದಲ್ಲಿ ನಡೆಯುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಒಂದೇ ಕೊಠಡಿಯಲ್ಲಿ ಕುಳಿತಿರುವ ವಿವಿಧ ವಿಭಾಗಗಳ ವಿದ್ಯಾರ್ಥಿನಿಯರು   

ಬೀದರ್‌: ನಗರದ ಮಧ್ಯಭಾಗದಲ್ಲಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಆರಂಭವಾಗಿ ಮೂರು ವರ್ಷಗಳು ಕಳೆದಿವೆ. ಮೂಲ ಸೌಲಭ್ಯಗಳ ಕೊರತೆಯ ಮಧ್ಯೆಯೇ ಕಷ್ಟುಪಟ್ಟು ಓದಿ ಒಂದು ಬ್ಯಾಚ್‌ ಹೊರಬಂದಿದೆ. ಕಾಲೇಜಿನಲ್ಲಿ ಪ್ರವೇಶ ಪಡೆದಿರುವ ಬಡ ಕುಟುಂಬಗಳ ವಿದ್ಯಾರ್ಥಿನಿಯರ ಸಂಕಷ್ಟಗಳಿಗೆ ಯಾರೊಬ್ಬರೂ ಸ್ಪಂದಿಸುತ್ತಿಲ್ಲ. ಶೈಕ್ಷಣಿಕ ಸೌಲಭ್ಯಕ್ಕಾಗಿ ಹೆಣ್ಣುಮಕ್ಕಳ ಪರದಾಟ ಮುಂದುವರಿದಿದೆ.

ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿನಿಯರು ಪದವಿ ಪಡೆಯುವ ಕನಸಿನೊಂದಿಗೆ ಇಲ್ಲಿ ಪ್ರವೇಶ ಪಡೆದಿದ್ದಾರೆ. ಸರ್ಕಾರಿ ಕಾಲೇಜು ಆದರೂ ಇಲ್ಲಿ ಗ್ರಂಥಾಲಯ, ಪ್ರಯೋಗಾಲಯ, ಶೌಚಾಲಯ ಇಲ್ಲ. ಕಾಲೇಜಿನಲ್ಲಿ ಬಿಎಸ್ಸಿ ಕೋರ್ಸ್‌ ಆರಂಭವಾಗಿ ಒಂದು ವರ್ಷ ಕಳೆಯುತ್ತ ಬಂದಿದೆ. ಬಿಎಸ್ಸಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕೊಠಡಿಗಳೇ ಇಲ್ಲ. ಹಲವು ವರ್ಷಗಳಿಂದ ಸುಣ್ಣಬಣ್ಣ ಕಾಣದ ಪ್ರೌಢ ಶಾಲೆಯ ಹಳೆಯ ಕಟ್ಟಡದಲ್ಲಿ ನಡೆಯುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬಿ.ಎ, ಬಿ.ಕಾಂ ಹಾಗೂ ಬಿಎಸ್ಸಿ ಸೇರಿ ಮೂರು ವಿಭಾಗದಲ್ಲಿ ಒಟ್ಟು 310 ವಿದ್ಯಾರ್ಥಿನಿಯರು ಅಧ್ಯಯನ ಮಾಡುತ್ತಿದ್ದಾರೆ.

ವಿದ್ಯಾರ್ಥಿನಿಯರು ಪಕ್ಕದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಳೆಯ ಕಟ್ಟಡದಲ್ಲಿ ಪಾಠ ಆಲಿಸಬೇಕಾಗಿದೆ. ಪ್ರಾಯೋಗಿಕ ಅಭ್ಯಾಸಕ್ಕಾಗಿ ಎರಡೂವರೆ ಕಿ.ಮೀ ಅಂತರದಲ್ಲಿರುವ ಅಕ್ಕ ಮಹಾದೇವಿ ಮಹಿಳಾ ಕಾಲೇಜಿಗೆ ಹೋಗಿ ಬರಬೇಕಿದೆ. ಶೌಚಾಲಯಕ್ಕೆ ಪ್ರೌಢ ಶಾಲೆಗೆ ಹೋಗುವುದು ಅನಿವಾರ್ಯವಾಗಿದೆ. ಮೂರು ಕಾಲೇಜುಗಳಿಗೆ ಹೋಗಿ ಬರಬೇಕಾಗಿರುವುದರಿಂದ ಸರ್ಕಾರಿ ಪದವಿ ಕಾಲೇಜಿನಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿನಿಯರಿಗೆ ಪಾಪ ಪ್ರಜ್ಞೆ ಕಾಡುತ್ತಿದೆ.

ADVERTISEMENT

‘ಕಾಲೇಜಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಮನೆಯಿಂದಲೇ ಬಾಟಲಿಯಲ್ಲಿ ನೀರು ತರುತ್ತೇವೆ. ನೈಸರ್ಗಿಕ ಕರೆ ಬಂದರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿರುವ ಶೌಚಾಲಯಕ್ಕೆ ಹೋಗುತ್ತೇವೆ ಅಥವಾ ಮನೆಗೆ ಮರಳುತ್ತೇವೆ. ಹೆಣ್ಣು ಮಕ್ಕಳ ವಿಷಯದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ’ ಎಂದು ವಿದ್ಯಾರ್ಥಿನಿಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಕಾಲೇಜಿಗೆ ಬರುವವರಲ್ಲಿ ಶೇಕಡ 40 ರಷ್ಟು ಮುಸ್ಲಿಮ ವಿದ್ಯಾರ್ಥಿನಿಯರು ಇದ್ದಾರೆ. ಶೇಕಡ 20ರಷ್ಟು ವಿದ್ಯಾರ್ಥಿನಿಯರು ಗ್ರಾಮೀಣ ಪ್ರದೇಶದಿಂದ ಬರುತ್ತಾರೆ. ಬಹುತೇಕ ಬಡ ಕುಟುಂಬದ ಹೆಣ್ಣುಮಕ್ಕಳೇ ಇಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ ಇಲ್ಲ. ಕೊಠಡಿ ಹಾಗೂ ಶೌಚಾಲಯದ ಅಗತ್ಯವಿದೆ’ ಎಂದು ಕಾಲೇಜಿನ ವಿದ್ಯಾರ್ಥಿನಿಯರಾದ ಪಾರ್ವತಿ ಹಾಗೂ ಪೂಜಾ ಬಗದಲ್ ಹೇಳುತ್ತಾರೆ.

2013ರ ಆಗಸ್ಟ್‌ 31ರಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಕಾರ್ಯಾರಂಭ ಮಾಡಿದೆ. 2013ರ ಸೆಪ್ಟೆಂಬರ್‌ನಿಂದ ಕಾಲೇಜಿನ ಪ್ರಾಚಾರ್ಯರು ಕಾಲೇಜು ಶಿಕ್ಷಣ ಇಲಾಖೆ, ಜಿಲ್ಲಾ ಆಡಳಿತ ಹಾಗೂ ಶಾಸಕರಿಗೆ ಮನವಿ ಸಲ್ಲಿಸುತ್ತಲೇ ಇದ್ದಾರೆ. ಪಾಲಕರು ಸಹ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರರಿಗೆ ಮೂಲ ಸೌಕರ್ಯ ಒದಗಿಸುವಂತೆ ಹಲವು ಬಾರಿ ಮನವಿಪತ್ರ ಸಲ್ಲಿಸಿದ್ದಾರೆ. ನಗರಸಭೆ ಸದಸ್ಯರ ನೇತೃತ್ವದಲ್ಲಿ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಆದರೆ, ಈವರೆಗೂ ಶಾಶ್ವತ ಪರಿಹಾರ ದೊರಕಿಲ್ಲ.

‘ಜನವಾಡ ರಸ್ತೆಯಲ್ಲಿರುವ ಆದರ್ಶ ವಿದ್ಯಾಲಯದ ಕಟ್ಟಡವನ್ನು ನವೀಕರಿಸಿ ಮಹಿಳಾ ಕಾಲೇಜಿಗೆ ಕೊಡುವುದಾಗಿ ಜಿಲ್ಲಾ ಆಡಳಿತ ಭರವಸೆ ನೀಡಿದೆ. ಇಲ್ಲಿಯೇ ಇರುವ ಮೂರು ಎಕರೆ ಜಮೀನನ್ನು ಕಾಲೇಜಿಗೆ ಕೊಟ್ಟರೆ ಹೊಸ ಕಟ್ಟಡ ನಿರ್ಮಿಸಲು ಅನುಕೂಲವಾಗಲಿದೆ. ರಾಜ್ಯ ಸರ್ಕಾರ ಜಾಗ ಮಂಜೂರು ಮಾಡಿದರೆ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯಿಂದ ₹ 2 ಕೋಟಿ ದೊರೆಯಲಿದೆ. ಈ ದಿಸೆಯಲ್ಲಿ ಪ್ರಯತ್ನ ನಡೆದಿದೆ’ ಎನ್ನುತ್ತಾರೆ ಕಾಲೇಜಿನ ಪ್ರಾಚಾರ್ಯ ಚಿದಾನಂದ.

‘ಆದರ್ಶ ವಿದ್ಯಾಲಯದ ಕಟ್ಟಡದ ನವೀಕರಣಕ್ಕೆ ₹ 23 ಲಕ್ಷ ಮಂಜೂರಾಗಿದೆ. ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದಲೂ ಅನುದಾನ ಪಡೆಯಲಾಗುವುದು. ಒಂದು ವಾರದಲ್ಲಿ ಟೆಂಡರ್‌ ಕರೆದು ನವೀಕರಣ ಕಾಮಗಾರಿ ಆರಂಭಿಸಲಾಗುವುದು. ಕಾಮಗಾರಿ ಪೂರ್ಣಗೊಂಡ ತಕ್ಷಣ ಕಟ್ಟಡವನ್ನು ಮಹಿಳಾ ಕಾಲೇಜಿಗೆ ಹಸ್ತಾಂತರ ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಎಚ್‌.ಆರ್.ಮಹಾದೇವ ವಿವರಿಸುತ್ತಾರೆ.
***
ಜಿಲ್ಲಾ ಆಡಳಿತವು ಜನವಾಡ ರಸ್ತೆಯಲ್ಲಿರುವ ಆದರ್ಶ ವಿದ್ಯಾಲಯದ ಕಟ್ಟಡವನ್ನು ಮಹಿಳಾ ಕಾಲೇಜಿಗೆ ಕೊಡುವ ಭರವಸೆ ನೀಡಿದೆ.
–ಎಸ್. ಚಿದಾನಂದ, ಪ್ರಾಚಾರ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.