ADVERTISEMENT

ಚೆಕ್‌ ಪೋಸ್ಟ್‌ನಲ್ಲಿ ಬಿಗಿ ಭದ್ರತೆ

ಚುನಾವಣೆ: ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ಕ್ರಮ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2018, 6:58 IST
Last Updated 10 ಏಪ್ರಿಲ್ 2018, 6:58 IST

ಮೂಡಿಗೆರೆ: ಚುನಾವಣೆಯ ನಿಮಿತ್ತ ತಾಲ್ಲೂಕಿನ ವಿವಿಧೆಡೆ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದ್ದು, ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಕ್ಷೇತ್ರ ಚುನಾವಣಾಧಿಕಾರಿಯಾದ ಕಂದಾಯ ಇಲಾಖೆ ಉಪ ವಿಭಾಗಾ ಧಿಕಾರಿ ಅಮರೇಶ್‌ ನೇತೃತ್ವದಲ್ಲಿ ತಾಲ್ಲೂಕಿನ ಕಿರುಗುಂದ, ಕಸ್ಕೇ ಬೈಲ್‌, ಕೊಟ್ಟಿಗೆಹಾರಗಳಲ್ಲಿ ಚೆಕ್‌ಪೋಸ್ಟ್‌ ಗಳನ್ನು ತೆರೆಯಲಾಗಿದ್ದು, ಎಲ್ಲ ಚೆಕ್‌ಪೋಸ್ಟ್‌ಗಳಲ್ಲೂ ದಿನದ 24 ಗಂಟೆ ವಾಹನಗಳ ತಪಾಸಣೆ ನಡೆಸಲಾಗುತ್ತದೆ.

ಸಕಲೇಶಪುರ ಮಾರ್ಗದಿಂದ ತಾಲ್ಲೂಕನ್ನು ಪ್ರವೇಶಿಸುವ ವಾಹನಗಳನ್ನು ಕಿರುಗುಂದ ಚೆಕ್‌ಪೋಸ್ಟ್‌ನಲ್ಲಿ, ಬೇಲೂರಿನಿಂದ ಪ್ರವೇಶಿಸುವ ವಾಹನಗಳನ್ನು ಕಸ್ಕೇಬೈಲ್‌ನಲ್ಲೂ ಹಾಗೂ ಕರಾವಳಿ ಭಾಗದಿಂದ ಪ್ರವೇಶಿಸುವ ವಾಹನಗಳನ್ನು ಕೊಟ್ಟಿಗೆಹಾರದಲ್ಲಿ ತಪಾಸಣೆ ನಡೆಸಲಾಗುತ್ತಿದೆ.

ADVERTISEMENT

ಚೆಕ್‌ಪೋಸ್ಟಿನಲ್ಲಿ ಮೂರು ಪಾಳಿಯಲ್ಲಿ ಚುನಾವಣಾ ಸಿಬ್ಬಂದಿ ಕಾರ್ಯನಿರ್ಹಿಸುತ್ತಿದ್ದು, ಒಂದು ಪಾಳಿಯಲ್ಲಿ ಚೆಕ್‌ಪೋಸ್ಟ್‌ ಅಧಿಕಾರಿ, ಸಹಾಯಕ ಅಧಿಕಾರಿ, ಅಟೆಂಡರ್‌, ವಿಡಿಯೊಗ್ರಾಫರ್‌ ಹಾಗೂ ಇಬ್ಬರು ಪೊಲೀಸರು ಸೇರಿ ಆರು ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಿಡಿಯೊ, ಸಿ.ಸಿ.ಕ್ಯಾಮೆರಾ ಕಣ್ಗಾವಲು: ವಾಹನಗಳಲ್ಲಿ ದಾಖಲೆಯಿಲ್ಲದೇ ₹ 50 ಸಾವಿರಕ್ಕೂ ಮೇಲ್ಪಟ್ಟ ಹಣ, ಮತದಾರರಿಗೆ ಹಂಚ ಬಹುದಾದ ದಾಖಲೆಯಿಲ್ಲದ ವಸ್ತುಗಳನ್ನು ಸಾಗಿಸುವಂತಿಲ್ಲ. ಇಂತಹ ವಸ್ತುಗಳನ್ನು ಸಾಗಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶವಿದ್ದು, ಪ್ರತಿ ವಾಹನವನ್ನೂ ವಿಡಿಯೊ ಮಾಡಿಕೊಳ್ಳುವ ಮೂಲಕ ತಪಾಸಣೆ ಮಾಡಲಾಗುತ್ತದೆ.

ಎಲ್ಲ ಚೆಕ್‌ ಪೋಸ್ಟ್‌ಗಳಲ್ಲೂ ಸಿ.ಸಿ. ಕ್ಯಾಮರಗಳನ್ನು ಅಳವಡಿಸಲಾಗಿದ್ದು, ತಾಲ್ಲೂಕಿಗೆ ಪ್ರವೇಶಿಸುವ ಹಾಗೂ ತಾಲ್ಲೂಕಿನಿಂದ ನಿರ್ಗಮಿಸುವ ವಾಹನ ಗಳ ಮಾಹಿತಿ ಪಡೆಯಲಾಗುತ್ತಿದೆ.

₹5.50 ಲಕ್ಷ ವಶ

ಮೂಡಿಗೆರೆ: ಮೂಡಿಗೆರೆ ತಾಲ್ಲೂಕಿನ ಕಿರುಗುಂದ ಚೆಕ್‌ ಪೋಸ್ಟ್‌ನಲ್ಲಿ ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹5.50 ಲಕ್ಷವನ್ನು ವಶಪಡಿಸಿಕೊಳ್ಳಲಾಗಿದೆ.ಮಂಗಳೂರು ಮೂಲದ ದಂಪತಿ ಭಾನುವಾರ ಮುಂಜಾನೆ ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದು, ಕಿರುಗುಂದ ಚೆಕ್‌ಪೋಸ್ಟಿನಲ್ಲಿ ತಪಾಸಣೆ ನಡೆಸಿದಾಗ, ಕಾರಿನಲ್ಲಿ ₹ 5.50 ಲಕ್ಷ ಪತ್ತೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.