ADVERTISEMENT

ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಿ

ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಆಗ್ರಹ; ಜಿಲ್ಲಾಡಳಿತ ಕಚೇರಿ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2018, 9:36 IST
Last Updated 24 ಮಾರ್ಚ್ 2018, 9:36 IST

ಚಾಮರಾಜನಗರ:  ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಹಾಗೂ ಡಾ.ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ನಗರದಲ್ಲಿ ಶುಕ್ರವಾರ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಜಿಲ್ಲಾಡಳಿತ ಭವನದ ಮುಂಭಾಗದ ಗೇಟ್‍ ಬಳಿ ಸಮಾವೇಶಗೊಂಡ ಪ್ರತಿಭಟನಾಕಾರರು ಅಲ್ಲಿಂದ ಜಿಲ್ಲಾಡಳಿತ ಭವನದ ಮುಂಭಾಗಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಿದರು.

ಸಂಘದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಹಳ್ಳಿಕೆರೆ ಹುಂಡಿಭಾಗ್ಯರಾಜ್ ಮಾತನಾಡಿ, ‘ದೇಶದಲ್ಲಿ ಕೃಷಿ ಕ್ಷೇತ್ರವು ಸಾಕಷ್ಟು ನಷ್ಟದಿಂದ ಕೂಡಿದ್ದು, ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ದೊರೆಯುತ್ತಿಲ್ಲ. ತೀವ್ರ ಬರಗಾಲದಲ್ಲಿ ಮಾರಾಟದ ವ್ಯವಸ್ಥೆಗೆ ಆಧುನಿಕತೆ ಕಲ್ಪಿಸಿಲ್ಲ. ಕೃಷಿ ಕ್ಷೇತ್ರ ನಷ್ಟ ಉಂಟು ಮಾಡುತ್ತಿದ್ದು, ರೈತರು ಸಾಲ ತೀರಿಸಲಾಗದೆ ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ’ ಎಂದು ದೂರಿದರು.

ADVERTISEMENT

ಕೇಂದ್ರ ಸರ್ಕಾರ 3 ವರ್ಷಗಳಲ್ಲಿ 100 ಕಂಪೆನಿಗಳ ₹ 1.44 ಲಕ್ಷ ಕೋಟಿ ಸಾಲಮನ್ನಾ ಮಾಡಿದೆ. ಕಳೆದ ವರ್ಷ ಕಾರ್ಪೋರೇಟ್ ಕಂಪೆನಿಗಳು ಪಡೆದಿದ್ದ ಸಾಲವನ್ನು ಎನ್‍ಪಿಎ ಎಂದು ಘೋಷಿಸಿ ₹ 6 ಲಕ್ಷ ಕೋಟಿ ರಿಯಾಯಿತಿ ನೀಡಿದೆ. ಆದರೆ, ಸಂಕಷ್ಟದಲ್ಲಿರುವ ರೈತರ ಬ್ಯಾಂಕ್ ಸಾಲ ಮನ್ನಾ ಮಾಡುವಲ್ಲಿ ಮೀನಾಮೇಷ ಎಣಿಸಲಾಗುತ್ತಿದೆ ಎಂದು ದೂರಿದರು.

ಬ್ಯಾಂಕ್‍ನ ಅಧಿಕಾರಿಗಳು ರೈತರಿಗೆ ನೋಟೀಸ್ ನೀಡುವ ಜತೆಗೆ, ಅವರ ಮೇಲೆ ಪ್ರಕರಣ ಹೂಡಿ ನ್ಯಾಯಾಲಯಕ್ಕೆ ಕಳುಹಿಸುವ ಮೂಲಕ ರೈತರ ನೆಮ್ಮದಿ ಹಾಳು ಮಾಡಿದ್ದಾರೆ. ಜತೆಗೆ, ರೈತರು ಬ್ಯಾಂಕ್‍ಗೆ ಸೂಕ್ತ ದಾಖಲೆ ನೀಡಿದರು ಕೂಡ ಅಡಮಾನಕ್ಕೆ ತಕ್ಕಂತೆ ಸರಿಸಮಾನಾಗಿ ಸಾಲ ನೀಡುತ್ತಿಲ್ಲ ಎಂದು ಆರೋಪಿಸಿದರು.

ವಿಜಯಮಲ್ಯ, ಲಲಿತ್‍ಮೋದಿಗೆ ಬ್ಯಾಂಕ್‍ಗಳು ಯಾವುದೇ ಮಾನದಂಡ ಇಲ್ಲದೆ ಸಾವಿರಾರು ಕೋಟಿ ಸಾಲ ನೀಡಿವೆ. ಅವರು ಬ್ಯಾಂಕ್ ಹಣ ಲೂಟಿ ಮಾಡಿದ್ದಾರೆ. ಅವರ ಮೇಲೆ ಯಾವುದೇ ಕಾನೂನು ಕ್ರಮ ನಡೆದಿಲ್ಲ. ಆದರೆ, ಕೇವಲ ₹ 20,000ದಿಂದ ₹ 1 ಲಕ್ಷದವರಿಗೆ ಸಾಲ ಪಡೆದಿರುವ ರೈತರ ಮೇಲೆ ದಾವೆ ಹೂಡುವುದು ಸರಿಯಲ್ಲ ಎಂದ ಅವರು, ಅಣ್ಣಾಹಜಾರೆ ಅವರ ಹೋರಾಟ ಬೆಂಬಲಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಪ್ರತಿಭಟನೆಯಲ್ಲಿ ಮುಖಂಡರಾದ ಮೂಕಳ್ಳಿ ಮಹದೇವಸ್ವಾಮಿ, ಪಟೇಲ್‍ ಶಿವಮೂರ್ತಿ, ಚೌಡಹಳ್ಳಿ ನಾಗರಾಜು, ಲಿಂಗನಪುರ ಪುಟ್ಟಸ್ವಾಮಿ, ಗಂಗಾಧರಪ್ಪ, ಚಂದ್ರಶೇಖರ್, ಬಸವಣ್ಣ, ನಾಗರಾಜು, ಸಿದ್ದರಾಜು, ಶಿವಶಂಕರ್‌, ನಾಗೇಂದ್ರ, ಸಿದ್ದರಾಜು, ಬಹುಜನ ವಿದ್ಯಾರ್ಥಿ ಸಂಘದ ಜಿಲ್ಲಾ ಸಂಯೋಜಕ ಪರ್ವತ್‍ರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.