ADVERTISEMENT

ಬಾಲ್ಯ ವಿವಾಹ ತಡೆಗೆ ಮಾರ್ಗದರ್ಶನ ಅಗತ್ಯ

​ಪ್ರಜಾವಾಣಿ ವಾರ್ತೆ
Published 11 ಜನವರಿ 2017, 10:11 IST
Last Updated 11 ಜನವರಿ 2017, 10:11 IST

ಚಾಮರಾಜನಗರ: ‘ಜಿಲ್ಲೆಯಲ್ಲಿ ಬಾಲ್ಯವಿವಾಹ ಪದ್ಧತಿ ನಿರ್ಮೂಲನೆಗೆ ಜನರಿಗೆ ಕಾನೂನಿನ ಅರಿವು ಮೂಡಿಸಲು ಮಾರ್ಗದರ್ಶನದ ಅಗತ್ಯ’ ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ಹೇಳಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ನೂತನ ಕೆಡಿಪಿ ಸಭಾಂಗಣದಲ್ಲಿ ‘ಉಷಾ’ ಆಂದೋಲನದ ಮಾರ್ಗದರ್ಶಿ ಶಿಕ್ಷಕರಿಗೆ ಮಂಗಳವಾರ ನಡೆದ ಪುನರ್‌ಮನನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಾಲ್ಯವಿವಾಹ ಹಾಗೂ ಬಾಲ್ಯಾವಸ್ಥೆಯಲ್ಲೆ ಗರ್ಭ ಧರಿಸುವುದರಿಂದ ಸಾಮಾಜಿಕ ಸ್ವಾಸ್ಥ್ಯ ಹದಗೆಡಲಿದೆ. ಮಾನವ ಅಭಿವೃದ್ಧಿ ಸೂಚ್ಯಂಕದ ಮೇಲೂ ನಕಾರಾತ್ಮಕ ಪರಿಣಾಮ ಆಗಲಿದೆ. ‘ಉಷಾ’ ಆಂದೋಲನದಡಿ ನಿಯೋಜನೆಯಾಗಿರುವ ಮಾರ್ಗದರ್ಶಿ ಶಿಕ್ಷಕರು ಇಂಥವರನ್ನು ಗುರುತಿಸಿ ನಿರಂತರ ಸಂವಹನದ ಮೂಲಕ ಕಾನೂನು, ಸಾಮಾಜಿಕ ತಿಳಿವಳಿಕೆ ನೀಡಬೇಕು ಎಂದು ಸಲಹೆ ನೀಡಿದರು.

ಶಾಲಾ ಮಕ್ಕಳು ಬಾಲ್ಯವಿವಾಹಕ್ಕೆ ಗುರಿಯಾಗುವ ಘಟನೆಗಳು ಕಂಡು ಬಂದರೆ ಶಿಕ್ಷಕರು ಕೂಡಲೇ ಮೇಲಧಿಕಾರಿಗಳಿಗೆ ಮಾಹಿತಿ ನೀಡಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳ ಸಮನ್ವಯ ತಂಡ ಇಂಥಹ ಪ್ರಕರಣವನ್ನು ಸೂಕ್ಷ್ಮವಾಗಿ ಭೇದಿಸಿ ಬಾಲ್ಯವಿವಾಹ ತಡೆಗಟ್ಟಬೇಕು. ಆಗ ಮಾತ್ರ ಈ ಪಿಡುಗಿನ ನಿರ್ಮೂಲನೆ ಸಾಧ್ಯ ಎಂದರು.

ಪ್ರತಿ ತಿಂಗಳ 25ರಂದು ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಬಾಲಕಿಯರ ದಿನ ಆಚರಿಸಬೇಕು. ಈ ಕಾರ್ಯಕ್ರಮಕ್ಕೆ ಗ್ರಾಮಸ್ಥರು, ಮುಖಂಡರು, ಸ್ಥಳೀಯ ಚುನಾಯಿತ ಪ್ರತಿನಿಧಿಗಳನ್ನು ಆಹ್ವಾನ ಮಾಡಬೇಕು. ಈ ಮೂಲಕ ಉಷಾ ಆಂದೋಲನದ ಜಾಗೃತಿ ಮೂಡಿಸಬೇಕು ಎಂದರು.

ಉಪವಿಭಾಗಾಧಿಕಾರಿ ನಳಿನ್ ಅತುಲ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಮಂಜುಳಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಸರ್ವೇಶ್ವರ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಸರಸ್ವತಿ, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಬಿ. ರಶ್ಮಿ  ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.