ADVERTISEMENT

ಕಣ್ಣೂರು ಶಾಲೆಗೆ ‘ಪರಿಸರ ಮಿತ್ರ’ ಪ್ರಶಸ್ತಿ

ಪರಿಸರ ಸಂರಕ್ಷಣೆ ಎಲ್ಲರ ಕರ್ತವ್ಯ: ಜಿ.ಪಂ. ಅಧ್ಯಕ್ಷ ಎಂ.ರಾಮಚಂದ್ರ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2017, 8:43 IST
Last Updated 2 ಮಾರ್ಚ್ 2017, 8:43 IST

ಚಾಮರಾಜನಗರ: ‘ಪರಿಸರ ಮಾಲಿನ್ಯ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಹೆಚ್ಚಿದೆ. ಶಾಲಾ ಹಂತದಲ್ಲಿಯೇ ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸ ಬೇಕಿದೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ರಾಮಚಂದ್ರ ಎಂದು ಸಲಹೆ ನೀಡಿದರು.

ನಗರದ ಜೆ.ಎಚ್. ಪಟೇಲ್‌ ಸಭಾಂ ಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನಿಂದ ನಡೆದ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪ್ರದಾನ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಪರಿಸರದ ಕಾಳಜಿ ಹಾಗೂ ಸ್ವಚ್ಛತಾ ಆಂದೋಲನದ ಬಗ್ಗೆ ತಿಳಿವಳಿಕೆ ಮೂಡಿದರೆ ಪರಿಸರ ಮಾಲಿನ್ಯ ಕಡಿಮೆಯಾಗಲಿದೆ. ಶಾಲೆಗಳ ಪರಿಸರದ ಅಭಿವೃದ್ಧಿಯಿಂದ ದೇಶವೂ ಅಭಿವೃದ್ಧಿ ಹೊಂದಲಿದೆ. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಬೇಕು. ಪರಿಸರ ಮಾಲಿನ್ಯ ತಡೆಗೆ ಮಾರ್ಗದರ್ಶನ ನೀಡಬೇಕು ಎಂದರು.

ಜಿಲ್ಲಾಧಿಕಾರಿ ಬಿ. ರಾಮು ಮಾತ ನಾಡಿ, ಪರಿಸರ ಸಂರಕ್ಷಣೆಗೆ ಹಣ ಖರ್ಚು ಮಾಡುವ ಅಗತ್ಯವಿಲ್ಲ. ಬದಲಿಗೆ ಶ್ರಮ ಮತ್ತು ಉತ್ತಮ ಮನಸ್ಸು ಬೇಕು. ಇದನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಸಾಲುಮರದ ತಿಮ್ಮಕ್ಕ ಅವರು ಗಿಡ ಗಳನ್ನು ತಮ್ಮ ಮಕ್ಕಳಂತೆ ಪ್ರೀತಿಸಿ ನೂರಾರು ಮರ ಬೆಳೆಸಿದ್ದಾರೆ. ಅವರು ಈ ದೇಶಕ್ಕೆ ಸ್ಫೂರ್ತಿಯಾಗಿದ್ದಾರೆ ಎಂದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿಯ ಜಿಲ್ಲಾ ಪರಿಸರ ಅಧಿಕಾರಿ ಬಿ.ಎಂ.ಪ್ರಕಾಶ್‌ ಮಾತನಾಡಿ, ಮಕ್ಕಳಿಗೆ ಪರಿಸರದ ಬಗ್ಗೆ ಮಾಹಿತಿ, ನೀರು, ಗಾಳಿ ರಕ್ಷಣೆಗೆ ತೆಗೆದುಕೊಂಡಿರುವ ಕ್ರಮಗಳು, ಶಕ್ತಿಯ ಬಳಕೆ, ತ್ಯಾಜ್ಯ ನಿರ್ವಹಣೆ ಸೇರಿ ದಂತೆ ನೈರ್ಮಲ್ಯ, ಆರೋಗ್ಯ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲೆಯ 101ಶಾಲೆಗಳಿಗೆ ಪ್ರಶ್ನಾವಳಿ ನೀಡ ಲಾಗಿತ್ತು ಎಂದು ತಿಳಿಸಿದರು.

ಈ ಪ್ರಶ್ನಾವಳಿಗೆ ಬಂದ ಉತ್ತರದ ಆಧಾರದಡಿ 30 ಶಾಲೆಗಳಿಗೆ ಪರಿಸರ ತಜ್ಞರ ತಂಡ ಭೇಟಿ ನೀಡಿತು. 10 ಹಸಿರು ಶಾಲೆ, 10 ಹಳದಿ ಶಾಲೆ ಹಾಗೂ ಒಂದು ಪರಿಸರ ಮಿತ್ರ ಶಾಲೆ ಎಂದು ಗುರುತಿಸಿದೆ. ಆ ಶಾಲೆಗಳಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸ ಲಾಗುತ್ತಿದೆ ಎಂದರು.

ತಾ.ಪಂ ಅಧ್ಯಕ್ಷ ಎಚ್.ವಿ. ಚಂದ್ರು, ಉಪಾಧ್ಯಕ್ಷ ಪಿ.ಎನ್. ದಯಾನಿಧಿ, ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕಿ ಮಂಜುಳಾ, ಪಿಯು ಶಿಕ್ಷಣ ಇಲಾಖೆಯ ಹೊಂಬಾಳಮ್ಮ ಹಾಜರಿದ್ದರು.

*
ಶಿಕ್ಷಕರು ಮಕ್ಕಳನ್ನು ಸೋಮಾರಿಗಳಾಗಿ ಮಾಡದೆ ಅವರು ಸ್ವಯಂ ಪರಿಸರ ಸಂರಕ್ಷಣೆಗೆ ಮುಂದಾಗುವಂತೆ ಪ್ರೇರೇಪಿಸಬೇಕು.
-ಬಿ.ರಾಮು,
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT