ADVERTISEMENT

ಪ್ರಾಣಿಬಲಿ ತಡೆಯಲು ಕಟ್ಟುನಿಟ್ಟಿನ ಕ್ರಮ

ಚಿಕ್ಕಲ್ಲೂರು ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಉಪವಿಭಾಗಾಧಿಕಾರಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2016, 9:14 IST
Last Updated 30 ಡಿಸೆಂಬರ್ 2016, 9:14 IST

ಕೊಳ್ಳೇಗಾಲ: ‘ಚಿಕ್ಕಲ್ಲೂರು ದೇವಾಲಯ ಕೇಂದ್ರ ಬಿಂದುವಾಗಿಸಿ 1 ಕಿ.ಮೀ ಸುತ್ತಲು ತಡೆಬೇಲಿ ನಿರ್ಮಿಸಿ 3 ಕಡೆಗಳಲ್ಲಿ ಪ್ರವೇಶ ದ್ವಾರ ಚೆಕ್‌ಪೋಸ್ಟ್‌ ನಿರ್ಮಿಸಿ ಯಾವುದೇ ಪ್ರಾಣಿಬಲಿ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಉಪವಿಭಾಗಾಧಿಕಾರಿ ನಳಿನ್‌ ಅತುಲ್‌ ತಿಳಿಸಿದರು.

ನಗರದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಚಿಕ್ಕಲ್ಲೂರು ಜಾತ್ರೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇವಾಲಯದ ಬಳಿ 200 ಮೀ. ವ್ಯಾಪ್ತಿಯೊಳಗೆ ಯಾವುದೇ ಅಂಗಡಿ ಮುಂಗಟ್ಟುಗಳನ್ನು ತೆರೆಯಬಾರದು. ಭಕ್ತರು ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಲು ನೂಕುನುಗ್ಗಲು ಉಂಟಾಗದಂತೆ ಕ್ರಮಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು.

ಮುತ್ತತ್ತಿ ಕಡೆಯಿಂದ ಅರಣ್ಯದ ಮೂಲಕ ಹಾದು ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಇತರೆ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಬೇಕು.

ಅಗ್ನಿ ಅವಘಡ ಸಂಭವಿಸದಂತೆ ಅಗ್ನಿಶಾಮಕ ದಳ ಅಧಿಕಾರಿಗಳು  ಹೆಚ್ಚಿನ ಗಮನ ಹರಿಸುವಂತೆ ಸೂಚಿಸಲಾಯಿತು. ಜಿಲ್ಲಾ ಪಂಚಾಯಿತಿ ವತಿಯಿಂದ 6 ಟ್ಯಾಂಕರ್‌ಗಳಲ್ಲಿ ಕುಡಿಯುವ ನೀರು ಪೂರೈಸಲು. ರಸ್ತೆ ಬದಿಯ ಜಂಗಲ್‌ ಕಟಿಂಗ್‌ ಮತ್ತು ರಸ್ತೆ ಹಳ್ಳಕೊಳ್ಳಗಳ ದುರಸ್ತಿಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕ್ರಮವಹಿಸಲು ತಿಳಿಸಲಾಯಿತು.

ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವುದರಿಂದ ವಿವಿಧ ಸ್ಥಳಗಳ ಬಗ್ಗೆ ಸೌಲಭ್ಯಗಳ ಕುರಿತು ಮಾಹಿತಿ ನೀಡುವ ಫಲಕಗಳನ್ನು ಅಳವಡಿಸ ಬೇಕು, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಅಗತ್ಯ ಬಸ್‌ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ ಸಭೆಯಲ್ಲಿ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಯಿತು.

ಸಿಪಿಐ ಅಮರನಾರಾಯಣ್‌, ತಹಶೀಲ್ದಾರ್‌ ಕಾಮಾಕ್ಷಮ್ಮ, ಹನೂರು ವಿಶೇಷ ತಹಶೀಲ್ದಾರ್‌ ಮಹೇಶ್‌, ಜಿಲ್ಲಾ ಪಂಚಾಯಿತಿ ಎಇಇ ಶ್ರೀಧರ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ದರ್ಶನ್‌, ಭೂಮಾಪನಾ ಇಲಾಖೆ ಸೋಮಸುಂದರಂ, ಚಿಕ್ಕಲ್ಲೂರು, ತೆಳ್ಳನೂರು ಗ್ರಾ.ಪಂ. ಪಿಡಿಒ, ಕಾರ್ಯದರ್ಶಿಗಳು ಚಿಕ್ಕಲ್ಲೂರು ಹೊಸಮಠದ  ಪಿ.ಕೆ. ಸೋಮು, ಸಿದ್ದಪ್ಪಾಜಿ, ಬಸವರಾಜು ಸೇರಿದಂತೆ ಇತರೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.