ADVERTISEMENT

ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2016, 6:50 IST
Last Updated 31 ಡಿಸೆಂಬರ್ 2016, 6:50 IST

ಚಾಮರಾಜನಗರ: ‘ನಗರದ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರವು ಜಿಲ್ಲೆಯ ವಿಶ್ವವಿದ್ಯಾನಿಲಯ ವಾಗಲಿ’ ಎಂದು ಸಹಕಾರ ಮತ್ತು ಸಕ್ಕರೆ ಸಚಿವ ಎಚ್.ಎಸ್. ಮಹದೇವಪ್ರಸಾದ್ ಹೇಳಿದರು.

ನಗರದ ಹೊರವಲಯದಲ್ಲಿರುವ ಕೆಲ್ಲಂಬಳ್ಳಿಯಲ್ಲಿ ಶುಕ್ರವಾರ ನೂತನವಾಗಿ ನಿರ್ಮಾಣವಾಗಿರುವ ಡಾ.ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ನೂತನ ಕೇಂದ್ರ ಕಟ್ಟಡಕ್ಕೆ ರಾಜ್ಯ ಸರ್ಕಾರ ₹ 9 ಕೋಟಿ ಅನುದಾನ ನೀಡಿದೆ. ವಿಶ್ವವಿದ್ಯಾಲಯವಾಗಲು ಕಲಾ ಹಾಗೂ ವಿಜ್ಞಾನ ಭವನಗಳಿಗೆ ತಲಾ ₹ 10 ಕೋಟಿಯ ನೆರವು ಅಗತ್ಯವಿದೆ ಎಂದು ಪ್ರಸ್ತಾವ ಸಲ್ಲಿಸಲಾಗಿದೆ. ಇದಕ್ಕೆ  ನೆರವು ಒದಗಿಸಲು ಅಗತ್ಯವಿರುವ ಎಲ್ಲ ಸಾಧ್ಯತೆಗಳನ್ನು ಪರಿಶೀಲಿಸಲಾಗುವುದು ಎಂದರು.

ಸಂಸದ ಆರ್.ಧ್ರುವನಾರಾಯಣ ಮಾತನಾಡಿ, ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ  ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರವು ಕಲಶಪ್ರಾಯವಾಗಿದೆ. ಜಿಲ್ಲೆ ಯಲ್ಲಿ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಹೆಚ್ಚಾಗಬೇಕು ಎಂದರು.

ಪ್ರೊ.ಕೆ.ಎಸ್.ರಂಗಪ್ಪ ಮಾತನಾಡಿ, ಉನ್ನತ ಶಿಕ್ಷಣ ನೀಡುವಲ್ಲಿ ವಿಶ್ವವಿದ್ಯಾ ನಿಲಯ ಪಾತ್ರ ಮಹತ್ವವಾಗಿದೆ. ಸ್ಥಳೀಯ ಜಿಲ್ಲೆಯ ವಿದ್ಯಾರ್ಥಿಗಳು ಸಾಕಷ್ಟು ಪ್ರತಿಭಾವಂತರಾಗಿದ್ದಾರೆ. ವಿಜ್ಞಾನ ವಿಭಾಗವನ್ನು ಆರಂಭಿಸಲು ₹ 10 ಕೋಟಿ ಅಗತ್ಯವಿದೆ.  ನೆರವು ದೊರೆತರೆ ವಿಜ್ಞಾನ ಅಧ್ಯಯನಕ್ಕೆ ಸಾಕಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.

ಶಾಸಕ ಸಿ. ಪುಟ್ಟರಂಗಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ. ಶಿವ ಬಸವಯ್ಯ, ಜಿಲ್ಲಾಧಿಕಾರಿ ಬಿ.ರಾಮು, ಮೈಸೂರು ವಿಶ್ವವಿದ್ಯಾನಿಲಯದ ಕುಲ ಸಚಿವ ಪ್ರೊ.ಆರ್.ರಾಜಣ್ಣ, ನಗರಸಭೆ ಅಧ್ಯಕ್ಷೆ ಎಸ್.ಎನ್. ರೇಣುಕಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷ ರವಿಕುಮಾರ್ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.