ADVERTISEMENT

ಪ್ರಕರಣ ದಾಖಲಿಸಲು ಒತ್ತಾಯ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2017, 8:26 IST
Last Updated 1 ಡಿಸೆಂಬರ್ 2017, 8:26 IST

ಚಾಮರಾಜನಗರ: ಸಂವಿಧಾನಕ್ಕೆ ಅಪಮಾನ ಮಾಡಿರುವ ಬಿಜೆಪಿ ಮುಖಂಡ ಗೋ. ಮಧುಸೂದನ್ ಮತ್ತು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಬಾಬಾ ಸಾಹೇಬ್‌ ಡಾ. ಬಿ.ಆರ್. ಅಂಬೇಡ್ಕರ್‌ ಸಂಘಗಳ ಒಕ್ಕೂಟದಿಂದ ಗುರುವಾರ ಬೃಹತ್‌ ಪ್ರತಿಭಟನೆ ನಡೆಯಿತು.

ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಸಮಾವೇಶ ಗೊಂಡ ನೂರಾರು ಮಂದಿ ಪ್ರತಿಭಟನಾ ಕಾರರು ಭುವನೇಶ್ವರಿ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿದರು. ಬಳಿಕ, ಜಿಲ್ಲಾಡಳಿತ ಭವನಕ್ಕೆ ಮೆರವಣಿಗೆ ತೆರಳಿ ಮಧುಸೂದನ್‌ ಮತ್ತು ವಿಶ್ವೇಶತೀರ್ಥರ ವಿರುದ್ಧ ಘೋಷಣೆಗಳನ್ನು ಕೂಗಿದರು.

ಅಂಬೇಡ್ಕರ್‌ ಅವರು ಬರೆದಿರುವ ಸಂವಿಧಾನವನ್ನು ಒಪ್ಪುವುದಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಗೋ. ಮಧುಸೂದನ್‌ ಅವರು ದೇಶದ ಸಾರ್ವಭೌಮತೆ, ಅಖಂಡತೆ, ಏಕತೆ ಮತ್ತು ಸಮಗ್ರತೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿದರು.

ADVERTISEMENT

ರಾಷ್ಟ್ರಧ್ವಜ, ರಾಷ್ಟ್ರಗೀತೆ ಮತ್ತು ರಾಷ್ಟ್ರಲಾಂಛನದಷ್ಟೇ ಸಂವಿಧಾನವನ್ನೂ ಗೌರವಿಸಬೇಕು. ಸಂವಿಧಾನ ಅವಮಾನಿಸುವುದು ದೇಶದ್ರೋಹದ ಅಪರಾಧವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಡುಪಿಯಲ್ಲಿ ನಡೆದ ಧರ್ಮ ಸಂಸತ್‌ನಲ್ಲಿ ವಿಶ್ವೇಶತೀರ್ಥ ಸ್ವಾಮೀಜಿ ಅವರು ಧರ್ಮದ ಕುರಿತು ಮಾತನಾಡುವುದನ್ನು ಬಿಟ್ಟು, ಸಂವಿಧಾನ ಸರಿಯಿಲ್ಲ. ಅದನ್ನು ಬದಲಿಸಬೇಕು ಎಂದು ಅದರ ಘನತೆಗೆ ಕುಂದು ಬರುವಂತೆ ಹೇಳಿಕೆ ನೀಡಿದ್ದಾರೆ. ಇದು ಖಂಡನೀಯ ಎಂದರು.

ಡಾ. ಬಿ.ಆರ್. ಅಂಬೇಡ್ಕರ್‌ ಒಬ್ಬರೇ ಸಂವಿಧಾನವನ್ನು ಬರೆದಿಲ್ಲ ಎಂದು ಹಗುರವಾಗಿ ಮಾತನಾಡಿರುವುದು ಸರಿಯಲ್ಲ. ಇದು ದೇಶದ ನಾಗರಿಕರಿಗೆ ಮಾಡಿರುವ ಅವಮಾನ. ಸರ್ಕಾರ ಇವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಮಧುಸೂದನ್ ಮತ್ತು ಪೇಜಾವರ ಶ್ರೀಗಳ ವಿರುದ್ಧ ಭಾರತೀಯ ನಾಗರಿಕತ್ವ ಕಾಯ್ದೆ 1955ರ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು. ಅವರು ಸಂವಿಧಾನದತ್ತವಾಗಿ ಪಡೆದು ಕೊಂಡಿರುವ ಸವಲತ್ತು ಮತ್ತು ಆಸ್ತಿಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. ಅವರ ಪೌರತ್ವವನ್ನು ರದ್ದುಗೊಳಿಸಿ ದೇಶದಿಂದ ಗಡಿಪಾರು ಮಾಡಬೇಕು ಎಂದು ಅವರು ಆಗ್ರಹಿಸಿದರು.

ಬಳಿಕ, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ, ರಾಜ್ಯಪಾಲ, ಪ್ರಧಾನಿ ಮತ್ತು ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಒಕ್ಕೂಟದ ಮುಖಂಡರಾದ ಉಮೇಶ್‌ ಕುದರ್‌, ಆಲೂರು ನಾಗೇಂದ್ರ, ಮಹೇಶ್‌ ಎನ್‌., ಶಿವಮೂರ್ತಿ ಬಿ., ಕುಮಾರ್‌ ಎಂ., ಬದನಗುಪ್ಪೆ ಮಹೇಶ್‌, ಎಂ. ಸಿದ್ದರಾಜು, ಸಿ. ರಾಜಣ್ಣ, ಜೀವನ್ ಎಸ್‌., ಮಹೇಂದ್ರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ದಲಿತ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.