ADVERTISEMENT

ಚೆಕ್‍ಪೋಸ್ಟ್‌ಗಳಲ್ಲಿ ನಿಗಾವಹಿಸಿ

ಅಂತರರಾಜ್ಯ ಅಧಿಕಾರಿಗಳ ಸಭೆಯಲ್ಲಿ ಡಿ.ಸಿ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 9:13 IST
Last Updated 26 ಏಪ್ರಿಲ್ 2018, 9:13 IST

ಚಾಮರಾಜನಗರ: ‘ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಂತರರಾಜ್ಯ ಚೆಕ್‍ಪೋಸ್ಟ್‌ಗಳಲ್ಲಿ ಚುನಾವಣಾ ಅಕ್ರಮಗಳನ್ನು ತಡೆಯಲು ಕಟ್ಟುನಿಟ್ಟಿನ ನಿಗಾ ವಹಿಸಬೇಕು’ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ.ಕಾವೇರಿ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲೆಯ ಗಡಿಭಾಗದಲ್ಲಿರುವ ಅಂತರರಾಜ್ಯಗಳ ಜಿಲ್ಲಾ ಪೊಲೀಸ್, ಅಬಕಾರಿ ಮತ್ತು ತಹಶೀಲ್ದಾರ್ ಅವರುಗಳನ್ನೊಳಗೊಂಡ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮೇ 12ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಜಿಲ್ಲೆಯ ಗಡಿಭಾಗದಲ್ಲಿ 11 ಕಡೆ ಅಂತರರಾಜ್ಯ ಚೆಕ್‍ಪೋಸ್ಟ್‌ಗಳನ್ನು ತೆರೆಯಲಾಗಿದ್ದು, ಈ ಚೆಕ್‍ಪೋಸ್ಟ್‌ಗಳು ತಮಿಳುನಾಡು ಹಾಗೂ ಕೇರಳ ರಾಜ್ಯದ ವಿವಿಧ ಜಿಲ್ಲೆಗಳೊಂದಿಗೆ ಸಂಪರ್ಕ ಹೊಂದಿವೆ. ಇವುಗಳಲ್ಲಿ ಚುನಾವಣಾ ಅಪರಾಧ ಹಾಗೂ ಅಕ್ರಮಗಳ ಬಗ್ಗೆ ದಾಖಲಾಗುವ ದೂರುಗಳ ಬಗ್ಗೆ ಕ್ರಮವಹಿಸಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಅಂತರರಾಜ್ಯದ ಜಿಲ್ಲೆಗಳ ಅಧಿಕಾರಿಗಳು ಸಹಕಾರ ನೀಡಬೇಕು ಎಂದರು.

ADVERTISEMENT

ಪುಣಜನೂರು, ಚಿಕ್ಕಹೊಳೆ, ಬಿಸಲವಾಡಿ, ಬಂದಿಗೌಡನಹಳ್ಳಿ, ಅರ್ಧನಾರೀಪುರ, ಹೊಗೆನಕಲ್, ಪಾಲಾರ್, ಬಂಡೀಪುರ, ಮದ್ದೂರು, ಕೆಕ್ಕನಹಳ್ಳ ಹಾಗೂ ವೈನಾಡು ಬಳಿ ತೆರೆಯಲಾಗಿರುವ ಚೆಕ್‍ಪೋಸ್ಟ್‌ಗಳಲ್ಲಿ ರಚಿಸಲಾಗಿರುವ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಹಾಗೂ ಸೆಕ್ಟರ್ ಅಧಿಕಾರಿಗಳ ಜತೆ ಅತ್ಯಂತ ಜಾಗರೂಕತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಮತದಾನ ಸಂದರ್ಭದಲ್ಲಿ ಗಡಿಭಾಗದಲ್ಲಿ ವಿಶೇಷ ಗಮನಹರಿಸಬೇಕು. ಅಂತರ ರಾಜ್ಯಗಳಲ್ಲಿ ವ್ಯಾಪಾರ, ವಹಿವಾಟು ನಡೆಸುವವರು ಹಾಗೂ ಆಮಿಷ, ಕೊಡುಗೆಯಾಗಿ ನೀಡಬಹುದಾದ ವಸ್ತುಗಳ ಸರಬರಾಜು ವಹಿವಾಟಿನ ಮೇಲೆ ತೀವ್ರ ನಿಗಾ ಇಟ್ಟಿರಬೇಕು. ಯಾವುದೇ ಅಕ್ರಮಕ್ಕೆ ಅವಕಾಶವಾಗುವುದು ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು. ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಸಹಕರಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಮಾತನಾಡಿ, ‘ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಸರಿ ಸಲು ಅಂತರರಾಜ್ಯ ಚೆಕ್‍ಪೋಸ್ಟ್‌ಗಳನ್ನು ತೆರೆಯಲಾಗಿದೆ. ಅಕ್ರಮ ಹಣ, ಮದ್ಯ ಸಾಗಣೆ ಹಾಗೂ ಇನ್ನಿತರೆ ಅಪರಾಧ ಚಟುವಟಿಕೆ ತಡೆಯಲು ತಪಾಸಣೆ ಕಾರ್ಯ ಕೈಗೊಳ್ಳಲಾಗಿದೆ. ದಾಖಲೆ ಇಲ್ಲದೆ ₹ 50,000ಕ್ಕಿಂತ ಹೆಚ್ಚಿನ ಹಣ ಸಾಗಿಸುವಂತಿಲ್ಲ. ಈ ಬಗ್ಗೆ ತಿಳಿವಳಿಕೆ ನೀಡುವ ನಾಮಫಲಕಗಳನ್ನು ಪ್ರದರ್ಶಿಸಬೇಕು’ ಎಂದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ, ಜಂಟಿ ಕೃಷಿ ನಿರ್ದೇಶಕರು ಹಾಗೂ ಮಾದರಿ ನೀತಿ ಸಂಹಿತೆ ನೋಡೆಲ್ ಅಧಿಕಾರಿ ತಿರುಮಲೇಶ್, ಪೊಲೀಸ್, ಅಬಕಾರಿ ಇಲಾಖೆ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.