ADVERTISEMENT

‘ಬಯಲು ಶೌಚ ಮುಕ್ತ ಗ್ರಾಮ ನಿರ್ಮಾಣಕ್ಕೆ ಸಹಕರಿಸಿ’

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2017, 6:57 IST
Last Updated 22 ನವೆಂಬರ್ 2017, 6:57 IST

ಸಂತೇಮರಹಳ್ಳಿ: ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಗ್ರಾಮಗಳನ್ನು ಬಯಲು ಶೌಚ ಮುಕ್ತಗೊಳಿಸುವ ನಿಟ್ಟಿನಲ್ಲಿ ಸದಸ್ಯರು ಸಹಕಾರ ನೀಡಬೇಕು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮೇಗೌಡ ತಿಳಿಸಿದರು.

ಇಲ್ಲಿನ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಈಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಗ್ರಾಮ ಪಂಚಾಯಿತಿಯನ್ನು ಬಯಲು ಶೌಚ ಮುಕ್ತಗೊಳಿಸಬೇಕೆಂದು ಜಿಲ್ಲಾ ಪಂಚಾಯಿತಿಯು ಕಳೆದ ಎರಡು ತಿಂಗಳ ಹಿಂದೆ ಆದೇಶ ನೀಡಿತ್ತು. ಇದನ್ನು ಯಶಸ್ವಿಗೊಳಿಸುವಲ್ಲಿ ಸದಸ್ಯರು ತಮ್ಮ ಗ್ರಾಮಗಳ ವ್ಯಾಪ್ತಿಯಲ್ಲಿ ಶೌಚಾಲಯ ಇಲ್ಲದ ಮನೆಗಳನ್ನು ಗುರುತಿಸಿ ಅವರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ 6 ಗ್ರಾಮಗಳ ಪೈಕಿ ಕೆಲವು ಗ್ರಾಮಗಳಲ್ಲಿ ಮಾತ್ರ ಶೌಚಾಲಯ ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನು ಕೆಲವು ಗ್ರಾಮಗಳಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಲು ಅರಿವು ಮೂಡಿಸಬೇಕು. ಶೌಚಾಲಯ ಪೂರ್ಣಗೊಳಿಸಿದ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ವಿಳಂಬವಾಗಿರುವವರಿಗೆ ಆದಷ್ಟು ಬೇಗ ಅನುದಾನ ಒದಗಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ADVERTISEMENT

2016–17ನೇ ಸಾಲಿನಲ್ಲಿ ಅಂಬೇಡ್ಕರ್ ಅವಾಸ್, ಪ್ರಧಾನಮಂತ್ರಿ ಅವಾಸ್ ಹಾಗೂ ಬಸವ ವಸತಿ ಯೋಜನೆಯಲ್ಲಿ 96 ಮನೆಗಳು ಮಂಜೂರಾಗಿದ್ದು, ಈಗಾಗಲೇ ಗ್ರಾಮಗಳಲ್ಲಿ ಗ್ರಾಮಸಭೆ ಹಾಗೂ ವಾರ್ಡ್ ಸಭೆ ಮೂಲಕ ಫಲಾನುಭವಿಗಳಿಂದ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಫಲಾನುಭವಿಗಳ ಆಯ್ಕೆ ಸಂಬಂಧ ಸದಸ್ಯರ ಸಮ್ಮುಖದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ತಿಳಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ, ಉಪಾಧ್ಯಕ್ಷ ಟಿ.ಎಸ್. ಕುಮಾರ್, ಕಾರ್ಯದರ್ಶಿ ನಾಗರಾಜಪ್ಪ ಹಾಗೂ ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.