ADVERTISEMENT

ಕುಗ್ಗಿದ ಉತ್ಪಾದನೆ; ತರಕಾರಿ ದರ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 5:58 IST
Last Updated 7 ನವೆಂಬರ್ 2017, 5:58 IST
ಚಾಮರಾಜನಗರದ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರ ನಿರತ ಗ್ರಾಹಕರು
ಚಾಮರಾಜನಗರದ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರ ನಿರತ ಗ್ರಾಹಕರು   

ಚಾಮರಾಜನಗರ: ಮಳೆಯ ಆಟ ರೈತ ಮತ್ತು ಗ್ರಾಹಕ ಇಬ್ಬರನ್ನೂ ಕಂಗಾಲಾಗಿಸಿದೆ. ಎರಡು ತಿಂಗಳಿನಿಂದ ಬೀಳುತ್ತಿರುವ ಮಳೆ ಚಾಮರಾಜನಗರ ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ ಅಪಾರ ತರಕಾರಿ ಬೆಳೆ ನಾಶಕ್ಕೆ ಕಾರಣವಾಗಿದೆ. ಇದರಿಂದ ತರಕಾರಿಗಳು ಗ್ರಾಹಕರ ಪಾಲಿಗೆ ಬಿಸಿತುಪ್ಪದಂತಾಗಿವೆ.

ಜಿಲ್ಲಾ ಕೇಂದ್ರಕ್ಕೆ ಆವಕವಾಗುತ್ತಿದ್ದ ತರಕಾರಿ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ. ಇದು ಬೇಡಿಕೆ ಹೆಚ್ಚುವ ಕಾಲ. ಸಾಲು ಸಾಲು ಮದುವೆ ಸಮಾರಂಭಗಳು, ವಿಶೇಷ ದಿನಗಳ ಆಚರಣೆಗಳು ನಡೆಯುತ್ತಿವೆ. ಹೀಗಾಗಿ, ಮಾರುಕಟ್ಟೆಗೆ ಎಷ್ಟು ತರಕಾರಿ ಪೂರೈಕೆಯಾದರೂ ಸಾಲದೆಂಬಂತಾ ಗಿದೆ. ಆದರೆ, ಅಗತ್ಯಕ್ಕೆ ಅನುಗುಣವಾಗಿ ಉತ್ಪಾದನೆ ಸಾಧ್ಯವಾಗುತ್ತಿಲ್ಲ.

ಮಳೆ ಪರಿಣಾಮ: ಕೆಲ ತಿಂಗಳ ಹಿಂದೆ ಟೊಮೆಟೊ ದರ ಗಗನಕ್ಕೇರಿದಾಗ ಜಿಲ್ಲೆ ಹಾಗೂ ಸುತ್ತಮುತ್ತಲಿನ ರೈತರು ಏಕಾಏಕಿ ಟೊಮೆಟೊ ಬೆಳೆಯತ್ತ ಮುಖ ಮಾಡಿದ್ದರು. ಇದರಿಂದ ದಿಢೀರನೆ ಬೆಲೆ ಕುಸಿತವಾಗಿತ್ತು. ಬಳಿಕ ಮಳೆ ಹೆಚ್ಚಾಗಿ ಅನೇಕ ಕಡೆ ಬೆಳೆ ನೆಲಕಚ್ಚಿದೆ. ಟೊಮೆಟೊ ಮಾತ್ರವಲ್ಲದೆ ಕೋಸು, ಬದನೆ, ಮೆಣಸು, ಸೌತೆಕಾಯಿ ಮುಂತಾದ ಮುಖ್ಯ ಬೆಳೆಗಳೂ ವರುಣನ ಅಬ್ಬರಕ್ಕೆ ತತ್ತರಿಸಿವೆ. ಇದರ ಪರಿಣಾಮ ಪೂರೈಕೆ ಮೇಲಾಗಿದೆ.

ADVERTISEMENT

‘ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಪುದುಚೆರಿಗಳಲ್ಲಿ ಮದುವೆ, ಮುಂಜಿ ಸಮಾರಂಭಗಳು ನಿರಂತರವಾಗಿ ನಡೆಯಲಿವೆ. ಎಲ್ಲೆಡೆ ತರಕಾರಿಗೆ ಭರ್ಜರಿ ಬೇಡಿಕೆ ಸೃಷ್ಟಿಯಾಗಿದೆ. ಗೆಡ್ಡೆಕೋಸು, ದಪ್ಪ ಮೆಣಸು, ಬೀಟ್‌ರೂಟ್‌, ಎಲೆಕೋಸುಗಳು ಸಮಾರಂಭಗಳಿಗೆ ಬೇಕೇಬೇಕು’ ಎನ್ನುತ್ತಾರೆ ನಗರದ ತರಕಾರಿ ವ್ಯಾಪಾರಿ ಕುಮಾರ್‌.

‘ಈ ಅವಧಿಯಲ್ಲಿ ಉತ್ಪಾದನೆ ಪ್ರಮಾಣ ಕೂಡ ಕಡಿಮೆ ಇರುತ್ತದೆ. ಚಳಿ ಕಡಿಮೆಯಾದ ಬಳಿಕ ಮತ್ತೆ ಉತ್ಪಾದನೆ ಹೆಚ್ಚುತ್ತದೆ. ಅಲ್ಲಿಯವರೆಗೂ ಬಹುತೇಕ ತರಕಾರಿಗಳ ಧಾರಣೆ ಇಳಿಯುವುದು ಕಷ್ಟ’ಎಂದು ಅವರು ವಿವರಿಸುತ್ತಾರೆ.

‘ದಿನಸಿ ಪದಾರ್ಥಗಳ ಬೆಲೆ ತುಟ್ಟಿಯಾಗಿದೆ. ಬರುವ ಆದಾಯದಲ್ಲಿ ದಿನನಿತ್ಯದ ಅಗತ್ಯಗಳನ್ನು ಪೂರೈಸಿ ಕೊಳ್ಳುವುದೇ ಕಷ್ಟವಾಗಿದೆ. ಹೀಗಿರುವಾಗ ತರಕಾರಿ ಬೆಲೆ ಏರುತ್ತಿರುವುದರಿಂದ ಇನ್ನಷ್ಟು ತೊಂದ ರೆಯಾಗುತ್ತಿದೆ’ ಎಂದು ಗ್ರಾಹಕರೊಬ್ಬರು ನೋವು ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.