ADVERTISEMENT

ಬಯಲು ಶೌಚ ಮುಕ್ತ ನಗರಕ್ಕೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2018, 8:59 IST
Last Updated 20 ಫೆಬ್ರುವರಿ 2018, 8:59 IST
ಬೀದರ್‌ನಲ್ಲಿ ಸೋಮವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಸಿಂಗಲ್‌ ಟೆಂಡರ್‌ ಕರೆದು ಕಾಮಗಾರಿ ಮಾಡಿದ್ದಕ್ಕೆ ಸದಸ್ಯ ಎಚ್‌.ಎಸ್‌.ಮಾರ್ಟಿನ್‌ ಹಾಗೂ ರಿಯಾಜ್‌ ವಿರೋಧ ವ್ಯಕ್ತಪಡಿಸಿದರು
ಬೀದರ್‌ನಲ್ಲಿ ಸೋಮವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಸಿಂಗಲ್‌ ಟೆಂಡರ್‌ ಕರೆದು ಕಾಮಗಾರಿ ಮಾಡಿದ್ದಕ್ಕೆ ಸದಸ್ಯ ಎಚ್‌.ಎಸ್‌.ಮಾರ್ಟಿನ್‌ ಹಾಗೂ ರಿಯಾಜ್‌ ವಿರೋಧ ವ್ಯಕ್ತಪಡಿಸಿದರು   

ಬೀದರ್: ‘ಮಾರ್ಚ್‌ ಅಂತ್ಯದ ವೇಳೆಗೆ ಬೀದರ್‌ ಅನ್ನು ಬಯಲು ಶೌಚಮುಕ್ತ ನಗರ ಮಾಡಲು ನಿರ್ಧರಿಸಲಾಗಿದೆ’ ಎಂದು ನಗರಸಭೆಯ ಆಯುಕ್ತ ಮನೋಹರ ತಿಳಿಸಿದರು.

ನಗರದಲ್ಲಿ ಸೋಮವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ‘ಆರು ತಿಂಗಳ ಹಿಂದೆ ಅರ್ಜಿ ಕರೆಯಲಾಗಿತ್ತು. ವೈಯಕ್ತಿಯ ಶೌಚಾಲಯ ನಿರ್ಮಿಸಿಕೊಳ್ಳಲು ಐದು ಸಾವಿರ ಅರ್ಜಿಗಳು ಬಂದಿದ್ದವು. ಈಗಾಗಲೇ ಮೂರು ಸಾವಿರ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ’ ಎಂದು ಹೇಳಿದರು.

‘ಸರ್ಕಾರೇತರ ಸಂಘಟನೆಯ ಮೂಲಕ 15 ದಿನಗಳಲ್ಲಿ ಒಂದು ಸಾವಿರ ಶೌಚಾಲಯಗಳನ್ನು ನಿರ್ಮಿಸ ಲಾಗುವುದು. ಒಂದು ಶೌಚಾಲಯ ನಿರ್ಮಾಣಕ್ಕೆ ₹ 15 ಸಾವಿರ ವೆಚ್ಚವಾಗಲಿದೆ. ಸೆಂಟ್ರಲ್‌ ಪಬ್ಲಿಕ್‌ ವರ್ಕ್‌ ಡಿಪಾರ್ಟ್‌ಮೆಂಟ್‌ ಅನುದಾನ ಕೊಡಲಿದೆ. ಕೇಂದ್ರ ಸರ್ಕಾರ, ಸ್ವಚ್ಛ ಭಾರತ ಮಿಷನ್ ಅಡಿ ₹ 4 ಸಾವಿರ, ರಾಜ್ಯ ಸರ್ಕಾರ ₹ 1,300 ಕೊಡಲಿದೆ. ಉಳಿದ ಹಣವನ್ನು ನಗರಸಭೆ ಭರಿಸಲಿದೆ’ ಎಂದು ತಿಳಿಸಿದರು.

ADVERTISEMENT

‘ನಗರದಲ್ಲಿ ಎಂಟು ಸಾರ್ವಜನಿಕ ಶೌಚಾಲಯ ನವೀಕರಣ ಮಾಡಲಾಗುವುದು. ಒಂಬತ್ತು ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗುವುದು. ನಗರದಲ್ಲಿ ಆಯ್ದ ಆರು ಕಡೆ ಪ್ಲಾಸ್ಟಿಕ್‌ ಮೂತ್ರಾಲಯ ನಿರ್ಮಿಸಿ ನೀರು ಪೂರೈಸಲು ಒಬ್ಬ ಪೌರ ಕಾರ್ಮಿಕನನ್ನು ನಿಯೋಜಿಸಲಾಗುವುದು’ ಎಂದರು.

ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷೆ ಶಾಲಿನಿ ರಾಜು ಚಿಂತಾಮಣಿ ಮಾತನಾಡಿ, ‘ನಗರ ನೈರ್ಮಲ್ಯಕ್ಕೆ ಆದ್ಯತೆ ನೀಡಲಾಗಿದೆ. ಸಾರ್ವಜನಿಕರು ಸಹ ಸ್ವಚ್ಛತೆ ಕಾಪಾಡಲು ನೆರವಾಗಬೇಕು’ ಎಂದು ಹೇಳಿದರು.

ನಗರದಲ್ಲಿ ಆರು ತಿಂಗಳ ಹಿಂದೆ ಒಬ್ಬರಿಗೆ ಗುತ್ತಿಗೆ ನೀಡಿ ರಸ್ತೆ, ಗಟಾರ ನಿರ್ಮಿಸಲಾಗಿದೆ. ಕೆಲ ಕಡೆ ಕೊಳವೆಬಾವಿ ತೋಡಲಾಗಿದೆ. ಟೆಂಡರ್‌ ಕರೆಯದೇ ಕಾಮಗಾರಿ ವಹಿಸಿಕೊಟ್ಟಿರುವುದು ಸರಿಯಲ್ಲ ಎಂದು ಸದಸ್ಯ ರಿಯಾಜ್‌, ಎಚ್.ಎಸ್‌. ಮಾರ್ಟಿನ್‌ ಹಾಗೂ ಧನರಾಜ್ ಹಂಗರಗಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

‘ನಾನು ಇಲ್ಲಿಗೆ ಬರುವ ಮುಂಚೆಯೇ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಗುತ್ತಿಗೆದಾರರಿಗೆ ಹಣ ಪಾವತಿಸಬೇಕಾದರೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒಪ್ಪಿಗೆ ನೀಡುವುದು ಅನಿವಾರ್ಯವಾಗಿದೆ’ ಎಂದು ಆಯುಕ್ತ ಮನೋಹರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.