ADVERTISEMENT

ನೋಟು ರದ್ಧತಿ ಹಿಂದಿನ ರಹಸ್ಯ ತಿಳಿಸಿ

ಜಿಲ್ಲಾ ಉಸ್ತುವಾರಿ ಸಚಿವ ಆಗ್ರಹ; 7ರಂದು ಧರಣಿ, 9ರಂದು ಜಾಗಟೆ ಚಳವಳಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2017, 9:54 IST
Last Updated 3 ಜನವರಿ 2017, 9:54 IST

ಚಾಮರಾಜನಗರ: ‘ಪ್ರಧಾನಿ ನರೇಂದ್ರ ಮೋದಿ ಗರಿಷ್ಠ ಮುಖಬೆಲೆ ನೋಟುಗಳ ಚಲಾವಣೆ ರದ್ದುಪಡಿಸಿದ ಹಿಂದಿನ ಸತ್ಯವನ್ನು ಬಹಿರಂಗಪಡಿಸಬೇಕು’ ಎಂದು ಒತ್ತಾಯಿಸಿ ಜ. 7ರಂದು ಜಿಲ್ಲಾಡಳಿತ ಮುಂಭಾಗ ಕಾಂಗ್ರೆಸ್‌ ಜಿಲ್ಲಾ ಸಮಿತಿ ಪ್ರತಿಭಟನೆ ನಡೆಸಲಿದೆ.

ಕೇಂದ್ರವನ್ನು ಎಚ್ಚರಿಸಲು ಜ.9ರಂದು ಯುವ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್‌ ನಗರದಲ್ಲಿ ಜಾಗಟೆ ಚಳವಳಿ ನಡೆಯಲಿದೆ ಎಂದು ಸಹಕಾರ ಮತ್ತು ಸಕ್ಕರೆ ಸಚಿವ ಎಚ್.ಎಸ್. ಮಹದೇವಪ್ರಸಾದ್‌ ಸೋಮವಾರ ತಿಳಿಸಿದರು.

‘ನೋಟು ರದ್ಧತಿಯ ಪರಿಣಾಮ ಕುರಿತು ಕಾಂಗ್ರೆಸ್‌ ಪಕ್ಷ 5 ಪ್ರಶ್ನೆ ಮತ್ತು 5 ಬೇಡಿಕೆಯನ್ನು ಕೇಂದ್ರದ ಮುಂದಿಟ್ಟಿದೆ. ಪ್ರಧಾನಿ ಮೋದಿ ಇದಕ್ಕೆ ಉತ್ತರಿಸಬೇಕು’ ಎಂದು ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ದೇಶದಲ್ಲಿ ₹ 17ಲಕ್ಷ ಕೋಟಿ ಮೌಲ್ಯದ ನೋಟುಗಳ ಚಲಾವಣೆ ಇದೆ. ಇದರಲ್ಲಿ ₹ 500, ₹ 1ಸಾವಿರ ಮುಖ ಬೆಲೆಯ ನೋಟುಗಳ ಪಾಲು ₹ 15ಲಕ್ಷ ಕೋಟಿ. ಶೇ 80ರಷ್ಟು ಚಲಾವಣೆ ರದ್ದಾಗಿದೆ’ ಎಂದರು.

ಭಯೋತ್ಪಾದನೆ ತಡೆ, ಕಪ್ಪುಹಣ ದಂಧೆ ನಿಯಂತ್ರಣಕ್ಕೆ ಸಹಕಾರ ನೀಡಿ ಎಂಬ ಪ್ರಧಾನಿ ಮಾತು ಸ್ವಾಗತಿಸಿ ಜನ 50 ದಿನ ಸಮಯ ನೀಡಿದರು. ಆದರೆ, ಯಾವುದೇ ಬದಲಾವಣೆಯಾಗಿಲ್ಲ ಎಂದು ಟೀಕಿಸಿದರು.

ನೋಟು ರದ್ಧತಿಯಿಂದದಾಗಿ ಜನರು ಬ್ಯಾಂಕ್‌ಗಳಲ್ಲಿ ತಮ್ಮದೇ ಹಣ ಪಡೆಯಲು ಆಗುತ್ತಿಲ್ಲ. ಎಟಿಎಂ, ಬ್ಯಾಂಕ್‌ಗಳ ಮುಂದೆ ಸಾಲಿನಲ್ಲಿ ನಿಲ್ಲುವಂತಾಗಿದೆ ಎಂದರು. ನೋಟು ರದ್ಧತಿ  ಕುರಿತು ಆರ್‌ಬಿಐ ಜತೆ ಪ್ರಧಾನಿ ಚರ್ಚಿಸಿದ್ದಾರೆಯೇ? ತಜ್ಞರ ಸಲಹೆ ಪಡೆಯಲಾಗುತ್ತಿದೆಯೇ ಎಂದು ಜನರಿಗೆ ತಿಳಿಸಬೇಕು. ಬ್ಯಾಂಕ್‌ಗಳಲ್ಲಿ ದೊಡ್ಡ ಮೊತ್ತ ಠೇವಣಿ ಇಟ್ಟಿರುವವವರ ಹೆಸರು ಬಹಿರಂಗಪಡಿಸಬೇಕು ಎಂದು ಆಗ್ರಹಪಡಿಸಿದರು.

ಶೇ 18 ಬಡ್ಡಿ ನೀಡಲಿ: ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿರುವ ಸಾಮಾನ್ಯರ ಹಣಕ್ಕೆ ಶೇ 18ರಷ್ಟು ವಿಶೇಷ ಬಡ್ಡಿ ನೀಡಬೇಕು. ಹಿಂಗಾರು ಬೆಳೆಗಳಿಗೆ ಎಂಎಸ್‌ಪಿ ಹೆಚ್ಚುವರಿಯಾಗಿ ಶೇ 20ರಷ್ಟು ಬೋನಸ್‌ ನೀಡಬೇಕು. ನೋಟು ರದ್ಧತಿ ಬಳಿಕ ಕೆಲಸ ಕಳೆದುಕೊಂಡ ಕಾರ್ಮಿಕರಿಗೆ ಮಾ.31ರವರೆಗೆ ಕನಿಷ್ಠ ವೇತನ ನೀಡಬೇಕು ಎಂದು ಒತ್ತಾಯಿಸಿದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿ.ಪಂ ಅಧ್ಯಕ್ಷ ಎಂ. ರಾಮಚಂದ್ರ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಪಿ. ಸದಾಶಿವಮೂರ್ತಿ, ಎಐಸಿಸಿ ವೀಕ್ಷಕ ಉಷಾನಾಯ್ಡು, ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.