ADVERTISEMENT

ದಿಡ್ಡಳ್ಳಿ ಹೋರಾಟಗಾರ್ತಿ ಮುತ್ತಮ್ಮ, ಪುತ್ರರ ಬಂಧನ

​ಪ್ರಜಾವಾಣಿ ವಾರ್ತೆ
Published 12 ಮೇ 2017, 9:50 IST
Last Updated 12 ಮೇ 2017, 9:50 IST
ಸಿದ್ದಾಪುರ: ಸಿಸಿಟಿವಿ ಕ್ಯಾಮೆರಾ ಕಳ್ಳತನ ಮತ್ತು ವಿಚಾರಣೆಗೆ ಬಂದ ಪೊಲೀಸರಿಗೆ ನಿಂದನೆ ಆರೋಪದ ಮೇಲೆ ದಿಡ್ಡಳ್ಳಿ ನಿರಾಶ್ರಿತರ ಪರ ಹೋರಾಟ ನಡೆಸಿದ್ದ ಗಿರಿಜನ ಮಹಿಳೆ ಮುತ್ತಮ್ಮ ಮತ್ತು ಆಕೆಯ ಇಬ್ಬರು ಪುತ್ರರನ್ನು ಪೊಲೀಸರು ಬಂಧಿಸಿದ್ದಾರೆ.
 
ಮುತ್ತಮ್ಮ ಮತ್ತು ಆಕೆಯ ಪುತ್ರ ರಾದ ದಿನೇಶ್ ಮತ್ತು ಪ್ರವೀಣ್‌ರನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಗಳು ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.
 
ದಿಡ್ಡಳ್ಳಿ  ಆಶ್ರಮ ಶಾಲೆ ಪ್ರದೇಶ ದಲ್ಲಿ ಸಮಗ್ರ ಗಿರಿಜನ ಇಲಾಖೆ ಅಳ ವಡಿಸಿದ್ದ ಸಿಸಿಟಿವಿ ಕ್ಯಾಮೆರಾ ಅಪಹರಣ ಸಂಬಂಧ ಇವರನ್ನು ಬಂಧಿಸಿದ್ದು, ಸಮಗ್ರ ಗಿರಿಜನ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್ ಈ ಕುರಿತು ದೂರು ನೀಡಿದ್ದರು.
 
ಕಳವು ಪ್ರಕರಣ ಸಂಬಂಧ ಐಪಿಸಿ ಸೆಕ್ಷನ್ 376, 427ರ ಅನ್ವಯ ಹಾಗೂ ತನಿಖೆಗೆ ತೆರಳಿದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ನಿಂದಿಸಿದ ಸಂಬಂಧ ಮೊಕದ್ದಮೆ ದಾಖಲು ಮಾಡಲಾಗಿದೆ.
 
ದಿಡ್ಡಳ್ಳಿ ಹೋರಾಟದ ಪ್ರದೇಶದಲ್ಲಿ ಚಲನವಲನ ಗಮನಿಸಲು ಜಿಲ್ಲಾಡಳಿತ ಇಲ್ಲಿ 5 ಸಿಸಿಟಿವಿ ಕ್ಯಾಮೆರಾ ಅಳವಡಿಸಿತ್ತು. ಹೋರಾಟ ಬಗೆಹರಿದು ನಿರಾಶ್ರಿತರು ಪರ್ಯಾಯ ಸ್ಥಳ ಬ್ಯಾಡಗೂಟ್ಟಕ್ಕೆ ತೆರಳಿದಾಗ, ಮುತ್ತಮ್ಮ ಅಲ್ಲಿಗೆ ಹೋಗಿದ್ದರು.
 
ಬುಧವಾರ ಬ್ಯಾಡಗೊಟ್ಟದಿಂದ ಮರಳಿ ದಿಡ್ಡಳ್ಳಿಯ ತನ್ನ ನಿವಾಸಕ್ಕೆ ಆಗಮಿಸಿದ್ದರು. ಗುರುವಾರ ಮುಂಜಾನೆ ಆಶ್ರಮ ಶಾಲೆ ಮುಂಭಾಗ ಇಲಾಖೆ ಅಳವಡಿಸಿದ್ದ ಕ್ಯಾಮೆರಾ ನಾಪತ್ತೆ, ನೀರಿನ ಪೈಪ್‌ಲೈನ್‌ ಒಡೆದಿರುವುದು ಶಾಲೆ ಸಿಬ್ಬಂದಿ ಗಮನಕ್ಕೆ ಬಂದಿದೆ.
 
ಸ್ಥಳಕ್ಕೆ ಬಂದ ಐಟಿಡಿಪಿ ಅಧಿಕಾರಿ ಚಂದ್ರಶೇಖರ್, ಇನ್ನೊಂದು ಕ್ಯಾಮೆರಾ ದಲ್ಲಿ ದಾಖಲಾಗಿದ್ದ ದೃಶ್ಯ ಗಮನಿಸಿದ್ದಾರೆ. ಗ್ರಾಮಸ್ಥರ ವಿಚಾರಣೆ ನಡೆಸಿ ಇದು ಮುತ್ತಮ್ಮನ ಮಕ್ಕಳ ಕೃತ್ಯ ಎಂದು ತಿಳಿದಿದ್ದು, ದೂರು ನೀಡಿದ್ದಾರೆ.
 
‘ಆರೋಪಿಗಳ ಬಂಧಿಸುವಾಗ ಮುತ್ತಮ್ಮ  ಅಧಿಕಾರಿಗಳು, ಸಿಬ್ಬಂದಿಗೆ  ನಿಂದಿಸಿ, ಅಡ್ಡಿಪಡಿಸಿದರು’ ಎಂದು ಸಬ್‌ಇನ್ಸ್‌ಪೆಕ್ಟರ್ ಸುಬ್ರಹ್ಮಣ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.