ADVERTISEMENT

ತಂಪುಪಾನೀಯಕ್ಕೆ ಮೊರೆ ಹೋದ ನಾಗರಿಕರು

ಹೆಚ್ಚುತ್ತಿರುವ ಬಿಸಿಲಿನ ಝಳ: ಮಾರುಕಟ್ಟೆಗೆ ಕಲ್ಲಂಗಡಿ, ಕರಬೂಜ ಹಣ್ಣು ಲಗ್ಗೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2017, 10:32 IST
Last Updated 6 ಮಾರ್ಚ್ 2017, 10:32 IST
ಚಾಮರಾಜನಗರ: ಬಿಸಿಲಿನ ಝಳ ಹೆಚ್ಚಿದೆ. ಜನರು ಮನೆಯಿಂದ ಹೊರ ಬರಲು ಭಯಪಡುವಂತಾಗಿದೆ. ಮಕ್ಕಳು, ಮಹಿಳೆಯರು ಮತ್ತು ವೃದ್ಧರ ಪಾಡುಹೇಳತೀರದು. 
 
ಜಿಲ್ಲಾ ಕೇಂದ್ರದಲ್ಲಿ ಬೆರಳೆಣಿಕೆಯಷ್ಟು ಉದ್ಯಾನಗಳಿವೆ. ಇವುಗಳು ನಿರ್ವಹಣೆ ಇಲ್ಲದೆ ಸೊರಗಿವೆ. ಹಾಗಾಗಿ, ಜನರು ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಪರದಾಡುವಂತಾಗಿದೆ.
 
ನಗರಸಭೆ ವ್ಯಾಪ್ತಿ ಜನರು ದಾಹ ತೀರಿಸಿಕೊಳ್ಳಲು ತಂಪುಪಾನೀಯಗಳ ಮೊರೆ ಹೋಗಿದ್ದಾರೆ. ಎಳನೀರು, ಕರ ಬೂಜ, ಕಲ್ಲಂಗಡಿ ಹಣ್ಣು ಸೇವಿಸುವುದು ಅನಿವಾರ್ಯವಾಗಿದೆ. 
 
ಜಿಲ್ಲೆಯಲ್ಲಿ ಮಳೆ ಕೊರತೆ ಪರಿಣಾಮ ತೆಂಗಿನಮರಗಳು ಒಣಗಿಹೋಗುತ್ತಿವೆ. ಇದರಿಂದ ಬೆಳೆಗಾರರು ದಿಕ್ಕೆಟ್ಟಿದ್ದಾರೆ. ನೀರಾವರಿ ಪ್ರದೇಶಗಳಲ್ಲಿರುವ ತೆಂಗಿನ ಮರಗಳಿಂದ ಮಾತ್ರವೇ ಸದ್ಯಕ್ಕೆ ಎಳ ನೀರು ದೊರೆಯುತ್ತದೆ. ಜತೆಗೆ, ನದಿ ಮೂಲದಿಂದ ನೀರು ಭರ್ತಿಯಾಗಿರುವ ಕೆರೆಗಳ ಅಚ್ಚುಕಟ್ಟು ಪ್ರದೇಶದಲ್ಲಿರುವ ಹೊಲ, ತೋಟಗಳಲ್ಲಿರುವ ತೆಂಗಿನ ಮರಗಳಿಂದ ಎಳನೀರು ಲಭಿಸುತ್ತದೆ.
 
ಪ್ರಸ್ತುತ 1 ಎಳನೀರಿಗೆ ಮಾರುಕಟ್ಟೆ ಯಲ್ಲಿ ₹ 25 ಬೆಲೆ ಇದೆ. ಬಿಸಿಲನ ಝಳ ಹೀಗೆಯೇ ಮುಂದುವರಿದರೆ ಎಳನೀರಿನ ಧಾರಣೆ ಮತ್ತಷ್ಟು ಹೆಚ್ಚಳವಾದರೂ ಅಚ್ಚರಿಪಡಿಸಬೇಕಿಲ್ಲ. ಆದರೆ, ದಾಹ ತಣಿಸಿಕೊಳ್ಳಲು ಜನರು ಎಳನೀರಿಗೆ ಮೊರೆಹೋಗಿದ್ದಾರೆ.
 
ಇನ್ನೊಂದೆಡೆ ಜನರ ದಾಹ ತಣಿಸಲು ಕಲ್ಲಂಗಡಿ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಷುಗರ್‌ ಕ್ವೀನ್‌ ಕಲ್ಲಂಗಡಿ ಹಣ್ಣಿನ ಕಾರುಬಾರು ಹೆಚ್ಚಿದೆ. ಈ ತಳಿಯ ಹಣ್ಣು ಮಾರುಕಟ್ಟೆಗೆ ಬಂದ ನಂತರ ನಾಮಧಾರಿ ಕಲ್ಲಂಗಡಿ ತಳಿಯು ಪೂರೈಕೆ ಯಾಗುತ್ತಿಲ್ಲ ಎನ್ನುವುದು ವ್ಯಾಪಾರಿಗಳ ಹೇಳಿಕೆ.
ಜಿಲ್ಲೆಯ ನೀರಾವರಿ ಪ್ರದೇಶದಲ್ಲಿ ಬೆಳೆದಿರುವ ಷುಗರ್‌ ಕ್ವೀನ್‌ ಕಲ್ಲಂಗಡಿ ಹಣ್ಣುಗಳನ್ನು ವ್ಯಾಪಾರಿಗಳು ತಂದು ಮಾರಾಟ ಮಾಡುತ್ತಿದ್ದಾರೆ. 
 
1 ಕೆಜಿ ಕಲ್ಲಂ ಗಡಿಗೆ ₹ 10 ಬೆಲೆ ಇದೆ. ಬಿಸಿಲಿನ ಬೇಗೆ ಉಲ್ಬಣಿಸುತ್ತಿರುವ ಪರಿಣಾಮ ಕಲ್ಲಂಗಡಿ ಹಣ್ಣಿನ ಬೆಲೆ ಮತ್ತಷ್ಟು ಏರಿಕೆಯಾದರೂ ಅಚ್ಚರಿಪಡುವಂತಿಲ್ಲ. ಕರಬೂಜ ಹಣ್ಣು ಕೂಡ ಮಾರು ಕಟ್ಟೆಗೆ ಲಗ್ಗೆ ಇಟ್ಟಿದೆ. ಗಾತ್ರಕ್ಕೆ ಅನುಗುಣ ವಾಗಿ ಬೆಲೆ ನಿಗದಿಪಡಿಸಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚಿದೆ.
 
‘ಪ್ರಸ್ತುತ ಬಿಸಿಲಿನ ಝಳ ಸಹಿಸಲು ಆಗುತ್ತಿಲ್ಲ. ಅನಿವಾರ್ಯವಾಗಿ ಕಲ್ಲಂಗಡಿ, ಕರಬೂಜ ಹಣ್ಣಿನ ಜ್ಯೂಸ್‌ ಸೇವನೆ ಮಾಡುವುದು ಅನಿವಾರ್ಯವಾಗಿದೆ. ಈ ಹಣ್ಣಿನಿಂದ ತಯಾರಿಸುವ ಜ್ಯೂಸ್‌ ಬೆಲೆಯೂ ಹೆಚ್ಚಿದೆ’ ಎನ್ನುತ್ತಾರೆ ಗ್ರಾಹಕ ಅಭಿಷೇಕ್. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.