ADVERTISEMENT

ಚಿಕ್ಕಲ್ಲೂರು: ಸಾಮರಸ್ಯ ಬೆಸೆವ, ಪಾರಂಪರಿಕ ಜಾತ್ರೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2017, 9:58 IST
Last Updated 11 ಜನವರಿ 2017, 9:58 IST

ಹನೂರು:  ಪಂಕ್ತಿಸೇವೆಗೆ ಅವಕಾಶ ಕೋರಿ ನಡೆದ ಪ್ರತಿಭಟನೆ, ಪಾದಯಾತ್ರೆ ಕಾರಣಕ್ಕೆ  ಹೆಚ್ಚು ಚರ್ಚೆಗೆ ಗ್ರಾಸವಾದ ಚಿಕ್ಕಲ್ಲೂರು ಜಾತ್ರೆ ವಿವಿಧ ಸಮುದಾಯಗಳ ನಡುವೆ ಸಾಮರಸ್ಯ ಬೆಸೆಯುವ ಜಾತ್ರೆಯಾಗಿ ಈ ಭಾಗದಲ್ಲಿ ಹೆಸರಾಗಿದೆ.

ಈ ವರ್ಷ ಜನವರಿ 12 ರಿಂದ ಐದು ದಿನ ಕಾಲ ನಡೆಯುವ ನಡೆಯುವ ಈ ಜಾತ್ರೆ ಮಂಟೇಸ್ವಾಮಿ ಪರಂಪರೆಯ ಮುಖ್ಯ ಕ್ಷೇತ್ರಗಳಲ್ಲಿ ಒಂದಾಗಿರುವ ಚಿಕ್ಕಲ್ಲೂರುನಲ್ಲಿ ನಡೆಯಲಿದೆ.

ಸಾಂಸ್ಕೃತಿಕ ಹಿನ್ನಲೆಯ ಚಿಕ್ಕಲ್ಲೂರು ಜಾತ್ರೆ ಈ ಭಾಗದ ಅತ್ಯಂತ ವೈಭವದ ಜಾತ್ರೆ. ಐದು ದಿನ ಸಡಗರ, ಸಂಭ್ರಮದಿಂದ ನಡೆಯುವ  ಜಾತ್ರೆಯಲ್ಲಿ ಪ್ರತಿದಿನ ವಿಶೇಷ ಉತ್ಸವ ಜರುಗಲಿದೆ.

ಹುಣ್ಣಿಮೆ ದಿನ ಜಾತ್ರೆಗೆ ಚಾಲನೆ ನೀಡಲಾಗುತ್ತದೆ. ಮೊದಲದಿನ ಚಂದ್ರಮಂಡಲೋತ್ಸವ, 2ನೇ ದಿನ ದೊಡ್ಡವರ ಸೇವೆ, 3ನೇ ದಿನ ಮುಡಿಸೇವೆ, 4ನೇ ದಿನ ಪಂಕ್ತಿಸೇವೆ ಅಥವಾ ಸಿದ್ಧರಸೇವೆ, ಕಡೆಯ ದಿನ ಮುತ್ತತ್ತರಾಯನ ಸೇವೆ ನಡೆಯುತ್ತದೆ.

ಹಿನ್ನೆಲೆ: ಹಲಗೂರು ಕಬ್ಬಿಣ ಭಿಕ್ಷೆಯ ನಂತರ ಕಾವೇರಿ ನದಿ ದಾಟಿ ಬರುವ ಸಿದ್ದಪ್ಪಾಜಿ ಸುತ್ತಲಿನ ಏಳು ಊರಿನ ಜನರನ್ನು ತನ್ನ ಒಕ್ಕಲಿಗ ರನ್ನಾಗಿ ಪಡೆಯುತ್ತಾರೆ. ಇದರ ಸಂಕೇತವಾಗಿ ಏಳು ಗ್ರಾಮಗಳ ಜನರು ಒಗ್ಗೂಡಿ ಈ  ಜಾತ್ರೆ ಆಚರಿಸುತ್ತಾರೆ.

ಮೊದಲ ದಿನ ನಡೆಯುವ ಚಂದ್ರಮಂಡಲ ಬೆಳಕಿನ ಆಚರಣೆ. ಕತ್ತಲ ರಾಜ್ಯದಲ್ಲಿ ಪರಂಜ್ಯೋತಿಯಾಗಿ ಬೆಳಗಿದ ಹಿನ್ನಲೆ ಇದೆ.  ಎರಡನೇ ದಿನದ ದೊಡ್ಡವರ ಸೇವೆ. ಇದನ್ನು ‘ಧರೆಗೆ ದೊಡ್ಡವರ  ಸೇವೆ’ ಎಂದೂ ಕರೆಯಲಾಗುತ್ತದೆ. ಮಂಟೇಸ್ವಾಮಿ, ರಾಚಪ್ಪಾಜಿ ಹಾಗೂ ದೊಡ್ಡಮ್ಮತಾಯಿ ಅವರಿಗೆ ಸಲ್ಲಿಸುವ ಸೇವೆ ಇದು.

ಮೂರನೆ ದಿನ ಮುಡಿಸೇವೆ ದಿನ. ಕೌಟುಂಬಿಕ ಸಮಸ್ಯೆ ನಿವಾರಣೆಗೆ ನೀಲಗಾರನನ್ನಾಗಿ (ಗುಡ್ಡರ ಬಿಡುವುದು) ಮಾಡುತ್ತೇನೆ ಎಂದು ಹರಕೆ ಹೊತ್ತ ಭಕ್ತರು ಮುಡಿಸೇವೆ ದಿನ ಹರಕೆ ಸಲ್ಲಿಸುತ್ತಾರೆ. ಎಲ್ಲ ಸಮುದಾಯಗಳು ಹರಕೆ ಹೊತ್ತು  ನೆರವೇರಿಸುವುದು ಮತ್ತೊಂದು ವಿಶೇಷ.

ನಾಲ್ಕನೇ ದಿನ ಪಂಕ್ತಿಸೇವೆ. ಇದು ಮಂಟೇಸ್ವಾಮಿ ಪರಂಪರೆಯ, ನೀಲಗಾರ ಪಂಥದ ಹಾಗೂ ಜಾತ್ರೆಯ ಬಹುದೊಡ್ಡ ಆಶಯದ ಪ್ರತೀಕ. ಜಾತ್ಯಾತೀತ ಪರಂಪರೆ ಇಲ್ಲಿ ಅಭಿವ್ಯಕ್ತಿಗೊಳ್ಳಲಿದೆ ಎಂದು ವ್ಯಾಖ್ಯಾನಿಸಲಾಗುತ್ತದೆ.

ಹರಕೆ ಹೊತ್ತ ಭಕ್ತ ತಾನು ಸಿದ್ಧಪಡಿಸಿದ ಸಸ್ಯಾಹಾರ ಅಥವಾ ಮಾಂಸಾಹಾರವನ್ನು ತನ್ನ ಬಿಡದಿಗೆ ಬಂದವರಿಗೆ ನೀಡುತ್ತಾನೆ. ಯಾವುದೇ ಭೇದ–ಭಾವವವಿಲ್ಲದೆ ಸಕಲೆಂಟು ಜಾತಿಗಳನ್ನು ಒಂದುಗೂಡಿಸುವುದೇ ಈ ಸಹಪಂಕ್ತಿ ಭೋಜನದ ಉದ್ದೇಶ.

ಐದನೇ ದಿನ ನಡೆಯುವ ಮುತ್ತತ್ತಿರಾಯನ ಸೇವೆ ವೈಷ್ಣವ ಪಂಥದ ಪ್ರತೀಕ. ಸಿದ್ದಪ್ಪಾಜಿ ನೀಲಗಾರರು ಒಂದು ದಿನದ ಮಟ್ಟಿಗೆ ತಮ್ಮ ಇಷ್ಟಾರ್ಥ ದೇವರಿಗೆ ಮಾಂಸಹಾರದ ಎಡೆ ಹಾಕಿ ಮುತ್ತತ್ತಿರಾಯನ ಸೇವೆ ಮಾಡುತ್ತಾರೆ. ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರುವ ಚಿಕ್ಕಲ್ಲೂರು ಜಾತ್ರೆ  ರಾಜ್ಯದ ಉದ್ದಗಲಕ್ಕೂ ಹರಡಿದೆ.
- ಬಿ. ಬಸವರಾಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.