ADVERTISEMENT

ನಾಳೆಯಿಂದ ಭತ್ತ ಖರೀದಿ ಆರಂಭ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 8:37 IST
Last Updated 12 ಜನವರಿ 2017, 8:37 IST

ಚಾಮರಾಜನಗರ: ಬೆಂಬಲ ಬೆಲೆ ಯೋಜನೆಯಡಿ ರೈತರು, ಬೆಳೆಗಾರರಿಂದ ಭತ್ತ ಖರೀದಿಸಲು ಜ. 13ರಿಂದ ಸಂತೇಮರಹಳ್ಳಿ ಹಾಗೂ ಕೊಳ್ಳೇಗಾಲದ ಎಪಿಎಂಸಿ ಆವರಣದಲ್ಲಿ ಖರೀದಿ ಕೇಂದ್ರ ಪ್ರಾರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಬಿ. ರಾಮು ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂಟಲ್‌ಗೆ ₹ 1,470 ದರ ಘೋಷಿಸಿದೆ. ರಾಜ್ಯ ಸರ್ಕಾರದ ₹ 100 ಪ್ರೋತ್ಸಾಹ ಧನ ನೀಡಿ ಪ್ರತಿ ಕ್ವಿಂಟಲ್‌ಗೆ ₹ 1,570  ದರದಡಿ ಖರೀದಿ ಕೇಂದ್ರಗಳಲ್ಲಿ ರೈತರು ಮತ್ತು ಬೆಳೆಗಾರರಿಂದ ಖರೀದಿಸಲಾಗುತ್ತದೆ.

ಗ್ರೇಡ್ ‘ಎ’ ಭತ್ತಕ್ಕೆ ಕೇಂದ್ರ ಸರ್ಕಾರ ₹ 1,510 ಬೆಲೆ ನಿಗದಿಪಡಿಸಿದೆ. ರಾಜ್ಯ ಸರ್ಕಾರ ಇದಕ್ಕೆ ₹ 60 ರೂಪಾಯಿ ಪ್ರೋತ್ಸಾಹಧನ ನೀಡುತ್ತಿದ್ದು, ₹ 1,570 ದರದಲ್ಲಿ ಖರೀದಿಸಲಾಗುತ್ತದೆ.

ಭತ್ತ ಖರೀದಿಸುವ ವೇಳೆ ರೈತರು, ಬೆಳೆಗಾರರು ಸರ್ವೇ ನಂಬರಿನ ಪ್ರಸಕ್ತ ಸಾಲಿನ ಪಹಣಿ ಪತ್ರ, ಕಂದಾಯ ಇಲಾಖೆಯಿಂದ ಪಡೆದಿರುವ ಬೆಳೆ ದೃಢೀಕರಣ ಪತ್ರ ಹಾಗೂ ಅಂದಾಜು ಇಳುವರಿ ಪತ್ರ ಹಾಜರುಪಡಿಸಬೇಕು.

ವಿಳಾಸ ದೃಢೀಕರಿಸುವ ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್‌ನಂತಹ ದಾಖಲೆಯ ಜೆರಾಕ್ಸ್ ಪ್ರತಿ, ರೈತರ ಹೆಸರು, ಭಾವಚಿತ್ರ ಇರುವ ಹನ್ನೊಂದು ಸಂಖ್ಯೆ ಒಳಗೊಂಡ ಬ್ಯಾಂಕ್ ಖಾತೆ ಸಂಖ್ಯೆ, ಐಎಫ್ಎಸ್‌ಸಿ ಕೋಡ್ ಇರುವ ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ ಹಾಜರುಪಡಿಸಬೇಕು.

ಭತ್ತ ಖರೀದಿಸಿದ ಬಳಿಕ ರೈತರ ಖಾತೆಗೆ ಆರ್‌ಟಿಜಿಎಸ್ ಮೂಲಕ ನಿಗದಿಪಡಿಸಿದ ಹಣ ಜಮೆಯಾಗಲಿದೆ. ಖರೀದಿಗೆ ಮುಂಚೆ ಎಫ್ಎಕ್ಯೂ ಗುಣಮಟ್ಟ ದೃಢೀಕರಿಸಿಕೊಳ್ಳಲಾಗುತ್ತದೆ. ಇದಕ್ಕಾಗಿ ಖರೀದಿ ಕೇಂದ್ರಕ್ಕೆ ಕೃಷಿ ಇಲಾಖೆಯ ಗ್ರೇಡರ್‌ಗಳನ್ನು ನೇಮಿಸಲಾಗಿದೆ.

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು ಖರೀದಿ ಏಜೆನ್ಸಿಯಾಗಿದೆ. ಖರೀದಿ ಕೇಂದ್ರಗಳ ಸ್ಥಾಪನೆಗೆ ಕೆಎಫ್‌ಸಿಎಸ್‌ಸಿ ಎಲ್ಲ ಕ್ರಮಕೈಗೊಂಡಿದೆ.
ಖರೀದಿ ಕೇಂದ್ರಗಳ ಸಿಬ್ಬಂದಿ ನೇಮಕ ಹಾಗೂ ಗುಣಮಟ್ಟದ ಗೋದಾಮುಗಳ ನಿರ್ವಹಣೆಗೆ ಸೂಚಿಸಲಾಗಿದೆ.

ಜಿಲ್ಲೆಯ ರೈತರು ಸರ್ಕಾರದ ಕನಿಷ್ಠ ಬೆಂಬಲ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.