ADVERTISEMENT

ಹೆಚ್ಚಿದ ಪಟಾಕಿ ಬೆಲೆ: ಗ್ರಾಹಕರ ಜೇಬಿಗೆ ಹೊರೆ

ಪರಿಸರ ಸ್ನೇಹಿ ದೀಪಾವಳಿ ಆಚರಣೆಗೆ ಅಧಿಕಾರಿಗಳ ಮನವಿ

ಬಸವರಾಜ ಎಸ್.ಪ್ರಭಾ
Published 24 ಅಕ್ಟೋಬರ್ 2022, 6:55 IST
Last Updated 24 ಅಕ್ಟೋಬರ್ 2022, 6:55 IST
ಭಾಲ್ಕಿಯ ಅಂಗಡಿಯೊಂದರಲ್ಲಿ ಪಟಾಕಿ ಖರೀದಿಸುತ್ತಿರುವ ಗ್ರಾಹಕರು
ಭಾಲ್ಕಿಯ ಅಂಗಡಿಯೊಂದರಲ್ಲಿ ಪಟಾಕಿ ಖರೀದಿಸುತ್ತಿರುವ ಗ್ರಾಹಕರು   

ಭಾಲ್ಕಿ: ಮಕ್ಕಳ ಅಚ್ಚುಮೆಚ್ಚಿನ ಬೆಳಕಿನ ಹಬ್ಬವಾದ ದೀಪಾವಳಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ, ಪ್ರಸ್ತುತ ವರ್ಷದ ಪಟಾಕಿ ಬೆಲೆಯಲ್ಲಿ ಶೇ.30-40ರಷ್ಟು ಏರಿಕೆಯಾಗಿದ್ದು, ಮಧ್ಯಮ ವರ್ಗದ, ಬಡ ಜನರ ಸಂಭ್ರಮ, ಖುಷಿಗೆ ಅಡ್ಡಿಯಾಗಿದೆ.

ಒಂದೆಡೆ ಅತಿಯಾದ ಮಳೆ, ಕೈಗೆ ಬಾರದ ಬಹುತೇಕ ಬೆಳೆ. ಬೆಳೆ ಬಂದರೂ ಇಳುವರಿಯಲ್ಲಿ ಕಡಿತ ಆಗಿರುವುದರಿಂದ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಮಧ್ಯೆ ದಿನಸಿ, ತರಕಾರಿ, ಹಣ್ಣು, ಹೂವಿನ ಜತೆಗೆ ಪಟಾಕಿ ದರ ಏರಿಕೆಯಾಗಿದ್ದು, ಅಳೆದು ತೂಗಿ ಖರ್ಚು ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ADVERTISEMENT

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಸ್ವಲ್ಪ ಕಡಿಮೆಯಾಗಿದೆಯಾದರೂ ಹೇಳಿಕೊಳ್ಳುವಷ್ಟು ಕಡಿಮೆಯಾಗಿಲ್ಲ. ಕೊರೊನಾ ಸೋಂಕಿನ ಆರ್ಭಟದಲ್ಲಿ ಸದ್ದಿಲ್ಲದೆ ಬದಿಗೆ ಸರಿದ ಬಗೆ ಬಗೆಯ ಪಟಾಕಿಗಳು ಪುನಃ ಆಕರ್ಷಕ, ನವೀನ ರೂಪ, ಶಕ್ತಿ ಪಡೆದುಕೊಂಡು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಇದರಿಂದ ಪಟಾಕಿಗಳ ಸ್ನೇಹದಿಂದ ಕೊರೊನಾ ಕಾಲದಲ್ಲಿ ತುಸು ದೂರಾಗಿದ್ದ ಮಕ್ಕಳು, ಯುವಕರು, ಮಹಿಳೆಯರು ಪಟಾಕಿ ಸಿಡಿಸಿ ತಮ್ಮ ಸಂಭ್ರಮವನ್ನು ಮುಗಿಲು ಮುಟ್ಟವಂತೆ ಮಾಡಬೇಕು ಎಂದುಕೊಂಡಿದ್ದರು. ಆದರೆ ಬೆಲೆ ಏರಿಕೆಯಿಂದ ಜನರು ಹಿಂದುಮುಂದು ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನು ಮಾರುಕಟ್ಟೆಗಳಲ್ಲಿ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅನುಮತಿ ನೀಡಿದ ಕಾರಣ ಮಾರಾಟದ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಪಟಾಕಿ ಅಂಗಡಿ ಮಾಲೀಕ ದತ್ತಾತ್ರಿ ಜಾಧವ ಹಾಗೂ ಹಿರಿಯ ವ್ಯಾಪಾರಿಗಳು ವಿಶ್ಲೇಷಿಸುತ್ತಾರೆ.

ಹಬ್ಬದ ಸಾಮಗ್ರಿ ಖರೀದಿ ಜೋರು: ದೀಪಾವಳಿ ಹಬ್ಬದ ವಿಶೇಷ ಹಣತೆಗಳಾದ ನೋಮದಾರ, ಬಾಳೆಗೊನೆ, ಕಬ್ಬು ಸೇರಿದಂತೆ ಹಬ್ಬಕ್ಕೆ ಅವಶ್ಯಕವಾದ ವಸ್ತುಗಳು ಮಹಾತ್ಮ ಗಾಂಧಿ ವೃತ್ತ, ಅಂಬೇಡ್ಕರ್‌ ವೃತ್ತ ಸೇರಿದಂತೆ ರಸ್ತೆ ಅಕ್ಕಪಕ್ಕ, ತಳ್ಳು ಬಂಡಿಗಳಲ್ಲಿ ಎಲ್ಲೆಲ್ಲೂ ಕಾಣಿಸುತ್ತಿವೆ. ಸತತ ಮಳೆಯಿಂದ ತರಕಾರಿ ಬರುವುದೇ ಕಡಿಮೆಯಾಗಿರುವ ಕಾರಣ ತರಕಾರಿ ಬೆಲೆಯಲ್ಲಿ ಏರಿಕೆಯಾಗಿದೆ.

ಹಣ್ಣುಗಳ ಬೆಲೆಯಲ್ಲೂ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.