ADVERTISEMENT

ಬಿಜಿನೆಸ್ ಪಾರ್ಕ್‌ನಿಂದ ಪಟ್ಟಣದ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 7:09 IST
Last Updated 12 ಜುಲೈ 2017, 7:09 IST

ಚಾಮರಾಜನಗರ: ನಗರದ ಅಭಿವೃದ್ಧಿ ಹಾಗೂ ವ್ಯಾಪಾರ ವಹಿವಾಟಿನ ವೃದ್ಧಿಯ ದೃಷ್ಟಿಯಿಂದ ಬಿಜಿನೆಸ್ ಪಾರ್ಕ್‌ ನಿರ್ಮಿಸಲಾಗುತ್ತಿದೆ. ಜಮೀನಿನ ಮಾಲೀಕರು ಭೂಮಿ ಬಿಟ್ಟುಕೊಡುವ ಮೂಲಕ ಸಹಕಾರ ನೀಡಬೇಕು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುಹೇಲ್ ಆಲಿಖಾನ್ ಮನವಿ ಮಾಡಿದರು.

ಬಿಜಿನೆಸ್ ಪಾರ್ಕ್‌ ನಿರ್ಮಾಣ ಸಂಬಂಧ ಜಿಲ್ಲಾಡಳಿತ ಭವನದಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಯಲ್ಲಿ ನಡೆದ ಜಮೀನಿನ ಮಾಲೀಕರ ಸಭೆಯಲ್ಲಿ ಅವರು ಮಾತನಾಡಿದರು.

ಬಿಜಿನೆಸ್‌ ಪಾರ್ಕ್‌ಗೆ ಪ್ರಾಧಿಕಾರದಿಂದ ರೈಲ್ವೆ ನಿಲ್ದಾಣ ಬಳಿ ಈಗಾಗಲೇ ಜಾಗ ಗುರುತಿಸಲಾಗಿದೆ. ಇದಕ್ಕಾಗಿ ಈ ವ್ಯಾಪ್ತಿಯಲ್ಲಿ ಬರುವ ಖಾಸಗಿ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಅಗತ್ಯವಿದೆ. ಭೂಮಾಲೀಕರು ಮುಕ್ತ ಮನಸ್ಸಿನಿಂದ ತಮ್ಮ ಜಮೀನುಗಳನ್ನು ಪ್ರಾಧಿಕಾರಕ್ಕೆ ಬಿಟ್ಟುಕೊಟ್ಟರೆ ಅವುಗಳನ್ನು ಅಭಿವೃದ್ಧಿಪಡಿಸಿ ಪ್ರಮುಖ ವ್ಯಾಪಾರ ಸ್ಥಳವನ್ನಾಗಿ ಪರಿವರ್ತಿಸಲಾಗುವುದು ಎಂದರು.

ADVERTISEMENT

‘ಈಗಾಗಲೇ ತಿಳಿಸಿರುವಂತೆ 50:50ರ ಅನುಪಾತ ಅಥವಾ ಪೂರ್ಣ ಜಮೀನಿಗೆ ದರ ನಿಗದಿ ಮಾಡಿ ಹಣ ನೀಡುವುದು, ಈ ಎರಡು ಆಯ್ಕೆಯನ್ನು ನಿಮಗೆ ಬಿಟ್ಟಿದ್ದೇವೆ. ಜಮೀನು ನೀಡುವ ರೈತರಿಗೆ ಎಲ್ಲ ರೀತಿಯಲ್ಲಿ ಅನುಕೂಲ ಕಲ್ಪಿಸುವ ಉದ್ದೇಶವನ್ನು ಪ್ರಾಧಿಕಾರ ಹೊಂದಿದೆ’ ಎಂದು ಭೂಮಾಲೀಕರಿಗೆ ಮನವರಿಕೆ ಮಾಡಿದರು. 

ಕೈಗಾರಿಕಾ ಪ್ರದೇಶ ಅಭಿವೃದ್ಧಿಗಾಗಿ ಸರ್ಕಾರ ಬದನಗುಪ್ಪೆ ಬಳಿ ರೈತರಿಂದ ಜಮೀನು ಖರೀದಿಸಿದೆ. ಅಲ್ಲಿ ನೀಡಿರುವ ದರಕ್ಕಿಂತ ಹೆಚ್ಚಿನ ಪರಿಹಾರ ನೀಡಬೇಕು. ಜಮೀನು ಸ್ವಾಧೀನ ಪಡಿಸಿಕೊಳ್ಳುತ್ತಿದ್ದಂತೆ ರೈತರಿಗೆ ಹಣ ನೀಡಬೇಕು. ಇಲ್ಲಿ ಜಮೀನು ಹೊಂದಿರುವವರೆಲ್ಲರೂ ಕೂಲಿ ಕಾರ್ಮಿಕರಾಗಿದ್ದಾರೆ. ಅವರಿಗೆ ಉತ್ತಮ ಬದುಕು ರೂಪಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದರು.

ಸರ್ವೆ ನಂ. 32, 33, 34, 35, 37 ಮತ್ತು 39ರ ಜಮೀನು ಮಾಲೀಕರನ್ನು ಸಭೆಗೆ ಆಹ್ವಾನಿಸಲಾಗಿತ್ತು. 15 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ 60 ಮಂದಿಯ ಜಮೀನು ಇದೆ. ಮೊದಲ ಸಭೆಗೆ 20 ಮಂದಿ ಮಾತ್ರ ಬಂದಿದ್ದರು. ಮತ್ತೊಮ್ಮೆ ಸಭೆ ಕರೆದು ಎಲ್ಲರನ್ನು ಆಹ್ವಾನಿಸಿ ಅಭಿಪ್ರಾಯ ಪಡೆಯಲಾಗುವುದು.

ಬಳಿಕ ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳಿಗೆ  ವರದಿ ನೀಡಲಾಗುತ್ತದೆ. ಸಮಿತಿ ಸಭೆಯಲ್ಲಿ ಚರ್ಚಿಸಿ ಏಕರೂಪದ ದರ ನಿಗದಿ ಮಾಡಿ, ಭೂಸ್ವಾಧೀನ ಪಡಿಸಿಕೊಳ್ಳುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ  ಎಂದು ಆಯುಕ್ತ ನಿಸಾರ್ ಅಹಮದ್ ತಿಳಿಸಿದರು. ಸಭೆಯಲ್ಲಿ ನಗರ ಯೋಜನಾ ಸದಸ್ಯ ಡಿ. ಲಸುಮಾನಾಯಕ, ಸದಸ್ಯರಾದ ಸುದರ್ಶನ ಗೌಡ, ಶ್ರೀಕಾಂತ್, ಆಶಾ, ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.