ADVERTISEMENT

ನರೇಗಾ ಯೋಜನೆಯಡಿ ಕೆಲಸ ನೀಡಿ

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಮೇ 2017, 6:19 IST
Last Updated 22 ಮೇ 2017, 6:19 IST
ಜಿಲ್ಲೆಗೆ ಶನಿವಾರ ಭೇಟಿ ನೀಡಿದ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ವಿವಿಧ ಯೋಜನೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು
ಜಿಲ್ಲೆಗೆ ಶನಿವಾರ ಭೇಟಿ ನೀಡಿದ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ವಿವಿಧ ಯೋಜನೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು   

ಚಾಮರಾಜನಗರ: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಯ ಜನರಿಗೆ ಹೆಚ್ಚಿನ ಉದ್ಯೋಗ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಜಿಲ್ಲೆಯ ಬರ ಪರಿಸ್ಥಿತಿ ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಸತತ ಬರಗಾಲ ಆವರಿಸಿದೆ. ಹಾಗಾಗಿ, ಹಲವೆಡೆ ಗೋಶಾಲೆ ತೆರೆಯಲಾಗಿದೆ. ಗೋಶಾಲೆಗೆ ಜಾನುವಾರು ಕರೆತರುವವರಿಗೆ ಅದರ ಸಮೀಪದಲ್ಲಿಯೇ ನರೇಗಾ ಯೋಜನೆ ಯಡಿ ಉದ್ಯೋಗಾವಕಾಶ ಕಲ್ಪಿಸಬೇಕು. ಇದರಿಂದ ಜನರ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲಿದೆ. ಈ ಸಂಬಂಧ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳು ಕೂಡಲೇ ಕ್ರಮವಹಿಸಬೇಕು ಎಂದು ನಿರ್ದೇಶನ ನೀಡಿದರು.

ಮೇವು ಬೆಳೆಯುವಂತೆ ರೈತರನ್ನು ಉತ್ತೇಜಿಸಬೇಕು. ಮೇವು ಕಿಟ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ವಿತರಿಸುವ ಜತೆಗೆ, ಸೌಲಭ್ಯಗಳನ್ನು ಒದಗಿಸಬೇಕು. ಅಗತ್ಯ ವಾದಷ್ಟು ಮೇವು ಬೆಳೆದು ಸ್ಥಳೀಯವಾಗಿ ಬಳಸಲು ಶೀಘ್ರ ಕ್ರಮವಹಿಸಬೇಕು. ಮೇವಿನ ಅಭಾವ ತಲೆದೋರದಂತೆ ಎಚ್ಚರವಹಿಸಬೇಕು ಎಂದರು.

ಕುಡಿಯುವ ನೀರು ಪೂರೈಸಿ: ಪ್ರಗತಿ ಯಲ್ಲಿರುವ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ಶೀಘ್ರವೇ ಪೂರ್ಣಗೊಳಿಸಿ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು. ಯಾವುದೇ ಕಾರಣಕ್ಕೂ ಜನರಿಗೆ ನೀರಿನ ತೊಂದರೆ ಉಂಟಾಗದಂತೆ ನೋಡಿ ಕೊಳ್ಳಬೇಕು ಎಂದು ತಿಳಿಸಿದರು.

ಸಾಮಾಜಿಕ ಭದ್ರತಾ ಯೋಜನೆ ಯಡಿ ಫಲಾನುಭವಿಗಳು ಪಿಂಚಣಿ, ಮಾಸಾಶನ ಪಡೆಯಲು ಅನುಕೂಲ ವಾಗುವಂತೆ ಆಧಾರ್ ಸಂಖ್ಯೆ ಜೋಡಣೆ ಕಾರ್ಯವನ್ನು ನಿಗದಿಯೊಳಗೆ ಪೂರ್ಣ ಗೊಳಿಸಬೇಕು ಎಂದು ಸೂಚಿಸಿದರು.

ಶೌಚಾಲಯ ನಿರ್ಮಾಣ: ಸ್ವಚ್ಛ ಭಾರತ ಅಭಿಯಾನದಡಿ ಜಿಲ್ಲೆಯಲ್ಲಿ ಸಾಕಷ್ಟು ಶೌಚಾಲಯ ನಿರ್ಮಾಣ ಮಾಡಲಾಗಿದ್ದು, ಇದು ಬಳಕೆಯಾಗಬೇಕು. ಶೌಚಾಲಯ ಬಳಕೆ ಉತ್ತೇಜಿಸಲು ಶಾಲಾ ಮಕ್ಕಳನ್ನು ಉಪಯೋಗಿಸಿಕೊಳ್ಳಬೇಕು. ಶೌಚಾಲಯ ಬಳಕೆಯ ಅನುಕೂಲತೆಗಳ ಬಗ್ಗೆ ಮಕ್ಕಳಿಗೆ ತಿಳಿಸುವ ಮೂಲಕ, ಅವರ ಪೋಷಕರಿಗೂ ಈ ಬಗ್ಗೆ ಅರಿವು ಮೂಡಿಸುವಂತೆ ಶಿಕ್ಷಕರಿಗೆ ಸೂಚಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಬಿ.ರಾಮು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ. ಹರೀಶ್‌ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ, ಉಪ ವಿಭಾಗಾಧಿಕಾರಿ ಎಂ.ಜಿ.ರೂಪಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಅಭಿವೃದ್ಧಿ ಕಾಮಗಾರಿ ಪರಿಶೀಲನೆ
ಚಾಮರಾಜನಗರ:
ಜಿಲ್ಲೆಯಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಯೋಜನೆ ಹಾಗೂ ಕಾಮಗಾರಿ ಸ್ಥಳಕ್ಕೆ ಟಿ.ಎಂ.ವಿಜಯಭಾಸ್ಕರ್ ಭೇಟಿ ನೀಡಿ ಪರಿಶೀಲಿಸಿದರು.

ಶನಿವಾರ ಬೆಳಿಗ್ಗೆಯಿಂದಲೇ ಕಾಮಗಾರಿ ವೀಕ್ಷಣೆ ಆರಂಭಿಸಿದ ಅವರು, ಮೊದಲಿಗೆ ಹರದನಹಳ್ಳಿಯ ಮರಗದ ಕೆರೆ, ಬಂಡಿಗೆರೆಯ ಕೆರೆ ಪರಿಶೀಲಿಸಿದರು. ಈ ವೇಳೆ ಸ್ಥಳೀಯರೊಂದಿಗೆ ಮಾತನಾಡಿ ಶೌಚಾಲಯ, ಪಡಿತರ ವಿತರಣೆ, ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದ ಬಗ್ಗೆ ವಿಚಾರಿಸಿದರು.

ಬಳಿಕ, ಉದ್ಯೋಗ ಖಾತರಿ ಯೋಜನೆಯಡಿ ನಿರ್ವಹಿಸಲಾಗುತ್ತಿರುವ ಕಾಮಗಾರಿ ಪರಿಶೀಲಿಸಿದರು. ಗಂಗಾ ಕಲ್ಯಾಣ ಯೋಜನೆಯಡಿ ಪ್ರಯೋಜನ ಪಡೆದಿರುವ ಫಲಾನುಭವಿಯೊಬ್ಬರ ತೋಟ ವೀಕ್ಷಿಸಿದರು.

ಹುತ್ತೂರು ಗೋಶಾಲೆ ಭೇಟಿ ನೀಡಿದರು. ಈ ವೇಳೆ ಜಾನುವಾರು ಮಾಲೀಕರಿಂದ ಅಹವಾಲು ಆಲಿಸಿದರು. ಬೊಮ್ಮಲಾಪುರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ಹಂಗಳ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೈಗೊಂಡಿರುವ ಕಲ್ಯಾಣಿ ನವೀಕರಣ ಕಾಮಗಾರಿ, ತೆರಕಣಾಂಬಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಮೇಲುಕಾಮನಹಳ್ಳಿಯಲ್ಲಿ ಗಿರಿಜನರಿಗೆ ನಿರ್ಮಿಸಲಾಗಿರುವ ಮನೆಗಳ ವೀಕ್ಷಣೆ ಮಾಡಿದರು.

ಹರವೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸುಜಲ ಕಾಮಗಾರಿ, ಕೃಷಿ ಹೊಂಡ, ನಿರ್ಮಾಣ ಹಂತದಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ, ಪುತ್ತನ ಪುರ ಗ್ರಾಮ ಪಂಚಾಯಿತಿ ಕಚೇರಿ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಭೇಟಿ ನೀಡಿದರು.

ADVERTISEMENT

*
ನರೇಗಾ ಯೋಜನೆಯಡಿ ಜನರಿಗೆ ಉದ್ಯೋಗ ಅವಕಾಶ ಕ್ಕಾಗಿ ಸಮುದಾಯ ಕಾಮಗಾರಿಯನ್ನು ಹೆಚ್ಚು ತೆಗೆದುಕೊಳ್ಳಬೇಕು. ಇದು ಮಾನವ ದಿನಗಳ ಸೃಜನೆಗೆ ಪೂರಕ.
-ಟಿ.ಎಂ.ವಿಜಯಭಾಸ್ಕರ್,
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.