ADVERTISEMENT

ಆಲೂರಿನಲ್ಲಿ ರಾಚಯ್ಯ ಸ್ಮಾರಕ

ಎಸ್.ಪ್ರಕಾಶ್
Published 6 ಆಗಸ್ಟ್ 2017, 8:46 IST
Last Updated 6 ಆಗಸ್ಟ್ 2017, 8:46 IST

ಚಾಮರಾಜನಗರ: ತಾಲ್ಲೂಕಿನ ಆಲೂರು ಗ್ರಾಮದಲ್ಲಿ ಮಾಜಿ ರಾಜ್ಯಪಾಲ, ದಿವಂಗತ ಬಿ. ರಾಚಯ್ಯ ಅವರ ಸ್ಮರಣಾರ್ಥ ಭವ್ಯ ಸ್ಮಾರಕ ಭವನ ತಲೆ ಎತ್ತಲಿದೆ. ಬಿ. ರಾಚಯ್ಯ ಅವರ ಸಮಾಧಿ ಇರುವ ತೋಟದಲ್ಲಿ ಸ್ಮಾರಕ ನಿರ್ಮಾಣ ಆಗಲಿದೆ. ಸಮಾಧಿಯು ಕೇಂದ್ರಭಾಗದಲ್ಲಿ ಇರುವಂತೆ ಅದರ ಸುತ್ತಲೂ ಆಕರ್ಷಕ ವಿನ್ಯಾಸದ ಕಟ್ಟಡ ರೂಪತಾಳಲಿದೆ.

ಸ್ಮಾರಕದ ಮೇಲಂತಸ್ತಿನಲ್ಲಿ ರಾಚಯ್ಯ ಅವರ ಬದುಕಿನ ಕುರಿತ ಮಾಹಿತಿ, ಅವರ ಅಪರೂಪದ ಚಿತ್ರಗಳನ್ನು ಒಳಗೊಂಡ ಮ್ಯೂಸಿಯಂ ಇರಲಿದೆ. ಸ್ವತಂತ್ರ ಭಾರತದ ಮೊದಲ ಚುನಾವಣೆಯಲ್ಲಿ ಬಿ. ರಾಚಯ್ಯ ಅವರು ಯಳಂದೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರಜಾಪಾರ್ಟಿಯಿಂದ ಸ್ಪರ್ಧಿಸಿ ಮೊದಲ ಶಾಸಕರಾಗಿ ಆಯ್ಕೆಯಾಗಿದ್ದರು.

ಅಂದಿನಿಂದ ಅವರು ರಾಜ್ಯಪಾಲರಾಗಿ ನಿವೃತ್ತರಾಗಿ ನಿಧನರಾದ ಅವಧಿಯವರೆಗಿನ ಅವರ ಬೆಳವಣಿಗೆಯ ಹಾದಿಯ ವಿವರ ಮತ್ತು ಚಿತ್ರಗಳು ಇಲ್ಲಿ ಪ್ರದರ್ಶನವಾಗಲಿವೆ. ಆ್ಯಂಪಿಥಿಯೇಟರ್‌ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆಯುಳ್ಳ ಸೌಲಭ್ಯಗಳನ್ನು ಒಳಗೊಳ್ಳಲಿದೆ.

ADVERTISEMENT

‘ಸ್ಮಾರಕ ಭವನಕ್ಕೆ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನಲ್ಲಿರುವ ಸತ್ಯಾಗ್ರಹ ಸೌಧದ ವಿನ್ಯಾಸ ಪ್ರೇರೇ ಪಣೆಯಾಗಿದೆ. ಅದಕ್ಕಿಂತಲೂ ಉತ್ತಮವಾಗಿ ನೂತನ ಮಾದರಿಯಲ್ಲಿ ನಿರ್ಮಿಸಲಾಗುತ್ತದೆ’ ಎಂದು ನಿರ್ಮಿತಿ ಕೇಂದ್ರದ ಅಧಿಕಾರಿಗಳು ತಿಳಿಸಿದರು.

ಒಟ್ಟು ಮೂರು ಸ್ಮಾರಕ: ಹಿರಿಯ ರಾಜಕಾರಣಿಗಳಾದ ಬಿ. ಬಸವಲಿಂಗಪ್ಪ, ಮೈಸೂರು ಭಾಗದ ಎನ್‌. ರಾಚಯ್ಯ ಮತ್ತು ಬಿ. ರಾಚಯ್ಯ ಅವರ ಸ್ಮಾರಕಗಳ ನಿರ್ಮಾಣಕ್ಕೆ ಸರ್ಕಾರ ನಿರ್ಧರಿಸಿದ್ದು, ಈ ಪೈಕಿ ಬಿ. ರಾಚಯ್ಯ ಅವರ ಸ್ಮಾರಕ ಭವನಕ್ಕೆ ಮೊದಲು ಶಿಲಾನ್ಯಾಸ ನಡೆಯಲಿದೆ.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕ್ಷೇತ್ರದ ಬೆಳವಣಿಗೆಗೆ ಬಿ. ರಾಚಯ್ಯ ಅವರ ಸಹಕಾರ ಮಹತ್ವದ್ದು. ಈ ಬಗ್ಗೆ ಮುಖ್ಯಮಂತ್ರಿಗಳೇ ಹಲವು ಸಂದರ್ಶನಗಳಲ್ಲಿ ತಿಳಿಸಿದ್ದಾರೆ. ಅದರ ಗೌರವಾರ್ಥವಾಗಿ ಅವರು ಸ್ಮಾರಕ ನಿರ್ಮಾಣಕ್ಕೆ ಅನುದಾನ ನೀಡಿದ್ದಾರೆ’ ಎಂದು ರಾಚಯ್ಯ ಅವರ ಮಗ, ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಚಯ್ಯ ಅವರ ಪುತ್ಥಳಿ ನಿರ್ಮಾಣಕ್ಕೆ ಪ್ರತ್ಯೇಕ ಅನುದಾನದ ಅಗತ್ಯವಿದೆ. ಪುತ್ಥಳಿಯನ್ನು ನಗರದ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿ ಅಥವಾ ಸ್ಮಾರಕ ಭವನದಲ್ಲಿ ಸ್ಥಾಪಿಸುವುದರ ಬಗ್ಗೆ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಸಮಾಲೋಚನೆ ನಡೆಸಲಿವೆ’ ಎಂದರು.

‘ಸ್ಮಾರಕ ನಿರ್ಮಾಣಕ್ಕೆ ಕುಟುಂ ಬದಿಂದ ಜಾಗ ನೀಡಲಾಗಿದೆ. ಸರ್ಕಾರ ಈಗ ಬಿಡುಗಡೆ ಮಾಡಿರುವ ಅನುದಾನದಡಿ ಕಾಮಗಾರಿ ಪ್ರಾರಂಭಿಸಲಾಗುವುದು. ಬಳಿಕ, ಉಳಿದ ಹೆಚ್ಚುವರಿ ಅನುದಾನ ನೀಡುವಂತೆ ಸರ್ಕಾರಕ್ಕೆ ಜಿಲ್ಲಾಡಳಿತ ಪ್ರಸ್ತಾವೆ ಸಲ್ಲಿಸಲಿದೆ’ ಎಂದು ತಿಳಿಸಿದರು. ಸಣ್ಣ ನೀರಾವರಿ ಇಲಾಖೆಯಿಂದ ಸ್ಮಾರಕ ಭವನದ ಮುಂಭಾಗದ ಕೆರೆ ಅಭಿವೃದ್ಧಿಪಡಿಸಲು ಶಾಸಕ ಸಿ. ಪುಟ್ಟರಂಗಶೆಟ್ಟಿ ಆಸಕ್ತಿ ತೋರಿದ್ದಾರೆ ಎಂದು ಮಾಹಿತಿ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.